ನೆಲ್ಯಾಡಿ: ಜೀಪು ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಎರಡೂ ವಾಹನದಲ್ಲಿದ್ದ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಅನಾರು ಎಂಬಲ್ಲಿ ಮೇ 3ರಂದು ಬೆಳಿಗ್ಗೆ ನಡೆದಿದೆ.
ಜೀಪು ಚಾಲಕ ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿ ಸುಬ್ರಹ್ಮಣ್ಯ ಎಂ.ಆರ್., ಅವರ ಪತ್ನಿ ಲಕ್ಷ್ಮೀ ಮತ್ತು ಸಂಬಂಽ ಸುಬ್ರಹ್ಮಣ್ಯ ಹಾಗೂ ಕಾರು ಚಾಲಕ ಮಹಮ್ಮದ್ ಮುಸ್ತಾಫ, ಸಹ ಪ್ರಯಾಣಿಕರ ಅಬ್ದುಲ್ ಅಜೀಜ್ ಎಂಬವರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಬ್ರಹ್ಮಣ್ಯ ಎಂ.ಆರ್., ಅವರು ತನ್ನ ಜೀಪು(ಕೆಎ 21, ಎಂ 4587)ರಲ್ಲಿ ಪತ್ನಿ ಲಕ್ಷ್ಮೀ ಹಾಗೂ ಸಂಬಂಧಿ ಸುಬ್ರಹ್ಮಣ್ಯ ಎಂಬವರೊಂದಿಗೆ ಧರ್ಮಸ್ಥಳದಿಂದ ಕೊಕ್ಕಡ ಕಡೆಗೆ ಬರುತ್ತಿದ್ದ ವೇಳೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಅನಾರ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಕೊಕ್ಕಡದಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಕಾರು (ಕೆಎ20 ಎಂಸಿ 5959) ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು ಜೀಪು ಚಾಲಕ ಸುಬ್ರಹ್ಮಣ್ಯ ಅವರ ಸೊಂಟಕ್ಕೆ, ಎಡಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯ, ಲಕ್ಷ್ಮೀ ಅವರಿಗೆ ತಲೆಯ ಮೇಲ್ಭಾಗಕ್ಕೆ ಗಾಯವಾಗಿದ್ದು ಉಜಿರೆ ಬೆನಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ಮಹಮ್ಮದ್ ಮುಸ್ತಾಫ ಅವರಿಗೆ ಮುಖಕ್ಕೆ ತರಚಿದ ಗಾಯ, ಸಹ ಪ್ರಯಾಣಿಕ ಅಬ್ದುಲ್ ಅಜೀಜ್ ಎಂಬವರ ತಲೆ, ಬಲಕಾಲಿಗೆ ಗುದ್ದಿದ ಗಾಯವಾಗಿದ್ದು ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸುಬ್ರಹ್ಮಣ್ಯ ಎಂ.ಆರ್.ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕಲಂ. 279, 337 ಯಂತೆ ಪ್ರಕರಣ ದಾಖಲಾಗಿದೆ.