





ವಿದ್ಯಾರ್ಥಿಗಳು ಸಮಾಜದ ಶಕ್ತಿಗಳಾಗಬೇಕು: ಸುನೀಲ್ ಕುಮಾರ್ ದಡ್ಡು


ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿ ಅವರ ಬದುಕನ್ನು ಬೆಳಗಿಸಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಸಿಗಬೇಕೆಂಬ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಾಲೇಜಿಗೆ ನೀಡುತ್ತಿರುವುದು ನಮಗೆ ಹೆಮ್ಮೆಯೆನಿಸುತ್ತದೆ. ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ, ಉತ್ತಮ ಆರೋಗ್ಯದೊಂದಿಗೆ ಸಮಾಜದ ಶಕ್ತಿಗಳಾಗಿ ಮೂಡಿಬರಬೇಕು ಎಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ತಿಳಿಸಿದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಿ, ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.





ಈ ಕಾಲೇಜಿನಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ. ಸಂಘ- ಸಂಸ್ಥೆಗಳು, ದಾನಿಗಳು ಕಾಲೇಜಿಗೆ ಬೇಕಾದ ಕೆಲವೊಂದು ಅಗತ್ಯತೆಗಳನ್ನು ಪೂರೈಸಿದಾಗ ನಮ್ಮೂರಿನ ಕಾಲೇಜು ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಪ್ರೌಢಶಾಲಾ ವಿಭಾಗದ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಗುಣವತಿ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡುವ ಮೂಲಕ ಇಲ್ಲಿನ ಬೇಡಿಕೆಯನ್ನು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಪೂರೈಸಿದೆ. ಸಂಘದ ಇಂತಹ ಸೇವೆಗಳು ನಿರಂತರವಾಗಿರಲಿ ಎಂದರಲ್ಲದೆ, ಕಾಲೇಜು ಜೀವನವೆನ್ನುವುದು ವಿದ್ಯಾರ್ಥಿಗಳ ಪಾಲಿಗೆ ಬಂಗಾರದ ಜೀವನವಲ್ಲ. ಬದಲಾಗಿ ಬಂಗಾರದ ಜೀವನವನ್ನು ಸೃಷ್ಟಿಸಿಕೊಳ್ಳಲು ಇರುವ ಮಾರ್ಗ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಆಶಾ ಮಾತನಾಡಿ, ಮಕ್ಕಳ ಚಲನವಲನಗಳ ಮೇಲೆ ಪೋಷಕರಿಗೆ ನಿಗಾ ಅಗತ್ಯ. ವಿದ್ಯಾರ್ಥಿಗಳು ಮೊಬೈಲ್ ಬಗ್ಗೆ ನಿಗಾ ವಹಿಸಬೇಕು. ಮೊಬೈಲನ್ನು ಪ್ರೀತಿಸುವ ಬದಲು ತಂದೆ- ತಾಯಿಯನ್ನು, ಮನೆಯವರನ್ನು ಪ್ರೀತಿಸಿ. ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಶಿಕ್ಷಕರಲ್ಲಿ ಹೇಳಿ. ಶೈಕ್ಷಣಿಕ ಮತ್ತು ನೈತಿಕ ಪ್ರಗತಿಯತ್ತ ಗಮನಕೊಡಿ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಅಝೀಝ್ ಬಸ್ತಿಕ್ಕಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಯಾವುದೇ ಜಾತಿ- ಧರ್ಮದ ಬೇಧಭಾವವಿಲ್ಲ. ಇಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಂಬಂಧ ಮುಕ್ತವಾಗಿದೆ. ವಿದ್ಯಾರ್ಥಿಗಳನ್ನು ಉತ್ತಮವಾಗಿ ರೂಪಿಸುವಲ್ಲಿ ಉಪನ್ಯಾಸಕರಿಗೆ ಪೋಷಕರ ಸಹಕಾರವೂ ಅಗತ್ಯ ಎಂದರಲ್ಲದೆ, ಬದುಕಿನಲ್ಲಿ ಎಷ್ಟೇ ಎತ್ತರಕ್ಕೇರಿದರೂ ಮನುಷ್ಯತ್ವದ ಗುಣವನ್ನು ಮಾತ್ರ ನಾವು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಇಬ್ರಾಹೀಂ ಎಂ., ನಮ್ಮ ಕಾಲೇಜು ವಿದ್ಯಾರ್ಥಿ ಸ್ನೇಹಿಯಾಗಿದ್ದು, ಇಲ್ಲಿ ಕೇವಲ ಶಿಕ್ಷಣವಲ್ಲದೇ, ವಿದ್ಯಾರ್ಥಿ ಆರೋಗ್ಯ, ಸುರಕ್ಷತೆಯ ಬಗ್ಗೆಯೂ ಕಾಳಜಿ ನೀಡಲಾಗುತ್ತಿದೆ. ಪಠ್ಯ- ಪಠ್ಯೇತರ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಜೀವನ ಪದ್ಧತಿಯನ್ನು ಕಲಿಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕಿ ಶ್ರೀಮತಿ ಉಷಾ ಮುಳಿಯ, ಶಾಖಾ ವ್ಯವಸ್ಥಾಪಕ ಪ್ರವೀಣ್ ಆಳ್ವ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಶಂಶಾದ್ ಸ್ವಾಗತಿಸಿ, ವಂದಿಸಿದರು.










