34 ನೆಕ್ಕಿಲಾಡಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0

ಭ್ರಷ್ಟಾಚಾರದ ಧೂಳನ್ನು ಹೊಡೆದೋಡಿಸೋದೇ ಗುರಿ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಅಕ್ರಮ- ಸಕ್ರಮ, 94ಸಿ ಸೇರಿದಂತೆ ಸಾರ್ವಜನಿಕರ ವಿವಿಧ ಕೆಲಸಗಳ ಕಡತಗಳು ಬಿಜೆಪಿಯ ಆಡಳಿತಾವಧಿಯಲ್ಲಿ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರವೆಂಬ ಧೂಳಿನಲ್ಲಿ ಮುಳುಗಿಹೋಗಿವೆ. ಆ ಧೂಳನ್ನು ಹೊಡೆದೋಡಿಸಿ ಸಾರ್ವಜನಿಕರಿಗೆ ನ್ಯಾಯ ಕೊಡುವ ಕಾಲವಿಂದು ಸನ್ನಿಹಿತವಾಗುತ್ತಿದೆ. ಲಂಚ, ಭ್ರಷ್ಟಾಚಾರವನ್ನು ತೊಲಗಿಸಬೇಕು. ಎಲ್ಲಾ ಜನರಿಗೆ ಸಮಾನ ಸಾಮಾಜಿಕ ನ್ಯಾಯವನ್ನು ದೊರಕಿಸುವುದರೊಂದಿಗೆ ಈ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬೇಕು ಎಂಬ ಏಕೈಕ ಉದ್ದೇಶದಿಂದ ನಿಂತಿದ್ದು, ಆದ್ದರಿಂದ ನೀವೆಲ್ಲರೂ ಆಶೀರ್ವಾದ ಮಾಡಿ ನನ್ನನ್ನು ಈ ಬಾರಿ ಗೆಲ್ಲಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮನವಿ ಮಾಡಿದರು.


34 ನೆಕ್ಕಿಲಾಡಿಯ ಸಂತೆಕಟ್ಟೆ ಮೈದಾನದಲ್ಲಿ ಎ.30ರಂದು ರಾತ್ರಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರವಿಲ್ಲದಿದ್ದಾಗಲೂ ತಾನು ದುಡಿದ ಸಂಪತ್ತಿನಲ್ಲಿ ಒಂದು ಪಾಲನ್ನು ಈ ಸಮಾಜಕ್ಕಾಗಿ ವಿನಿಯೋಗಿಸುತ್ತಾ ಬಂದವ ನಾನು. ಸಮಾಜ ಸೇವೆಯಲ್ಲಿ ಯಾವುದೇ ಜಾತಿ- ಬೇಧ, ಧರ್ಮ ಬೇಧ ಮಾಡಿಲ್ಲ. ಭ್ರಷ್ಟಾಚಾರ ಮಾಡಬೇಕು. 40 ಶೇ. ಕಮಿಷನ್ ಮೂಲಕ ಹಣ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದವ ನಾನಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರದಿಂದ ಬಡ ಜನರು ತತ್ತರಿಸಿರುವುದನ್ನು ಕಂಡು ರೋಸಿ ಹೋದವ ನಾನು. ಇದಕ್ಕೊಂದು ಕಡಿವಾಣ ಹಾಕಬೇಕು. ಬಡವರಿಗೆ ನ್ಯಾಯ ಒದಗಿಸಿಕೊಡಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡಬೇಕು. ಎಲ್ಲರಿಗೂ ಸಮಾನ ನ್ಯಾಯವನ್ನು ಕಲ್ಪಿಸಬೇಕು ಎಂಬ ಮನೋಭಿಲಾಷೆಯನ್ನಿಟ್ಟುಕೊಂಡು ನಾನು ಚುನಾವಣೆಗೆ ನಿಂತಿದ್ದೇನೆ. ನೀವು ಅಧಿಕಾರ ಕೊಟ್ಟರೆ ಇನ್ನಷ್ಟು ನಿಮ್ಮ ಸೇವೆ ಮಾಡಲು ನನಗೆ ಅನುಕೂಲವಾಗುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಭ್ರಷ್ಟಾಚಾರ ಮುಕ್ತ ರಾಜ್ಯ, ಎಲ್ಲರಿಗೂ ಸಮಾನ ನ್ಯಾಯ ದೊರಕಲು ಸಾಧ್ಯ ಎಂದರು.


ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ಮತ ಕೇಳಲು ಅರ್ಹತೆಯಿಲ್ಲದ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಅಪಪ್ರಚಾರವನ್ನು ಮಾಡುತ್ತಲೇ ಮತದಾರನ ಮುಂದೆ ಹೋಗುತ್ತಿದೆ. ಈಗ ಜನರು ಪ್ರಜ್ಞಾವಂತರಾಗಿದ್ದು, ಬಿಜೆಪಿಯ ಸುಳ್ಳನ್ನು ಅರ್ಥೈಸಿಕೊಂಡಿದ್ದು, ಅದಕ್ಕೆ ತಕ್ಕ ಉತ್ತರ ಚುನಾವಣೆಯಲ್ಲಿ ನೀಡುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಅಭಿವೃದ್ಧಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತ ಜನಹಿತ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ಹೋಗುತ್ತಿದೆ. ಅಪಪ್ರಚಾರದ ಮೂಲಕ ತನ್ನನ್ನು ಕೂಡಾ ಕೆಲವರು ಧಮನಿಸಲು ನೋಡುತ್ತಿದ್ದು, ಅದರೆ ಅದು ಅವರಿಂದ ಸಾಧ್ಯವಿಲ್ಲ. ತನ್ನ ಜಾಗದೊಳಗೆ ಬಂದು, ಅದನ್ನು ಅತಿಕ್ರಮಿಸಲು ನೋಡಿದಾಗ ನಾನು ಕೈಕಟ್ಟಿ ಕೂರಬೇಕಿತ್ತಾ? ಅಲ್ಲಾ ಅದಕ್ಕೆ ಪ್ರತಿರೋಧ ತೋರಬೇಕಿತ್ತಾ. ಎಲ್ಲರೂ ಮಾಡುವಂತೆ ನಾನು ಪ್ರತಿರೋಧ ತೋರಿದ್ದೇನೆ. ಆದರೆ ಅದನ್ನೇ ಕೆಲವರು ಮುಂದಿಟ್ಟುಕೊಂಡು ತನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವುಗಳೆಲ್ಲಾ ಹೆಚ್ಚು ದಿನ ಬಾಳಿಕೆ ಬರಲ್ಲ. ಜನರಿಗೆ ನಾನೇನು ಅಂತ ಗೊತ್ತಿದೆ ಎಂದರು.


ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಬಿಜೆಪಿಯ ಆಡಳಿತಾವಧಿಯಲ್ಲಿ ಜನರು ಬೇಸತ್ತು ಹೋಗಿದ್ದು, ಈ ಸರಕಾರ ಶ್ರೀಮಂತರ ಪರ ಮಾತ್ರ ಇದೆ. ನಿರಂತರ ಬೆಲೆಯೇರಿಕೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ನಾಡಿನ ಸರ್ವತೋಮುಖ ಅಭಿವೃದ್ಧಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕಿದ್ದರೆ ಕಾಂಗ್ರೆಸ್ ಬರಬೇಕು. ಕಾಂಗ್ರೆಸ್ ಸರಕಾರದಿಂದ ಮಾತ್ರ ಸಮಾಜದ ಎಲ್ಲಾ ವರ್ಗಗಳನ್ನೂ ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಸಾಧ್ಯ ಎಂದರು.


ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಮುಹಮ್ಮದ್ ಮಾತನಾಡಿ, ಬಿಜೆಪಿಯು ಜನವಿರೋಧಿ, ಬಡವರ ವಿರೋಧಿ ಸರಕಾರವಾಗಿದೆ. ಬಡವರಿಗೆ ಅನುಕೂಲವಾಗಲೆಂದು ಕಾಂಗ್ರೆಸ್ ಸರಕಾರ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆದರೆ, ಬಿಜೆಪಿಯು ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮೂಲೆಗುಂಪು ಮಾಡಿತು. ಬಡವರ ಮಕ್ಕಳಿಗಾಗಿ ಶೂ ಭಾಗ್ಯ ಸೇರಿದಂತೆ ಇನ್ನಿತರ ಹಲವು ಯೋಜನೆಗಳನ್ನು ಕಾಂಗ್ರೆಸ್ ಸರಕಾರ ತಂದರೆ, ಬಿಜೆಪಿಯು ಬಂದ ಬಳಿಕ ಅದನ್ನೆಲ್ಲಾ ನಿಲ್ಲಿಸಿತು. 94ಸಿ, 94ಸಿಸಿ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ. ಬ್ಯಾಂಕ್ ರಾಷ್ಟ್ರೀಕರಣಗೊಳಿಸುವ ಮೂಲಕ ಬಡವರಿಗೂ ಬ್ಯಾಂಕ್‌ನ ಬಾಗಿಲು ತೆರೆಯುವಂತೆ ಮಾಡಿದ್ದು ಇಂದಿರಾಗಾಂಧಿ ಆಡಳಿತಾವಧಿಯಲ್ಲಿ. ಆದರೆ ಬಿಜೆಪಿಯು ಕೋಮು ವೈಷಮ್ಯದ ಮೂಲಕ ಸಮಾವನ್ನು ಒಡೆಯುವ ಕೆಲಸ ಮಾಡುವುದು ಬಿಟ್ಟರೆ ಅದಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ. ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿಯಾಗಿದ್ದು, ಅವರಿಗೆ ಬಡವರ ಕಷ್ಟದ, ಮಾನವೀಯತೆಯ ಅರಿವಿದೆ. ಆದ್ದರಿಂದ ಸಮಾಜದ ಏಳಿಗೆಗಾಗಿ ಅಶೋಕ್ ರೈಯವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಮುಖಂಡರಾದ ನೂರುದ್ದೀನ್ ಸಾಲ್ಮರ, ಮಹೇಶ್ ಅಂಕೊಂತ್ತಿಮಾರ್, ವೇದನಾಥ್ ಸುವರ್ಣ, ವಿಜಯಕುಮಾರ್ ಸೊರಕೆ, ಎಂ.ಪಿ. ಅಬೂಬಕ್ಕರ್, ಶೇಖಬ್ಬ ಹಾಜಿ, ನಝೀರ್ ಮಠ, ಶರೀಖ್ ಅರಫಾ, ಅಬ್ದುಲ್ ಖಾದರ್ ಸಂತೆಕಟ್ಟೆ, ಫಯಾಝ್, ಇಸಾಕ್, ಪುತ್ತಮೋನು ಕರ್ವೇಲ್, ಆನಂದ ಸಾಂತ್ಯಡ್ಕ, ನವಾಝ್ ಕರ್ವೇಲ್, ಶರೀಫ್ ಕರ್ವೆಲ್, ಅಬ್ದುಲ್ ಖಾದರ್ ಯುನಿಕ್, ನಾಗೇಶ್ ಸುಭಾಶ್‌ನಗರ, ಬಾಬು ಬೀತಲಪ್ಪು, ಬಾಬು ಕೊಳಕ್ಕೆ, ತನಿಯಪ್ಪ ಶಾಂತಿನಗರ, ಗೀತಾ, ನಳಿನಿ, ಅಝೀಝ್ ಪಿ.ಟಿ., ಹಮೀದ್ ಪಿ.ಟಿ., ಖಾದರ್ ಆದರ್ಶನಗರ, ಸಾಸೀರ್ ಆದರ್ಶನಗರ, ಇಬ್ರಾಹೀಂ ಆದರ್ಶನಗರ ಮತ್ತಿತರರು ಉಪಸ್ಥಿತರಿದ್ದರು.


34ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ಸ್ವಾಗತಿಸಿದರು. ಕಾರ್ಯದರ್ಶಿ ಕಲಂದರ್ ಶಾಫಿ ವಂದಿಸಿದರು. ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಕಾರ್ಯಕ್ರಮ ನಿರೂಪಿಸಿದರು.

ತಡವಾದರೂ ಕರಗದ ಜನಸಂದಣಿ
ನೆಕ್ಕಿಲಾಡಿಯಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ ಉಪ್ಪಿನಂಗಡಿಯಲ್ಲಿ ಕಾರ್ಯಕ್ರಮ ನಡೆಯುವಾಗಲೇ 4 ಗಂಟೆ ಕಳೆದಿದ್ದು, ಬಳಿಕ ಬಜತ್ತೂರಿನಲ್ಲಿಯೂ ಕಾರ್ಯಕ್ರಮವಿತ್ತು. ಆದ್ದರಿಂದ ನೆಕ್ಕಿಲಾಡಿಯಲ್ಲಿ ಕಾರ್ಯಕ್ರಮ ಆರಂಭವಾಗುವಾಗಲೇ ಸುಮಾರು ರಾತ್ರಿ 7 ಗಂಟೆಯಾಗಿತ್ತು. ಅಭ್ಯರ್ಥಿ ಅಶೋಕ್ ಕುಮಾರ್ ರೈವರು ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ಸಭೆಗೆ ಬರುವಾಗ ಮತ್ತೂ ಅರ್ಧಗಂಟೆ ತಡವಾಗಿದ್ದು, ಆದರೂ ಸಂಜೆಯ ವೇಳೆಗೆ ಬಂದಿದ್ದ ಜನ ಸಂದಣಿ ಕರಗಿರಲಿಲ್ಲ. ಉತ್ಸಾಹಭರಿತ ಕಾರ್ಯಕರ್ತರ ದಂಡು ಇಲ್ಲಿ ಸೇರಿದ್ದರಿಂದಾಗಿ ರಾತ್ರಿಯಾದರೂ ಉತ್ತಮ ಜನಸಂದಣಿಗೆ ನೆಕ್ಕಿಲಾಡಿ ಕಾರ್ಯಕ್ರಮ ಸಾಕ್ಷಿಯಾಯಿತು.

LEAVE A REPLY

Please enter your comment!
Please enter your name here