ಪುತ್ತೂರು: ಇಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರ ಪುತ್ತೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದು, ಯೋಗಿ ಆಗಮನದ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೆಳಗ್ಗೆ 11 ಗಂಟೆಗೆ ಪುತ್ತೂರಿಗೆ ಹೆಲಿಕಾಪ್ಟರ್ ಮೂಲಕ ನಗರದ ಹೊರವಲಯದ ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ಗೆ ಆಗಮಿಸಲಿರುವ ಯೋಗಿ ಅಲ್ಲಿಂದ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಬಳಿಕ ಮುಖ್ಯ ಅಂಚೆ ಕಚೇರಿ ಬಳಿಯಿಂದ ಕಿಲ್ಲೆ ಮೈದಾನದ ತನಕ ರೋಡ್ ಶೋ ನಡೆಸಲಿದ್ದಾರೆ. ಅಂಚೆ ಕಚೇರಿ ಬಳಿಯಿಂದ ಕೋರ್ಟ್ ರಸ್ತೆಯಾಗಿ ಸಾಗಿ ಕಿಲ್ಲೆ ಮೈದಾನದ ತನಕ ಜಾಥಾ ನಡೆಯಲಿದೆ. ಆದಿತ್ಯನಾಥ್ ಆಗಮನದ ಹಿನ್ನಲೆಯಲ್ಲಿ ಸಾರ್ವಜನಿಕ ಸುಗಮ ಸಂಚಾರಕ್ಕಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧಿಸಲಾಗಿದೆ. ವಾಹನ ಪಾರ್ಕಿಂಗ್ ಹಾಗೂ ವಾಹನಗಳು ಬದಲಿ ರಸ್ತೆ ಮಾರ್ಗದ ಮೂಲಕ ಸಂಚರಿಸುವಂತೆ ದ.ಕ. ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿನೆಟ್ ಜಂಕ್ಷನ್‌ನಿಂದ ಮುಕ್ರಂಪಾಡಿ ತನಕ ಹಾಗೂ ಮುಕ್ರಂಪಾಡಿಯಿಂದ ಮೊಟ್ಟೆತ್ತಡ್ಕದ ತನಕ ರಸ್ತೆಯಲ್ಲಿ ತುರ್ತು ಮತ್ತು ವೈದ್ಯಕೀಯ ವಾಹನ ಹೊರತು ಪಡಿಸಿ ಇತರ ವಾಹನ ಸಂಚಾರ ನಿಷೇಧಿಸಲಾಗಿದೆ.
ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 2 ಗಂಟೆಯ ತನಕ ಬೊಳುವಾರು ಜಂಕ್ಷನ್‌ನಿಂದ ಗಾಂಧಿಕಟ್ಟೆಯ ತನಕ ಮತ್ತು ಕಿಲ್ಲೆ ಮೈದಾನದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಹಾಗೂ ಕೋರ್ಟ್ ರಸ್ತೆಯಲ್ಲಿ ತುರ್ತು ಮತ್ತು ವೈದ್ಯಕೀಯ ವಾಹನ ಹೊರತುಪಡಿಸಿ ಇತರ ವಾಹನ ಸಂಚಾರ ನಿಷೇಧಿಸಲಾಗಿದೆ.
ಬೆಳಗ್ಗೆಯಿಂದ ಕಾರ್ಯಕ್ರಮ ಮುಗಿಯುವ ತನಕ ನಗರದ ಶ್ರೀಧರ ಭಟ್ ಜಂಕ್ಷನ್‌ನಿಂದ ಗಾಂಧಿಕಟ್ಟೆಯ ತನಕ ಹಾಗು ಗಾಂಧಿ ಕಟ್ಟೆಯಿಂದ ಕೋರ್ಟು ರಸ್ತೆಯ ಮೂಲಕ ಕಿಲ್ಲೆ ಮೈದಾನದ ತನಕ ಸುತ್ತ ಮುತ್ತಲಿನ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.ಮಂಗಳೂರು ಮತ್ತು ಕಡಬ ಕಡೆಯಿಂದ ಸಂಚರಿಸುವ ಲಘು ವಾಹನಗಳು ಹಾಗೂ ಸುಳ್ಯ ಮತ್ತು ಸಂಪ್ಯ ಕಡೆಗೆ ಸಂಚರಿಸಲು ಲಿನೆಟ್ ಜಂಕ್ಷನ್-ಬೊಳುವಾರು-ಕೊಟೇಚಾ ಹಾಲ್-ಸಾಲ್ಮರ-ಪುರುಷರಕಟ್ಟೆ, ಪಂಜಳ, ಪರ್ಪುಂಜ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಲಘು ವಾಹನಗಳು ಪಪುಂಜ ಕ್ರಾಸ್-ಪಂಜಳ, ಪುರುಷರಕಟ್ಟೆ- ದರ್ಬೆ-ಅರುಣಾ ಥಿಯೇಟರ್-ಸಾಲ್ಮರ-ಪಡೀಲ್- ಬೊಳುವಾರು-ಲಿನೆಟ್ ಜಂಕ್ಷನ್ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಒಂದು ಗಂಟೆಗೆ ಮುಂಚಿತವಾಗಿ ವಾಹನಗಳನ್ನು ಪುತ್ತೂರು ಶ್ರೀ ಮಹಾಲಿಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಬಂಟರ ಭವದ ಮುಂಭಾಗ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶ ತಿಳಿಸಿದೆ. ಜಾಥಾ ಸಾಗುವ ದಾರಿಯಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದ್ದು, ಬಂದೋಬಸ್ತ್ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು 700ರಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ.