ಪುತ್ತೂರು: ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದು ಬಡವ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಕಾಂಗ್ರೆಸ್ಸಿನ ಇಂದಿರಾ ಗಾಂಧಿ. ಅದೇ ರೀತಿ ರಾಜ್ಯದಲ್ಲಿ ಕೃಷಿ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಕೊಟ್ಟದ್ದು ಕಾಂಗ್ರೆಸ್ ಸರಕಾರವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕಾಂಗ್ರೆಸ್ ದೇಶವನ್ನು ಆಳದೇ ಇರುತ್ತಿದ್ದರೆ ಇಂದು ದೇಶ ಏನಾಗುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು. ಕೌಡಿಚ್ಚಾರ್ ಜಂಕ್ಷನ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಜನಪರ ಯೋಜನೆಯನ್ನೇ ಜಾರಿಗೆ ತರುತ್ತಿದೆ. ಕಾಂಗ್ರೆಸ್ ದೇಶದ ಜನರ ಜೀವನಾಡಿ. ಕಾಂಗ್ರೆಸ್ ಸರಕಾರ ಇದ್ದರೆ ಮಾತ್ರ ಜನ ನೆಮ್ಮದಿಯಿಂದ ಬದುಕಲು ಸಾಧ್ಯ. ಬಡಜನರಿಗಾಗಿಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು. ನಾಳೆಯ ನೆಮ್ಮದಿಗಾಗಿ ಕಾಂಗ್ರೆಸ್ ಬೆಂಬಲಿಸಿ, ನಾನು ಎಂದೂ ಕೊಟ್ಟ ಮಾತನ್ನು ತಪ್ಪಿ ನಡೆಯಲಾರೆ, ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಕ್ಷೇತ್ರದ ಅಭಿವೃದ್ದಿಗಾಗಿ ಆಶೀರ್ವಾದ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಕಾರ್ಯಕರ್ತ ಮನೆಮನೆಗೂ ತೆರಳಬೇಕಿದೆ:
ಚುನಾವಣೆಗೆ ನಾವು ಸಜ್ಜಾಗಿದ್ದೇವೆ. ಕಾಂಗ್ರೆಸ್ ಗ್ಯಾರಂಟಿ ಮನೆ ಮನೆಗೂ ತಲುಪಬೇಕಿದೆ. ಕಾರ್ಯಕರ್ತರು ಕಾಂಗ್ರೆಸ್ ಭರವಸೆಯನ್ನು ಪ್ರಚಾರಪಡಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ನೆರವಾಗಬೇಕು. ಧರ್ಮದ ವಿಚಾರದಲ್ಲಿ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು ರಾಜ್ಯ,ದೇಶವನ್ನು ಬಿಜೆಪಿ ಲೂಟಿ ಹೊಡೆದಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ಹೇಳಿದರು.
ವಿಷ ಬೀಜ ಬಿತ್ತುವುದೇ ಬಿಜೆಪಿ ಕೆಲಸ: ಅಮಲರಾಮಚಂದ್ರ
ಪ್ರತೀ ಬಾರಿ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಧರ್ಮಗಳ ನಡುವೆ ಸಂಘರ್ಷವನ್ನು ಸೃಷ್ಟಿಸಿ ಗಲಭೆ ಎಬ್ಬಿಸುವುದೇ ಬಿಜೆಪಿ ಕೆಲಸವಾಗಿದೆ, ಬಿಜೆಪಿ ಭ್ರಷ್ಟರ ಕೂಟವಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಲರಾಮಚಂದ್ರ ಹೇಳಿದರು. 40% ಸರಕಾರ ರಾಜ್ಯದ ಸಂಪತ್ತು ಕೊಳ್ಳೆ ಹೊಡೆದು ನೀರು ಕುಡಿದಿದೆ. ಹಣ ಇಲ್ಲದೆ ಯಾವುದೇ ಅರ್ಜಿ ವಿಲೇವಾರಿಯಾಗುವುದಿಲ್ಲ. ಬಡವರ ಕಷ್ಟವನ್ನು ಕೇಳುವವರೇ ಇಲ್ಲದಂತ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದ್ದು, ಇದಕ್ಕೆಲ್ಲಾ ಇತಿಶ್ರೀ ಹಾಡಬೇಕಾದರೆ ಕಾಂಗ್ರೆಸ್ ಬೆಂಬಲಿಸಬೇಕು, ಪುತ್ತೂರಿಗೆ ಅಶೋಕ್ ರೈ ಶಾಸಕರಾಗಿ ಬರಬೇಕಾಗಿದೆ ಎಂದು ಹೇಳಿದರು.
ಸರಕಾರಿ ಭೂಮಿಯನ್ನು ಬಿಜೆಪಿಗರು ಮಾರಿದ್ದಾರೆ: ಹೇಮನಾಥ ಶೆಟ್ಟಿ
ಅಕ್ರಮ ಸಕ್ರಮ ವಿಚಾರದಲ್ಲಿ ಸರಕಾರಿ ಭೂಮಿಯನ್ನು ಬಿಜೆಪಿಗರು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸರ್ವಾಧಿಕಾರಿಯಂತೆ ಮೆರೆಯುತ್ತಿರುವ ಬಿಜೆಪಿಗೆ ಮತದಾರ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ನಾವು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬೇಕಿದೆ. ಸಮಾಜ ಸೇವಕ ಅಶೋಕ್ ರೈ ಕೈ ಬಲಪಡಿಸಲು ಪ್ರತಿಯೊಬ್ಬ ಕಾರ್ಯಕರ್ತ ಮನೆ ಮನೆ ಕಡೆ ಹೆಜ್ಜೆ ಹಾಕಬೇಕು, ಗ್ಯಾರಂಟಿ ಭರವಸೆಯನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂದು ಹೇಳಿದರು.
ರಾಜೀವ ರೈ ಕುತ್ಯಾಡಿ. ಮಹಮ್ಮದ್ ಬಡಗನ್ನೂರು, ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ,ಎಂಎಸ್ ಮಹಮ್ಮದ್, ಮುರಳೀದರ್ ರೈ ಮಠಂತಬೆಟ್ಟು,ಸಾರ್ಥಕ್ ರೈ ಅರಿಯಡ್ಕ, ರಫೀಕ್ ದರ್ಖಾಸ್, ಬಶೀರ್ ಕೌಡಿಚ್ಚಾರ್, ಇಸಾಕ್ ಸಾಲ್ಮರ, ಶಿವರಾಮ ಮಣಿಯಾಣಿ ಉಪಸ್ಥಿತರಿದ್ದರು. ಇಕ್ಬಾಲ್ ಹುಸೇನ್ ಸ್ವಾಗತಿಸಿ ವಂದಿಸಿದರು.