ಪಕ್ಷೇತರ ಅಭ್ಯರ್ಥಿ ಮತ್ತು ಬೆಂಬಲಿಗರಿಂದ ಬಿಜೆಪಿ ಪಕ್ಷದ ನಾಯಕರ ಹೆಸರು ಮತ್ತು ಫೋಟೋ ಬಳಕೆ ವಿರುದ್ದ ಚುನಾವಣಾಧಿಕಾರಿಗೆ ದೂರು

0

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪೋಟೋ ಬಳಕೆ ಮಾಡಿ ಅವರಿಗೆ ಸ್ವಾಗತ ಕೋರುವುದನ್ನು ತಡೆಯುವಂತೆ ಪುತ್ತೂರು ಬಿಜೆಪಿ ಚುನಾವಣೆ ಏಜೆಂಟ್‌ ರಾಜೇಶ್‌ ಬನ್ನೂರು ಕ್ಷೇತ್ರ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್ ಪುತ್ತಿಲ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಾಗಿ ಬಿಜೆಪಿ ಅಭ್ಯರ್ಥಿಯ ಚುನಾವಣಾ ಏಜೆಂಟ್ ರಾಜೇಶ್ ಬನ್ನೂರು ಅವರು ಚುನಾವಣಾಧಿಕಾರಿಗೆ‌ 3ನೇ ಬಾರಿ ದೂರು ನೀಡಿದ್ದಾರೆ. ಅರುಣ್ ಪುತ್ತಿಲ ಬಿಜೆಪಿಯ ತಾರಾ ಪ್ರಚಾರಕರ ಪೋಟೋ ಬಳಸಿಕೊಳ್ಳುತಿದ್ದು, ನಾಳಿನ ಪತ್ರಿಕೆಯಲ್ಲಿ ಪುತ್ತೂರಿಗೆ ಆಗಮಿಸುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಸ್ವಾಗತ ಕೋರುವ ಜಾಹಿರಾತು ಪ್ರಕಟಿಸುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಯಾವುದೇ ಪತ್ರಿಕೆಗೆ ಅರುಣ್ ಪುತ್ತಿಲ ಹಾಗೂ ಅಭಿಮಾನಿಗಳು ಬಿಜೆಪಿ ಪಕ್ಷದ ತಾರಾ ಪ್ರಚಾರಕರ, ನಾಯಕರ ಪೋಟೋ ಮತ್ತು ಹೆಸರು ಬಳಸಿ ಜಾಹಿರಾತು ನೀಡದಂತೆ ಪತ್ರಿಕೆಗಳಿಗೆ ನೋಟಿಸ್‌ ನೀಡುವಂತೆ ತಾಲೂಕು ಚುನಾವಣಾ ಅಧಿಕಾರಿಗೆ ದೂರು ನೀಡಲಾಗಿದೆ.

ಕರ್ನಾಟಕ ವಿಧಾನ ಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಪುತ್ತೂರಿನಿಂದ ಆಶಾ ತಿಮ್ಮಪ್ಪ ಗೌಡ ಸ್ಪರ್ಧಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಜನತಾ ಪಾರ್ಟಿಯ ನೇತಾರರ ಭಾವ ಚಿತ್ರಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದು, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ಈ ಕುರಿತು ಸಾಮಾಜಿಕ ಜಾಲತಾಣಗಳಾದ, ಫೇಸ್ ಬುಕ್ ಮತ್ತು ವಾಟ್ಸಾಪ್ ನಲ್ಲಿ ಬಂದಿರುವ ಚಿತ್ರಗಳ ದಾಖಲೆಯನ್ನು ದೂರಿನೊಂದಿಗೆ ಲಗತ್ತಿಸಿ ಚುನಾವಣಾಧಿಕಾರಿಗೆ ಸಲ್ಲಿಸಲಾಗಿದೆ.

ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.

LEAVE A REPLY

Please enter your comment!
Please enter your name here