ಪುತ್ತೂರು: 2023ರ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ, 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಮತ್ತು ವಿಕಲಚೇತನ, ಕೋವಿಡ್ ಪೀಡಿತರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ನೀಡಿದ್ದ ಪ್ರಕ್ರಿಯೆ ಪೂರ್ಣಗೊಂಡಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.94.93 ಮತ ಚಲಾವಣೆಯಾಗಿದೆ.
ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗದ ನಿರ್ದೇಶನದಂತೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನ(ಪಿಡಬ್ಲ್ಯುಡಿ) ಮತ್ತು ಕೋವಿಡ್ ಪೀಡಿತ ಮತದಾರರಿಗೆ ಅವರವರ ಮನೆಯಲ್ಲೇ ಕುಳಿತು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಮನೆಯಲ್ಲೇ ಮತದಾನ ಮಾಡಬಯಸುವವರು ಈ ಕುರಿತು ಮೊದಲೇ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅರ್ಜಿ ಸಲ್ಲಿಸಿದ್ದವರಲ್ಲಿ 1516 ಮಂದಿ ಮತದಾರರು ಮತ ಚಲಾಯಿಸಿದ್ದು ಶೇ.94.93 ಮತ ಚಲಾವಣೆಯಾಗಿದೆ.
ಮನೆ ಮನೆಯಲ್ಲಿ ಮತ ಚಲಾಯಿಸುವ ಪ್ರಕ್ರಿಯೆಗಳು ಮೇ1ರಂದು ಪ್ರಾರಂಭಗೊಂಡಿದ್ದು ಪ್ರಥಮ ದಿನ 606, ಎರಡನೇ ದಿನವಾದ ಮೇ2ರಂದು 625 ಮತಗಳು ಹಾಗೂ ಕೊನೆಯ ದಿನವಾದ ಮೇ೩ರಂದು 285 ಮಂದಿ ಮತ ಚಲಾಯಿಸಿದ್ದು ಮೂರು ದಿನಗಳಲ್ಲಿ ಒಟ್ಟು 1516 ಮಂದಿ ಮತದಾರರು ಚಲಾಯಿಸಿದರು. ಅರ್ಜಿ ಸಲ್ಲಿಸಿದ್ದ ಒಟ್ಟು 1597 ಮತದಾರರ ಪೈಕಿ 1218 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 298 ಮಂದಿ ವಿಕಲಚೇತನ(ಪಿಡಬ್ಲ್ಯೂಡಿ) ಮತದಾರರು ಮತಚಲಾಯಿಸಿದರು.
ಅಗತ್ಯ ಸೇವೆಯಲ್ಲಿ 15 ಮಂದಿ ಮತದಾನ
ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಅಗತ್ಯ ಸೇವೆಯಡಿ ಕರ್ತವ್ಯ ನಿರ್ವಹಿಸುವ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿಗಳಿಗೆ ಮತದಾನ ಪ್ರಕ್ರಿಯೆ ಮೇ2ರಂದು ಪ್ರಾರಂಭಗೊಂಡಿದ್ದು ಎರಡು ದಿನಗಳಲ್ಲಿ 15 ಮತಗಳು ಚಲಾವಣೆಯಾಗಿದೆ. ತಾಲೂಕು ಆಡಳಿತ ಸೌಧದಲ್ಲಿ ತೆರೆಯಲಾಗಿರುವ ಮತದಾನ ಕೇಂದ್ರದಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುತ್ತಿದೆ. ಕೆ.ಎಸ್.ಆರ್.ಟಿ.ಸಿ., ಸಂಚಾರಿ ಪೊಲೀಸ್, ಮೆಸ್ಕಾಂ ಹಾಗೂ ಆರೋಗ್ಯ ಇಲಾಖೆಯ ಒಟ್ಟು 30 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಗತ್ಯಸೇವೆಯಡಿ ಕರ್ತವ್ಯ ನಿರ್ವಹಿಸುವವರಾಗಿ ಮತ ಚಲಾಯಿಸಲಿದ್ದು ಪ್ರಥಮ ದಿನವಾದ ಮೇ2ರಂದು 9 ಮಂದಿ ಹಾಗೂ ಮೇ3ರಂದು 6 ಮಂದಿ ಮತ ಚಲಾಯಿಸಿದ್ದು ಒಟ್ಟು 15 ಮಂದಿ ಮತ ಚಲಾಯಿಸಿದರು.