ಬಿಎಲ್‌ಒ ಹುದ್ದೆ ನಿರ್ವಹಿಸಲು ಸಾಧ್ಯವಿಲ್ಲವೆಂದು ಪತ್ರ ನೀಡಿದ್ದರೂ ಅಂಗನವಾಡಿ ಕಾರ್ಯಕರ್ತೆ ಅಮಾನತು ಆದೇಶ ಹಿಂಪಡೆಯದಿದ್ದರೆ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಒ ಹುದ್ದೆಯಿಂದ ಹಿಂದಕ್ಕೆ- ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ

0

ಬಂಟ್ವಾಳ:ನಾವೂರು ಗ್ರಾಮದ ಪರ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಲತಾ ಅವರು ವೈಯಕ್ತಿಕ ಕಾರಣಕ್ಕೆ ಬಿಎಲ್‌ಒ ಹುದ್ದೆಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಪತ್ರ ನೀಡಿದರೂ, ಅವರು ಬಿಎಲ್‌ಒ ಹುದ್ದೆ ಸರಿಯಾಗಿ ನಿರ್ವಹಿಸಿಲ್ಲ ಎಂದು ಕಾರ್ಯಕರ್ತೆ ಹುದ್ದೆಯಿಂದ ಅಮಾನತು ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಈ ಆದೇಶ ಹಿಂಪಡೆಯದೇ ಇದ್ದರೆ ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಒ ಹುದ್ದೆಯಿಂದ ಹಿಂದೆ ಸರಿಯಲಿದ್ದಾರೆ ಎಂದು ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ಎಚ್ಚರಿಸಿದರು.

ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಲ್‌ಒ ಹುದ್ದೆಯನ್ನು ಅಂಗನವಾಡಿ ಕಾರ್ಯಕರ್ತೆಯರೇ ನಿರ್ವಹಿಸಬೇಕು ಎಂಬ ಆದೇಶವೂ ಇಲ್ಲ. ಕಾರ್ಯದೊತ್ತಡದ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್‌ಒ ಹುದ್ದೆಯಿಂದ ಮುಕ್ತಿ ನೀಡಬಹುದು ಎಂಬ ಆದೇಶವೂ ಇದ್ದು, ಅದರ ಪ್ರಕಾರವೇ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಕಾರ್ಯಕರ್ತೆಯರು ಬಿಎಲ್‌ಒ ಕೆಲಸದಿಂದ ಮುಕ್ತಿ ಪಡೆದಿದ್ದಾರೆ ಎಂದರು. ಅಂಗನವಾಡಿ ಕಾರ್ಯಕರ್ತೆ ಲತಾ ಅವರು ಆರೋಗ್ಯ ಸಮಸ್ಯೆ, ಚಿಕ್ಕ ಮಗುವಿರುವ ಕಾರಣದಿಂದ ಬಿಎಲ್‌ಒ ಹುದ್ದೆ ನಿರ್ವಹಿಸಲು ಕಷ್ಟವಾಗುತ್ತದೆ ಎಂದು ಲಿಖಿತವಾಗಿ ತಿಳಿಸಿದ್ದು, ತಾಲೂಕು ಕಚೇರಿ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಆದರೂ ಇವರ ವಿರುದ್ಧ ಸುಳ್ಳು ಮಾಹಿತಿಗಳನ್ನು ನೀಡಿ ಜಿಲ್ಲಾಧಿಕಾರಿಗಳು ಕ್ರಮತೆಗೆದುಕೊಳ್ಳುವಂತೆ ಮಾಡಿದ್ದಾರೆ. ಇದರ ಹಿಂದೆ ಗ್ರಾಮಕರಣಿಕರ ಕೈವಾಡ ಇರುವ ಸಂಶಯ ನಮ್ಮಲ್ಲಿದೆ ಎಂದು ಹೇಳಿದ ವಿಜಯವಾಣಿ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಗೆ ಆಗಿರುವ ಅನ್ಯಾಯದ ಕುರಿತು ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೂ ವಿವರಿಸಿದ್ದು, ಅವರು ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ. ಜತೆಗೆ ನಮ್ಮ ಜಿಲ್ಲೆ ಹಾಗೂ ರಾಜ್ಯ ಸಂಘಕ್ಕೂ ವಿಚಾರ ತಿಳಿಸಿದ್ದು, ಅವರು ಕೂಡ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ತಮ್ಮ ಆದೇಶ ಹಿಂಪಡೆಯಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದರು. ತಾಲೂಕು ಸಂಘದ ಕಾರ್ಯದರ್ಶಿ ಜಯಶ್ರೀ, ಕೋಶಾಧಿಕಾರಿ ಸುಲೋಚನಾ, ನಿರ್ದೇಶಕಿ ರೇಣುಕಾ, ಅಮಾನತುಗೊಂಡ ಕಾರ್ಯಕರ್ತೆ ಲತಾ, ಅಂಗನವಾಡಿ ಕಾರ್ಯಕರ್ತೆಯರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here