ರಾಮಕುಂಜ: ಪೊಲೀಸರ ಸೂಚನೆ ಲೆಕ್ಕಿಸದೆ ಬ್ಯಾರಿಕೇಡ್ಗೆ ಡಿಕ್ಕಿಯಾಗಿ ಪರಾರಿಯಾಗಿದ್ದ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಆತೂರಿನಲ್ಲಿ ಎ.29ರಂದು ಬೆಳಿಗ್ಗೆ ನಡೆದಿದೆ.
ಕೊಯಿಲದಿಂದ ಗೋಳಿತ್ತಡಿ ಕಡೆಗೆ ಬರುತ್ತಿದ್ದ ಪಿಕಪ್ ವಾಹನವೊಂದನ್ನು ಆತೂರಿನಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಹಾಕಲಾಗಿರುವ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರತ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಪಿಕಪ್ ವಾಹನ ಚಾಲಕ ಪೊಲೀಸರ ಸೂಚನೆಯನ್ನು ಲೆಕ್ಕಿಸದೆ ಬ್ಯಾರಿಕೇಡ್ಗೆ ಡಿಕ್ಕಿಯಾಗಿ ಪರಾರಿಯಾಗಿದ್ದ. ಸದ್ರಿ ಪಿಕಪ್ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಶಂಕೆ ಮೇರೆಗೆ ಸ್ಥಳೀಯ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪರಾರಿಯಾಗಿದ್ದ ಪಿಕಪ್ ವಾಹನದ ಶೋಧ ನಡೆಸಿದ ವೇಳೆ ಪಿಕಪ್ ವಾಹನ ಶಾರದಾನಗರದಲ್ಲಿ ಪತ್ತೆಯಾಗಿದೆ. ಪಿಕಪ್ ವಾಹನದ ಚಾಲಕ ಶಾರದಾನಗರದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದ. ನಂತರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ರಿ ವಾಹನದಲ್ಲಿ ಸದಾ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ. ಇಂದೂ ಸಹ ಸದ್ರಿ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗುತಿತ್ತು. ಆದ್ದರಿಂದಲೇ ಚೆಕ್ಪೋಸ್ಟ್ನಲ್ಲಿ ಪೊಲೀಸರ ಸೂಚನೆ ಲೆಕ್ಕಿಸದೇ ಬ್ಯಾರಿಕೇಡ್ಗೆ ಡಿಕ್ಕಿಯಾಗಿ ಪರಾರಿಯಾಗಿದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದಾರೆ.
ವರ್ಷದ ಹಿಂದೆ ಆತೂರಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ವಾಹನವೊಂದು ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯಿಂದ ಆಕ್ರೋಶಿತಗೊಂಡ ಗುಂಪೊಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಆತೂರಿನಲ್ಲಿ ತಾತ್ಕಾಲಿಕವಾಗಿ ಹಾಕಲಾಗಿದ್ದ ಚೆಕ್ಪೋಸ್ಟ್ನ ಶೆಡ್ ಧ್ವಂಸಗೊಳಿಸಿದ್ದರು.