ಪಕ್ಷೇತರ ಅಭ್ಯರ್ಥಿಯಾದ ನನ್ನ ಮತ್ತು ಲಂಚ ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲದ ಬಗ್ಗೆ ಒಂದಿಷ್ಟು ಪರಿಚಯ

0

ನಾನು ಎಂಬಿಬಿಎಸ್ ಪದವೀಧರನಾಗಿದ್ದು, ಸುಳ್ಯ, ಪುತ್ತೂರಿನಲ್ಲಿ ಸೇವೆ ಸಲ್ಲಿಸಿದ್ದೇನೆ. ಬಳಕೆದಾರರ ವೇದಿಕೆಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 1985ರಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನ ಪ್ರಾರಂಭಿಸಿ ಸುಳ್ಯ ತಾಲೂಕಿನ ಅತೀ ದೊಡ್ಡ ಭ್ರಷ್ಟಾಚಾರಿ ಯಾರೆಂದು ಸಾರ್ವಜನಿಕವಾಗಿ ಓಟು ಹಾಕಿಸಿದ್ದೆವು. ಅಂದಿನ ಸಬ್ ಇನ್ಸ್ಪೆಕ್ಟರ್ ಕಾಂಬ್ಲಿಯವರು ಅತೀ ದೊಡ್ಡ ಭ್ರಷ್ಟಾಚಾರಿ ಎಂದು ಸಾರ್ವಜನಿಕರಿಂದ ಗುರುತಿಸಲ್ಪಟ್ಟಿದ್ದರು. ಆದರಿಂದ ನನಗೆ ಆದ ಪೊಲೀಸ್ ಕಿರುಕುಳವನ್ನು, ಆಗಬಹುದಾದ ಕೇಸುಗಳನ್ನು ತಪ್ಪಿಸಲು ಮತ್ತು ನಮ್ಮ ಹೋರಾಟದ ಉದ್ದೇಶವನ್ನು ಪ್ರಚಾರ ಮಾಡಲು ಅಂದಿನ ವಿಧಾನಸಭಾ ಚುನಾವಣೆಯನ್ನು ಉಪಯೋಗಿಸಿಕೊಂಡೆ. ಚುನಾವಣೆಯಲ್ಲಿ ಸಂಭಾವ್ಯ ಮುಖ್ಯಮಂತ್ರಿಗಳೆಂದು ಪರಿಗಣಿಸಲ್ಪಟ್ಟಿದ್ದ ರಾಮಕೃಷ್ಣ ಹೆಗ್ಗಡೆಯವರ ಎದುರು ಬೆಂಗಳೂರಿನ ಬಸವನಗುಡಿಯಲ್ಲಿ, ಬಂಗಾರಪ್ಪನವರ ಎದುರು ಸೊರಬದಲ್ಲಿ, ವೀರಪ್ಪ ಮೊಯಿಲಿಯವರ ಎದುರು ಕಾರ್ಕಳದಲ್ಲಿ ಸ್ಪ‌ರ್ಧಿಸಿ ನಮ್ಮ ವಿಚಾರವನ್ನು ಅಲ್ಲಿ ಅವರುಗಳ ಕ್ಷೇತ್ರದ ಮತದಾರರ ಮುಂದೆ ಇರಿಸಿದ್ದೆ. ನನ್ನ ಆಂದೋಲನಕ್ಕೆ ಬೆಂಬಲ ಮಾತ್ರವಲ್ಲ, ಪೊಲೀಸ್ ಕಿರುಕುಳದಿಂದ ಸುಳ್ಳು ಕೇಸುಗಳಿಂದ ರಕ್ಷಣೆ ನೀಡುವಂತೆ ಕೇಳಿದ್ದೆ. ಅದನ್ನು ಪಡೆದೂ ಇದ್ದೆ, ಆದರೆ ಈ ಆಂದೋಲನವನ್ನು ನನ್ನ ಕ್ಷೇತ್ರದಲ್ಲಿ ಮುಂದುವರಿಸಲು ಬಯಸಿದ್ದರೂ ರಾಜಕೀಯ ಪ್ರವೇಶ ಮಾಡಲು ಇಚ್ಚಿಸದೆ, ಪತ್ರಿಕೆಯನ್ನು ಪ್ರಾರಂಭಿಸಿದೆ. ಕಳೆದ 38 ವರ್ಷಗಳ ಕಾಲ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ನಡೆಸಿಕೊಂಡು ಬಂದಿದ್ದು, ಸುದ್ದಿ ವೆಬ್‌ಸೈಟ್, ಚಾನೆಲ್‌ಗಳನ್ನು ಸ್ಥಾಪಿಸಿದ್ದೇನೆ. ಈ ಅವಧಿಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನು ಸಣ್ಣ ಮಟ್ಟಿಗೆ ಮುಂದುವರಿಸಿಕೊಂಡು ಬಂದಿದ್ದೇನೆ, ಬಲಾತ್ಕಾರದ ಬಂದ್‌ಗಳನ್ನು, ಸಾಮಾಜಿಕ ಜಾಲತಾಣದ ದುರುಪಯೋಗಗಳನ್ನು ವಿರೋಧಿಸಿದ್ದೇವೆ, ಕೃಷಿ, ಶಿಕ್ಷಣ, ಉದ್ಯೋಗ ಮೇಳಗಳನ್ನು ಆಯೋಜಿಸಿದ್ದೇವೆ. ಸಾಮಾಜಿಕ ಚಟುವಟಿಕೆಗಳಿಗಾಗಿ, ಪತ್ರಿಕೋದ್ಯಮ ಸಾಧನೆಗಾಗಿ ಮೋರೆ ಹಣಮಂತರಾಯ, ಆಂದೋಲನ, ಮಾಧ್ಯಮ ಪ್ರಶಸ್ತಿಗಳನ್ನು, ಇತರ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಆದುದರಿಂದ ಈಗ ಮಾಡುತ್ತಿರುವ ಕೆಲಸ ಯಾವುದೇ ಪ್ರಚಾರಕ್ಕಾಗಿ, ಲಾಭಕ್ಕಾಗಿ ಮಾಡುತ್ತಿರುವ ಕೆಲಸವಲ್ಲ ಎಂದು ವಿನಯಪೂರ್ವಕವಾಗಿ ತಿಳಿಸಲು ಇಚ್ಛಿಸುತ್ತೇನೆ.

ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಮತ್ತು ಹಳ್ಳಿಯಿಂದ ಡೆಲ್ಲಿಗೆ ಆಡಳಿತ, ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟ ನಮ್ಮ ಪತ್ರಿಕೋದ್ಯಮದ ಆಶಯವೂ ಆಗಿದ್ದುದರಿಂದ ಅದನ್ನು ಅನುಷ್ಟಾನಕ್ಕೆ ತರಲು 2019ರಲ್ಲಿ ಪ್ರಧಾನಿ ಮೋದೀಜಿಯವರ ಕ್ಷೇತ್ರ ವಾರಣಾಸಿಯಲ್ಲಿ, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರ ಕ್ಷೇತ್ರ ಅಮೇಥಿಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದೆ, ಆ ಕ್ಷೇತ್ರಗಳಲ್ಲಿ ನಮ್ಮ ವಿಚಾರಧಾರೆಯನ್ನು ಪ್ರಚಾರ ಮಾಡಿ ಮೋದೀಜಿ ಮತ್ತು ರಾಹುಲ್ ಗಾಂಧಿಯವರ ಗಮನಕ್ಕೆ ತಂದು ಅದನ್ನು ದೇಶವ್ಯಾಪಿ ಮಾಡಲು ನನ್ನಿಂದ ಆದ ಪ್ರಯತ್ನ ಮಾಡಿದ್ದೆ. ಅಲ್ಲಿ ಮತ್ತು ಡೆಲ್ಲಿಯಲ್ಲಿ ಆ ಪ್ರಯುಕ್ತ ಪತ್ರಿಕಾಗೋಷ್ಟಿ ನಡೆಸಿ ಪ್ರಚಾರ ಮಾಡಿದ್ದೆ. ಆದರೆ ಆ ವಿಚಾರವನ್ನು ಸ್ಥಳೀಯವಾಗಿಯೇ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಜನಾಂದೋಲನ ರೂಪವಾಗಿ ಅನುಷ್ಠಾನಕ್ಕೆ ತಂದು, ಯಶಸ್ವಿಗೊಳಿಸಿ ಮತ್ತೆ ಮುಂದುವರಿಸಲು ಕಳೆದ ಮೂರು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದೇವೆ. ಅದರೊಂದಿಗೆ ಉತ್ತಮ ಸೇವೆಗೆ ಪುರಸ್ಕಾರ, ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಎಂಬ ಘೋಷಣೆ ಆ ಊರುಗಳಲ್ಲಿ ಜನರ ಕಾರ್ಯಕ್ರಮವಾಗಿ ಪರಿಣಮಿಸಿದೆ. ಈ ಆಂದೋಲನಕ್ಕೆ ಸಾಕಷ್ಟು ಜನರ ಬೆಂಬಲವನ್ನು ಪಡೆದಿದ್ದೇವೆ. ಸ್ಥಳೀಯವಾಗಿ ಲಂಚ, ಭ್ರಷ್ಟಾಚಾರ ವಿರುದ್ಧದ ಆಂದೋಲನಕ್ಕೆ ಜನರ ಬೆಂಬಲ ದೊರಕಿದ್ದರೂ ತಾಲೂಕು ಮಟ್ಟದಲ್ಲಿ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ಯಾಕೆಂದರೆ ಲಂಚ, ಭ್ರಷ್ಟಾಚಾರದ ಮೂಲ ಮತ್ತು ಅದರ ಚಲಾವಣೆ ಇರುವುದು ರಾಜ್ಯ ಮತ್ತು ದೇಶದ ಕೇಂದ್ರಗಳಲ್ಲಿ ಎಂಬುದು ಎಲ್ಲರಿಗೂ ತಿಳಿದಿದೆ. ಸ್ಥಳೀಯವಾಗಿ ಕೆಲಸಕ್ಕೆ ಬಂದ ಅಧಿಕಾರಿಗಳು ಕೆಲಸಕ್ಕೆ ಸೇರಲು ಲಂಚ ಕೊಟ್ಟು ಬಂದ ಪ್ರಕರಣಗಳು ಇರುವಾಗ, ವರ್ಗಾವಣೆಗೆ, ಕೆಲಸ ಮಾಡಲು ಮೇಲಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಶಾಸಕರಿಗೆ, ಮಂತ್ರಿಗಳಿಗೆ ಲಂಚ ಕೊಡುವ ಅನಿವಾರ್ಯತೆ ಇರುವುದರಿಂದ ಅವರನ್ನು ಸಂಪೂರ್ಣ ಲಂಚ, ಭ್ರಷ್ಟಾಚಾರ ಮುಕ್ತರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ, ನಾವು ಜನರಿಂದ ಸುಲಿಗೆ ಮಾಡಿ ಪಡೆದ ಹಣದಲ್ಲಿ ಮೇಲಿನವರಿಗೆ ಪಾಲು ಕೊಡಬೇಕಾಗುತ್ತದೆ, ಅದನ್ನು ನಿಲ್ಲಿಸಿದಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹಲವಾರು ಪ್ರಾಮಾಣಿಕರಾಗಲು ಬಯಸುವ ಅಧಿಕಾರಿಗಳು ಹೇಳಿಕೊಂಡಿದ್ದಾರೆ, ಜನರಿಗೂ ಅದರ ಅನುಭವ ಇದೆ. ಈ ಮೇಲಿನ ಕಾರಣಕ್ಕಾಗಿ ರಾಜ್ಯ, ಕೇಂದ್ರದಿಂದಲೇ ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನ ಪ್ರಾರಂಭವಾಗಬೇಕೆಂದು ಬಯಸಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾವಿಯಲ್ಲಿ, ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಲಂಚ, ಭ್ರಷ್ಟಾಚಾರ ನಿರ್ಮೂಲನೆಯ ವಿಷಯವನ್ನು ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಆ ಮೂಲಕ ಅದನ್ನು ಜನರ ಬಳಿಗೆ ಕೊಂಡೊಯ್ದು ಜನಾಂದೋಲನವಾಗಿ ಮಾಡಲು ಪ್ರಯತ್ನಿಸುತ್ತಿದ್ದೇನೆ.
ಇಲ್ಲಿಯ ಮತದಾರರು ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶಸೇವೆ ಎಂದು ಪರಿಗಣಿಸಿ, ಓಟಿಗೆ ನಿಂತ ಅಭ್ಯರ್ಥಿಗಳಲ್ಲಿ ಕೇಳುವಂತಾದರೆ ಮತ್ತು ತಾವು ಆರಿಸುವ ಶಾಸಕ (ತನ್ನ ಕರ್ತವ್ಯ ನಿಭಾಯಿಸಲು) ಲಂಚ, ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಜ್ಞೆ ಮಾಡುವಂತಾದರೆ ಈ ಕ್ಷೇತ್ರದಲ್ಲಿ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಆಗುವುದು ಖಂಡಿತ ಯಾಕೆಂದರೆ ಈ ಕ್ಷೇತ್ರದ ಎಲ್ಲಾ ಅಧಿಕಾರಿಗಳು ಇಲ್ಲಿ ಆರಿಸಿ ಬರುವ ಶಾಸಕರ ನಿಯಂತ್ರಣದಲ್ಲಿರುತ್ತಾರೆ, ಅವರು ಹೇಳಿದಂತೆ ಕೆಲಸ ಮಾಡುತ್ತಾರೆ. ಅವರ ವರ್ಗಾವಣೆ, ಅವರಿಗೆ ಇಲ್ಲಿ ಕೆಲಸ ಮಾಡುವ ಅವಕಾಶ, ಅವರ ಕೆಲಸಗಳ ಪರಿಶೀಲನೆ ಎಲ್ಲವೂ ಇಲ್ಲಿಯ ಶಾಸಕರ ನಿಯಂತ್ರಣದಲ್ಲಿರುತ್ತದೆ. ಹಾಗಿರುವಾಗ ಇಲ್ಲಿ ಆರಿಸಿ ಬಂದ ಶಾಸಕರಿಗೆ ಲಂಚ, ಭ್ರಷ್ಟಾಚಾರ ನಿಲ್ಲಿಸಲು ಸಮಸ್ಯೆ ಏನು?!. ಹೀಗಿರುವಾಗ ಅಽಕಾರಿಗಳು ಜನರಿಂದ ದರೋಡೆ ಮಾಡಿ ಪಡೆದ ಹಣವನ್ನು ಹಿಂತಿರುಗಿಸುವುದು ಇಲ್ಲಿಯ ಶಾಸಕರ ಕರ್ತವ್ಯವೇ ಆಗಬೇಕಲ್ಲವೇ?

ಈ ಮೇಲಿನ ವಿಚಾರವನ್ನು ಇರಿಸಿಕೊಂಡು ವರುಣಾದಲ್ಲಿ ಮತ್ತು ಶಿಗ್ಗಾವಿಯಲ್ಲಿ ಮತದಾರರ ಜಾಗೃತಿಯನ್ನು ಮಾಡುತ್ತಿದ್ದೇನೆ, ಅದನ್ನು ನೆನಪಿಸಲಿಕ್ಕಾಗಿ ಲಂಚ, ಭ್ರಷ್ಟಚಾರ ವಿರುದ್ಧದ ಮತ್ತು ಅಭ್ಯರ್ಥಿಗಳ ಜವಾಬ್ದಾರಿಯ ಫಲಕಗಳನ್ನು ಅಲ್ಲಲ್ಲಿ ಅಳವಡಿಸುತ್ತಿದ್ದೇವೆ. ಅದು ನಿರಂತರ ಜಾಗೃತಿಗೆ ರಿಮೈಂಡರ್ ಆಗಿ ಕೆಲಸ ಮಾಡಲಿದೆ, ಮುಂದಿನ ತಾ.ಪಂ., ಜಿ.ಪಂ., ಗ್ರಾಮ ಪಂಚಾಯತ್ ಚುನಾವಣೆ, ಪಾರ್ಲಿಮೆಂಟ್ ಚುನಾವಣೆಗಳಲ್ಲಿಯೂ ಮತದಾರರು ರಾಜರುಗಳಾಗಿ ತಮ್ಮ ಪ್ರತಿನಿಧಿಗಳನ್ನು ಪ್ರಶ್ನಿಸುವಂತೆ, ಅವರನ್ನು ಕೆಲಸ ಮಾಡಿಸುವಂತೆ ನೋಡಿಕೊಳ್ಳಬೇಕು ಎಂಬ ಆಶಯದಿಂದ ಸಂಭಾವ್ಯ ಮುಖ್ಯ ಮಂತ್ರಿಗಳ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೇನೆ. ಜನರು ಅದನ್ನು ರಾಜ್ಯವ್ಯಾಪಿ, ಮುಂದಕ್ಕೆ ದೇಶವ್ಯಾಪಿಯಾಗಿ ವಿಸ್ತರಿಸಬೇಕೆಂದು ಜನತೆಯಲ್ಲಿ ಮತ್ತು ಮಾಧ್ಯಮದವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ.

ಡಾ.ಯು.ಪಿ.ಶಿವಾನಂದ, ಪಕ್ಷೇತರ ಅಭ್ಯರ್ಥಿ

LEAVE A REPLY

Please enter your comment!
Please enter your name here