ಗಂಡಿಬಾಗಿಲು ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

0


ರಮಳಾನ್ ಪಾವಿತ್ರತೆ ಮುಂದಿನ ದಿನಗಳಿಗೂ ಪ್ರೇರಣೆಯಾಗಲಿ-ಶೌಕತ್ ಆಲಿ ಫೈಝಿ

ಉಪ್ಪಿನಂಗಡಿ: ಅತ್ಯಂತ ಪ್ರಾವಿತ್ರತೆಯ ತಿಂಗಳಲ್ಲಿ ಒಂದಾಗಿರುವ ರಮಳಾನ್ ತಿಂಗಳ ಉಪವಾಸ ವೃತ ಅಂತ್ಯದೊಂದಿಗೆ ಆತ್ಮ ಶುದ್ಧೀಕರಣ ಮತ್ತು ಪರಸ್ಪರ ಸಹೋದರತೆ, ಶಾಂತಿ, ಐಕ್ಯತೆಯ ಪ್ರತೀಕದ ಸಂದೇಶದೊಂದಿಗೆ ಆಚರಿಸಲಿರುವ ಮುಸ್ಲಿಮರ ಪವಿತ್ರ ಈದ್-ಉಲ್-ಫಿತರ್ ಯಾ ಪೆರ್ನಾಳ್ ಹಬ್ಬವನ್ನು ಗಂಡಿಬಾಗಿಲು ಪರಿಸರದ ಮಂದಿ ಸಡಗರ ಸಂಭ್ರಮದೊಂದಿಗೆ ಎ.22ರಂದು ಆಚರಿಸಿದರು.


ಗಂಡಿಬಾಗಿಲು ಜುಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಹಮೀದ್ ಶೌಕತ್ ಆಲಿ ಫೈಝಿ ಖುತುಬಾ ಪಾರಾಯಣ, ವಿಶೇಷ ನಮಾಜು ಮತ್ತು ಪ್ರಾರ್ಥನೆ ನೆರವೇರಿಸಿ ಹಬ್ಬದ ಸಂದೇಶ ನೀಡಿ ಮಾತನಾಡಿ ರಮಳಾನ್ ತಿಂಗಳಿನಲ್ಲಿ ಮಾಡಿರುವ ಪ್ರಾರ್ಥನೆ, ಸತ್ಕರ್ಮಗಳು ಮುಂದಿನ ದಿನಗಳಿಗೆ, ವರ್ಷಪೂರ್ತಿ ಪ್ರೇರಣೆ ಆಗಲಿ. ಆ ಮೂಲಕ ಶಾಂತಿ, ಸೌಹಾರ್ದತೆ, ಐಕ್ಯತೆ ಎಲ್ಲೆಡೆ ನೆಲೆಗೊಳ್ಳಲಿ ಎಂದು ಸಂದೇಶ ಸಾರಿದರು.


ಹಬ್ಬದ ಸಂಭ್ರಮದಲ್ಲಿ ಇನ್ನೊಬ್ಬರಿಗೆ ತೊಂದರೆ ಆಗದ ರೀತಿಯಲ್ಲಿ ವರ್ತಿಸದೆ, ಅನ್ಯರನ್ನು ದೂಷಿಸದೆ, ಅನಾಥರು, ಅಸಹಾಯಕರಿಗೆ ಸಹಾಯಹಸ್ತ ನೀಡಿ ಅವರನ್ನು ಸಂತ್ರಪ್ತಿ ಪಡಿಸುವ ಮೂಲಕ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು ಎಂದರು. ಹಿರಿಯರು, ಕಿರಿಯರೆನ್ನದೆ ಹೊಸ ಬಟ್ಟೆ ಧರಿಸಿದ ಮುಸ್ಲಿಂ ಬಾಂಧವರು ಹಬ್ಬದ ಸಂಭ್ರಮದಲ್ಲಿ ಮೆರೆದರು. ಮಸೀದಿಯಲ್ಲಿ ನಡೆದ ನಮಾಜು, ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

LEAVE A REPLY

Please enter your comment!
Please enter your name here