- ಯಾರನ್ನೂ ಸೋಲಿಸಲಿಕ್ಕಾಗಿ, ಗೆಲ್ಲಿಸಲಿಕ್ಕಾಗಿ ಮತದಾನವಲ್ಲ-ನಮ್ಮನ್ನು ಗೆಲ್ಲಿಸಲಿಕ್ಕಾಗಿ ಮತ ಚಲಾವಣೆ
- ನಮ್ಮ ಒಂದು ಓಟು ಅಭ್ಯರ್ಥಿಯನ್ನು ಗೆಲ್ಲಿಸಬಹುದು-ಸೋಲಿಸಬಹುದು
- ಪ್ರಧಾನಿ ಮೋದಿಜಿಯವರಿಗೆ ಇಲ್ಲಿ ಓಟಿಲ್ಲ, ರಾಹುಲ್ ಗಾಂಧಿಯವರಿಗೂ, ದೇವಗೌಡರಿಗೂ ಇಲ್ಲಿ ಓಟಿಲ್ಲ.
- ಅವರುಗಳ ಓಟಿನಿಂದ ಇಲ್ಲಿ ಯಾರೂ ಗೆಲ್ಲುವುದಿಲ್ಲ. ಇಲ್ಲಿಯ ಮತದಾರರ ಓಟಿನಿಂದಲೇ ಇಲ್ಲಿಯ ಅಭ್ಯರ್ಥಿಯ ಗೆಲುವು
- ಸರಕಾರಿ ಕಛೇರಿಯ ಕಂಬ, ಕಂಬಗಳಲ್ಲಿ, ಟೇಬಲ್‌ಗಳಲ್ಲಿ, ಕಾಮಗಾರಿಗಳಲ್ಲಿ ಲಂಚ ಭ್ರಷ್ಟಾಚಾರ ಇದೆ.
- ನಮ್ಮ ಓಟು ಕೇಳುವವರು ಆ ಲಂಚ ಭ್ರಷ್ಟಾಚಾರ ನಿಲ್ಲಿಸುವ ಪ್ರತಿಜ್ಞೆ ಮಾಡಬೇಕು
- ಅಧಿಕಾರಿಗಳು ಸುಲಿಗೆಯ ರೂಪದಲ್ಲಿ ಜನರಿಂದ ಪಡೆದ ಹಣವನ್ನು ಹಿಂತಿರುಗಿಸುವ ಭರವಸೆ ನೀಡಬೇಕು
ನಾವು ಮತದಾರರು ರಾಜರುಗಳು, ನಮ್ಮ ಸೇವೆಗಾಗಿ ಜನಪ್ರತಿನಿಧಿ ಆಯ್ಕೆ, ಜನ ಸೇವೆಗಾಗಿ ಅಧಿಕಾರಿಗಳ ನೇಮಕ ಎಂಬ ಜನ ಜಾಗೃತಿಯನ್ನು ರಾಜ್ಯದಾದ್ಯಂತ ಉಂಟು ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರ ವರುಣಾದಲ್ಲಿ ಹಾಲಿ ಮುಖ್ಯಮಂತ್ರಿ ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾವಿಯಲ್ಲಿ ಡಾ.ಯು.ಪಿ.ಶಿವಾನಂದನಾದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಇಲ್ಲಿ ನನಗೆ ಓಟು ಬೇಡ ಈ ಜನಜಾಗೃತಿ ಆಂದೋಲನಕ್ಕೆ ನೀಡುವ ಬೆಂಬಲವೇ ನನಗೆ ನೀಡಿದ ಓಟು. ಲಂಚ, ಭ್ರಷ್ಟಾಚಾರ ಮುಕ್ತ ಊರು ನಮ್ಮದಾದರೆ ಅದುವೇ ನನ್ನ ಗೆಲುವು ಎಂದು ತಿಳಿಸಲು ಇಚ್ಚಿಸುತ್ತೇನೆ.
ಮತದಾನಕ್ಕೆ ಮೊದಲು ಚಿಂತಿಸಲು ಇಲ್ಲಿಯ ಮತದಾರರಲ್ಲಿ ನನ್ನ ಕೆಲವು ಪ್ರಶ್ನೆಗಳನ್ನು, ವಿಷಯಗಳನ್ನು ಮುಂದಿಡುತ್ತಿದ್ದೇನೆ:
ಮತದಾನ ಸಂದರ್ಭದಲ್ಲಿ ನಿಮ್ಮ ಪರಿಚಯ ಎಲ್ಲ ಪಕ್ಷದವರಿಗೂ, ಅಭ್ಯರ್ಥಿಗಳಿಗೂ ಇರುತ್ತದೆ, ನಿಮ್ಮನ್ನು ಗುರುತಿಸುತ್ತಾರೆ, ನಿಮ್ಮನ್ನು, ನಿಮ್ಮ ಮನೆಯವರನ್ನು ಕರೆದು ಮಾತನಾಡಿಸುತ್ತಾರೆ. ಕಾಲಿಗೆ ಬೀಳುತ್ತಾರೆ, ಕೈ ಹಿಡಿದು ಮತದಾನದ ಆಶೀರ್ವಾದ ಕೇಳುತ್ತಾರೆ. ಗೆಲ್ಲಿಸುವಂತೆ ಬೇಡುತ್ತಾರೆ. ಅಭ್ಯರ್ಥಿಯ ಕಡೆಯವರೂ ಕೈ ಮುಗಿದು ಬೇಡುತ್ತಾರೆ. ಓಟಿಗಾಗುವಾಗ ಕರೆದುಕೊಂಡು ಬಂದು ಉಪಚರಿಸಿ ಮತದಾನ ಮಾಡಿಸಿ ಕಳುಹಿಸುತ್ತಾರೆ. ನಿಮ್ಮನ್ನು ರಾಜನಂತೆ ನೋಡಿಕೊಳ್ಳುತ್ತಾರೆ ಅಲ್ಲವೇ ?!
ಮತದಾನದ ನಂತರ, ಅವರು ಗೆದ್ದು ಹೋದ ನಂತರ ಏನಾಗುತ್ತದೆ? ನೀವು ಮತ್ತೆ ಮೊದಲಿನಂತೆ ಗುಲಾಮರಾಗುತ್ತೀರಿ. ನಿಮ್ಮ ಗುರುತು ಪರಿಚಯ ಅವರಿಗೆ ಮರೆಯುತ್ತದೆ, ಗೆದ್ದವರು ರಾಜರಾಗುತ್ತಾರೆ. ಹೌದಲ್ಲವೇ ? ಯಾಕೆ ಹೀಗಾಗುತ್ತದೆ, ಗೆದ್ದ ಮೇಲೆಯೂ ಜನಪ್ರತಿನಿಧಿಗಳು ನಮ್ಮ ಜನ ಸೇವಕರಾಗಿ ಉಳಿಯಲು ಸಾಧ್ಯವಿಲ್ಲವೇ ? ಮತದಾರರು ಈ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲವೇ ಈ ಕೆಳಗಿನ ಪ್ರಶ್ನೆಗಳಿಗೂ ಉತ್ತರ ಬೇಕಾಗಿದೆ.
1) ಈ ಕ್ಷೇತ್ರದಲ್ಲಿ, ಸರಕಾರಿ ಕಛೇರಿಗಳಲ್ಲಿ, ಕಾಮಗಾರಿಗಳಲ್ಲಿ ಲಂಚ ಭ್ರಷ್ಟಾಚಾರ ಇದೆಯೇ, ಇಲ್ಲವೇ?
2) ಸರಕಾರಿ ಕಛೇರಿಗಳಲ್ಲಿ ನಿಮ್ಮನ್ನು ರಾಜರಂತೆ ನೋಡಿಕೊಳ್ಳುತ್ತಾರೆಯೇ, ಗುಲಾಮರಂತೆ, ಕಳ್ಳರಂತೆ, ಅಪರಾಧಿಗಳಂತೆ, ಗುರುತು-ಪರಿಚಯ ಇಲ್ಲದವರಂತೆ ನಡೆಸಿಕೊಳ್ಳುತ್ತಾರೆಯೇ?
3) ಜನಪ್ರತಿನಿಧಿಗಳು, ಜನಸೇವಕರು ಅಧಿಕಾರಿಗಳು ನಮ್ಮ ಸಾರ್ವಜನಿಕ ಸೇವೆಗಾಗಿ ಇರುವವರು ಹೌದೇ ಅಲ್ಲವೇ?
4) ನೀವು ಓಟಿನ ನಂತರವೂ ರಾಜರುಗಳಾಗಿ ಇರುವಂತೆ, ಜನಪ್ರತಿನಿಧಿಗಳು, ಅಧಿಕಾರಿಗಳು ಸದಾ ನಿಮ್ಮ ಸೇವೆಗಾಗಿ ಇರುವಂತೆ ಮಾಡಲು ಸಾಧ್ಯವಿಲ್ಲವೇ?-ಇದೆ.
ನೀವು (ಮತದಾರರು) ಮನಸ್ಸು ಮಾಡಿದರೆ ಈ ಚುನಾವಣೆ ಮುಗಿಯುವುದರ ಒಳಗಾಗಿ ಈ ಬದಲಾವಣೆ ತರಬಲ್ಲಿರಿ. ಅದು ದೊಡ್ಡ ಕೆಲಸವೇನಲ್ಲ, ನೀವು ಬದಲಾದರೆ ಸಾಕು. ಮೊದಲನೆಯದಾಗಿ ಈ ಪ್ರಜಾಪ್ರಭುತ್ವದಲ್ಲಿ ನೀವು ರಾಜರುಗಳೆಂದು ತಿಳಿದುಕೊಳ್ಳಬೇಕು, ಅದನ್ನು ಆಚರಣೆಗೆ ತರಬೇಕು. ಅಷ್ಟು ಮಾಡಿದರೆ ಸಾಕು.
ಅದನ್ನು ಕಾರ್ಯರೂಪಕ್ಕೆ ತರಲು, ನಿಮ್ಮ ಅಭ್ಯರ್ಥಿಗಳ ಮತ್ತು ಪಕ್ಷದವರೊಡನೆ ಮತ ಕೇಳಲು ಬರುವವರ ಮುಂದೆ ಈ ಕೆಳಗಿನ ಪ್ರಶ್ನೆಗಳನ್ನು ಇರಿಸಬೇಕು.
1) ನಮ್ಮ ಓಟು ಬೇಡುವ ನಿಮಗೆ ನಮ್ಮ ಕ್ಷೇತ್ರದಲ್ಲಿ, ಕಛೇರಿಗಳಲ್ಲಿ ಲಂಚ ಭ್ರಷ್ಟಾಚಾರ ನಿಲ್ಲಿಸಲು ಸಾಧ್ಯವಿಲ್ಲವೇ? ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂಬ ಪ್ರತಿಜ್ಞೆ ಮಾಡಬಲ್ಲಿರಾ? ಸಾಧ್ಯವಿಲ್ಲ ಎಂದಾದರೆ ನಿಮಗೆ ನಮ್ಮ ಜನಪ್ರತಿನಿಧಿಗಳಾಗುವ ಅರ್ಹತೆ ಇದೆಯೇ? ಹಾಗಿರುವಾಗ ನೀವು ಅಭ್ಯರ್ಥಿಗಳಾಗಿ ಓಟಿಗೆ ನಿಂತಿರುವುದು ಯಾಕೆ?
2) ದರೋಡೆಕೋರರು ಚೂರಿ ಹಿಡಿದು ಹೆದರಿಸಿ ಜನರಿಂದ ಹಣ ವಸೂಲಿ ಮಾಡಿದಂತೆ, ಸರಕಾರಿ ಕಛೇರಿಗಳಲ್ಲಿ ಅಧಿಕಾರಿಗಳು ಕಾನೂನಿನ ಚೂರಿ ಹಿಡಿದು ನಮ್ಮಿಂದ(ಜನರಿಂದ) ವಸೂಲಿ ಮಾಡಿದ, ದರೋಡೆ ಮಾಡಿದ ಹಣವನ್ನು ನಿಮ್ಮ ಮತದಾರರಾಗಿರುವ, ನಿಮ್ಮನ್ನು ಓಟು ಹಾಕಿ ಗೆಲ್ಲಿಸಿದ ನಮಗೆ(ಜನರಿಗೆ) ಹಿಂತಿರುಗಿಸಬಲ್ಲಿರಾ? ಆವರಿಂದಾದ ತೊಂದರೆಗೆ ಪರಿಹಾರ ಕೊಡಿಸಬಲ್ಲಿರಾ.
ನಿಮ್ಮ ಓಟು ಯಾರಿಗೆ ಬೇಕಾದರೂ, ಯಾವುದೇ ಪಕ್ಷಕ್ಕೆ ಬೇಕಾದರೂ ಹಾಕಿ, ಆದರೆ ಈ ಮೇಲಿನ ವಿಚಾರಗಳನ್ನು ಅಭ್ಯರ್ಥಿಗಳು ಮತ್ತು ಅವರ ಪಕ್ಷದ ಪರವಾಗಿ ನಿಮ್ಮ ಮತ(ಓಟು) ಕೇಳಲು(ಬೇಡಲು) ಬರುವ ಎಲ್ಲರಲ್ಲಿಯೂ ಕೇಳುವ ಧೈರ್ಯ ಮಾಡಬೇಕು ಮತ್ತು ಅವರು ಚುನಾವಣಾ ಸಂದರ್ಭದಲ್ಲಿ ಹೇಳಿದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆಚರಣೆಗೆ ತರುವಂತೆ ಮಾಡಬೇಕು.
ಈ ಮತದಾನದ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರರು ಓಟಿಗೆ ನಿಂತ ಅಭ್ಯರ್ಥಿಗಳನ್ನು, ಪಕ್ಷದವರನ್ನು ಪ್ರಶ್ನಿಸುವ ನಿರ್ಧಾರ ತೆಗೆದುಕೊಂಡರೆ ಯಾವುದೇ ಪಕ್ಷ, ಯಾವುದೇ ಅಭ್ಯರ್ಥಿ ಆರಿಸಿ ಬಂದರೂ ನೀವು ರಾಜರುಗಳಾಗುತ್ತೀರಿ. ಅವರು ಜನಸೇವಕರಾಗುತ್ತಾರೆ, ಲಂಚ ಭ್ರಷ್ಟಾಚಾರ ಮುಕ್ತ ಮಾತ್ರವಲ್ಲ ಜನರಿಗೆ ಉತ್ತಮ ಸೇವೆ ಕೊಡುವ ಊರು ನಿಮ್ಮದಾಗುತ್ತದೆ. ನೀವು ಓಟಿಗೆ ನಿಂತಿರುವ ಅಭ್ಯರ್ಥಿಗಳಲ್ಲಿ ಕೇಳುವ ಒಂದೊಂದು ಪ್ರಶ್ನೆಯೂ ಲಂಚ ಭ್ರಷ್ಟಾಚಾರದ ವಿರುದ್ಧ ಇಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯಥಿಯಾದ ನನಗೆ ನೀಡಿದ ಮತವಾಗುತ್ತದೆ. ನಿಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾದರೆ ಅದು ಸುದ್ದಿ ಜನಾಂದೋಲನಕ್ಕೆ ಸಿಕ್ಕಿದ ಗೆಲುವಾಗುತ್ತದೆ ಎಂದು ತಿಳಿಸಲು ಇಚ್ಚಿಸುತ್ತೇನೆ.