ನೆಲ್ಯಾಡಿ: ಚಾಲಕನ ಹತೋಟಿ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಬೆಂಗಳೂರು ಮೂಲದ ಪ್ರಯಾಣಿಕರು ಗಾಯಗೊಂಡು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೇ 2ರಂದು ಮಧ್ಯಾಹ್ನ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ನಡೆದಿದೆ.
ಬೆಂಗಳೂರು ಚೂಡೇನಪುರ ನಿವಾಸಿಗಳಾದ ಎಂ.ಸಿ.ಪರಶುರಾಮ(63ವ.), ಅವರ ಪತ್ನಿ ಎಂ.ವಿ.ಸುಧಾಪರುಶುರಾಮ, ಅತ್ತೆ ಪಾರ್ವತಮ್ಮ, ಮಗ ಲೋಹಿತ್, ಸೊಸೆ ಪೂರ್ಣಿಮಾ ಎಂಬವರು ಗಾಯಗೊಂಡು ಪುತ್ತೂರಿನ ಪ್ರಗತಿ ಹಾಗೂ ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಎ.30ರಂದು ಎಂ.ವಿ.ಸುಧಾಪರಶುರಾಮರವರ ಚಿಕಿತ್ಸೆಯ ಬಗ್ಗೆ ಮಣಿಪಾಲಕ್ಕೆ ಕಾರಿನಲ್ಲಿ(ಕೆಎ 01, ಎಂಹೆಚ್4647) ಬಂದಿದ್ದು ಅಲ್ಲಿ ಚಿಕಿತ್ಸೆ ಪಡೆದ ಬಳಿಕ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಮೇ 2ರಂದು ಮಧ್ಯಾಹ್ನ ಮತ್ತೆ ಬೆಂಗಳೂರಿಗೆ ಹೋಗಲೆಂದು ಸುಬ್ರಹಣ್ಯ-ಗುಂಡ್ಯ ರಸ್ತೆಯಲ್ಲಿ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿಗೆ ತಲುಪಿದಾಗ ಗುಂಡ್ಯದಿಂದ ಸುಬ್ರಹ್ಮಣ್ಯ ಕಡೆಗೆ ಲಾರಿಯೊಂದು ಬರುತ್ತಿರುವುದನ್ನು ಕಂಡು ಕಾರು ಚಲಾಯಿಸುತ್ತಿದ್ದ ಲೋಹಿತ್‌ರವರು ಕಾರನ್ನು ಒಮ್ಮಲೇ ರಸ್ತೆಯ ಬದಿಗೆ ಚಲಾಯಿಸಿದ ಪರಿಣಾಮ ಕಾರು ಚಾಲಕನ ಹತೋಟಿ ತಪ್ಪಿ ರಸ್ತೆಯ ಬದಿಯ ಮರವೊಂದಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ. ಈ ಬಗ್ಗೆ ಎಂ.ಸಿ.ಪರಶುರಾಮ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 279,337, 338 ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿದೆ.