ಪುತ್ತೂರು:ಇಲ್ಲಿನ ಬಸ್ ನಿಲ್ದಾಣದ ಬಳಿಯ ಜ್ಯೂಸ್ ಸೆಂಟರ್‌ನಲ್ಲಿ ಕಾಲೇಜು ವಿದ್ಯಾರ್ಥಿನಿ ಜೊತೆ ಜ್ಯೂಸ್ ಕುಡಿಯುತ್ತಿದ್ದ ಅದೇ ಕಾಲೇಜಿನ ವಿದ್ಯಾರ್ಥಿಗೆ ಹಲ್ಲೆ ಪ್ರಕರಣದಲ್ಲಿ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ರಿಕ್ಷಾ ಚಾಲಕ ದಿನೇಶ್, ವಿದ್ಯಾರ್ಥಿಗಳಾದ ಪ್ರಜ್ವಲ್, ನಿಶಾಂತ್ ಮತ್ತು ಪ್ರದೀಪ್ ಎಂಬವರು ಬಂಧಿತ ಆರೋಪಿಗಳು.
ಕಬಕ ಸರಕಾರಿ ಕಾಲೇಜು ವಿದ್ಯಾರ್ಥಿಯಾಗಿರುವ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಮೊಹಮ್ಮದ್ ಪಾರೀಸ್ ಎಂಬವರು ಅದೇ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಪುತ್ತೂರು ಬಸ್ ನಿಲ್ದಾಣದ ಬಳಿ ಇರುವ ಲಸ್ಸಿ ಸೆಂಟರ್‌ನಲ್ಲಿ ಜ್ಯೂಸ್ ಕುಡಿಯತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಅಟೋ ಚಾಲಕ ಹಾಗೂ ಆತನ ಸ್ನೇಹಿತರು ಮೊಹಮ್ಮದ್ ಪಾರೀಸ್‌ನನ್ನು ಹೊರಗೆ ಕರೆದು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾಗಿರುವ ವಿದ್ಯಾರ್ಥಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿ ಇದೀಗ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆದರಿಸಿ ಹಲ್ಲೆ: ನಾನು ಮತ್ತು ನನ್ನ ತರಗತಿಯ ವಿದ್ಯಾರ್ಥಿನಿ ಜ್ಯೂಸ್ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಸುಮಾರು 15 ಮಂದಿ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿಗಳು ನನ್ನ ಹೆಸರು ಕೇಳಿ, ನಿನ್ನಲ್ಲಿ ಮಾತನಾಡಲಿದೆ ಎಂದು ಹೇಳಿ ರೂಮ್‌ಗೆ ಕರೆದೊಯ್ದು ಅಲ್ಲಿ ನನಗೆ ವೈರ್ ಮತ್ತು ಲಾಠಿಯಿಂದ ಹಲ್ಲೆ ನಡೆಸಿ, ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದರೆ ಪೋಕ್ಸೊ ಕಾಯ್ದೆ ದಾಖಲಾಗುವಂತೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಆರೋಪಿಸಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಎಸ್‌ಡಿಪಿಐ ಮತ್ತು ಮುಸ್ಲಿಂ ಯುವಜನ ಪರಿಷತ್ ಆಗ್ರಹಿಸಿದೆ.
ನ್ಯಾಯಾಂಗ ಬಂಧನ: ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.