ಬಿಜೆಪಿ ಪಕ್ಷದ ಚಿಹ್ನೆ ಉಪಯೋಗಿಸಿ ಚುನಾವಣಾ ಪ್ರಚಾರ ದೂರು ಹಿನ್ನೆಲೆ-ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಚುನಾವಣಾ ಕಚೇರಿಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ

0

ಯಾವುದೇ ಅಕ್ರಮ ನಡೆಸಿಲ್ಲ ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಬಿಜೆಪಿ ಪಕ್ಷದ ಚಿಹ್ನೆಯನ್ನು ಉಪಯೋಗಿಸಿ ಚುನಾವಣಾ ಪ್ರಚಾರ ಮಾಡುತ್ತಿರುವುದಾಗಿ ಚುನಾವಣಾಧಿಕಾರಿಗೆ ಬಂದಿರುವ ದೂರಿಗೆ ಸಂಬಂಧಿಸಿ ಚುನಾವಣಾ ಮಾದರಿ ನೀತಿ ಸಂಹಿತೆ ತಂಡ ಎ.30ರಂದು ಅರುಣ್ ಕುಮಾರ್ ಪುತ್ತಿಲ ಅವರ ಚುನಾವಣಾ ನಿರ್ವಹಣಾ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣಾಧಿಕಾರಿಯವರಿಗೆ ಯಾವುದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂದು ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ.


ಬಿಜೆಪಿ ಅಭ್ಯರ್ಥಿ ಅಶಾ ತಿಮ್ಮಪ್ಪ ಅವರ ಚುನಾವಣಾ ಏಜೆಂಟ್ ರಾಜೇಶ್ ಬನ್ನೂರು ಅವರು ನೀಡಿದ ದೂರಿನಂತೆ ಪಕ್ಷೇತರ ಅಭ್ಯರ್ಥಿ ತನ್ನ ಪ್ರಚಾರ ಸಾಮಾಗ್ರಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕಾ ಪ್ರಕಟಣೆಗಳಲ್ಲಿ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರನ್ನು ಉಲ್ಲೇಖಿಸುತ್ತಿದ್ದಾರೆ ಮತ್ತು ಭಾವಚಿತ್ರವನ್ನು ಬಳಸುತ್ತಿದ್ದು,, ತಾನು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಚುನಾವಣಾ ಆಯೋಗ ನೀಡಿದ ಚಿಹ್ನೆಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕೇ ವಿನಃ ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ಪ್ರಚಾರ ಕಾರ್ಯದಲ್ಲಿ ಕಾನೂನು ರೀತ್ಯಾ ಉಪಯೋಗಿಸುವಂತಿಲ್ಲ. ಇಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಇದನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದರು. ಅದರಂತೆ ಚುನಾವಣಾಧಿಕಾರಿಯವರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಕಚೇರಿಗೆ ತೆರಳಿ ಯಾವುದೇ ರೀತಿಯ ಅಕ್ರಮ ಕಂಡು ಬಂದಲ್ಲಿ ವರದಿ ಮಾಡುವಂತೆ ತಿಳಿಸಿದ್ದು, ಎ.30ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ನೋಡೆಲ್ ಅಧಿಕಾರಿ ಮಾದರಿನೀತಿ ಸಂಹಿತೆ ತಂಡ ನೋಡೆಲ್ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರ ನೇತೃತ್ವದ ತಂಡ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಅವರ ಚುನಾವಣಾ ನಿರ್ವಹಣಾ ಕಚೇರಿಗೆ ತೆರಳಿ ಚುನವಣಾ ಪ್ರಚಾರ ಮಾಡುವ ತಂಡ ಮತ್ತು ಕಚೇರಿಯಲ್ಲಿ ಪರಿಶೀಲನೆ ನಡೆಸಿ ಚುನಾವಣಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.


ಯಾವುದೇ ಅಕ್ರಮ ನಡೆಸಿಲ್ಲ ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ:
ದೇಶದ ಪ್ರಧಾನಿ, ನಾಯಕರನ್ನು ನಾವು ಗೌರವದಿಂದ ಕಾಣುತ್ತೇವೆ ಹೊರತು ಅವರ ಹೆಸರನ್ನು ಬಳಸಿಕೊಂಡು ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿಲ್ಲ. ತಮ್ಮ ಮೇಲೆ ನೀಡಿರುವ ಆರೋಪ ಸುಳ್ಳು ಎಂದು ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣಾಧಿಕಾರಿಗಳಿಗೆ ಲಿಖಿತ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here