ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇಂದು ಪುತ್ತೂರುಗೆ; ಬಿಜೆಪಿ ಅಭ್ಯರ್ಥಿ ಅಶಾ ತಿಮ್ಮಪ್ಪ ಪರ ರೋಡ್ ಶೋ

0

ಪುತ್ತೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ-ವಾಹನ ಸಂಚಾರದಲ್ಲಿ ಬದಲಾವಣೆ

ಎಸ್‌ಪಿಜಿ, ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಮನ

ಸುಮಾರು 500 ಮಂದಿ ಸಿಬ್ಬಂದಿಗಳ ನಿಯೋಜನೆ

ಪುತ್ತೂರು:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇ 6ರಂದು ಪುತ್ತೂರುಗೆ ಆಗಮಿಸಿ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರ ರೋಡ್‌ಶೋ ನಡೆಸಿ ಮತಯಾಚಿಸಲಿದ್ದಾರೆ. ಯೋಗಿ ಆದಿತ್ಯನಾಥ್ ಭೇಟಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಉತ್ತರಪ್ರದೇಶದಿಂದಲೂ ಪೊಲೀಸರನ್ನು ಕರೆಸಲಾಗಿದೆ.

ರೋಡ್ ಶೋ ಪುತ್ತೂರು ಪ್ರಧಾನ ಅಂಚೆ ಕಚೇರಿಯ ಬಳಿಯಂದ ಹೊರಟು ಮುಖ್ಯರಸ್ತೆಯಲ್ಲಿ ಸಾಗಿ ಕೋರ್ಟ್ ರಸ್ತೆಯ ಮೂಲಕ ಕಿಲ್ಲೆಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಯೋಗಿ ಆದಿತ್ಯನಾಥ್ ಅವರು ತೆರೆದ ವಾಹನವಾಗಿರುವ ವಿಶೇಷ ಬಸ್‌ನಲ್ಲಿ ತೆರಳಲಿದ್ದಾರೆ. ರೋಡ್ ಶೋ ಬಳಿಕ ಕಿಲ್ಲೆ ಮೈದಾನದಲ್ಲಿ ಬೃಹತ್ ಸಮಾವೇಶ ಇರುವ ಹಿನ್ನೆಲೆಯಲ್ಲಿ ಕಿಲ್ಲೆ ಮೈದಾನವನ್ನೇ ಕೇಂದ್ರೀಕರಿಸಿ ಎಸ್‌ಪಿಜಿ, ಬ್ಲ್ಯಾಕ್ ಕ್ಯಾಟ್ ಕಮಾಂಡೋ ಅಲ್ಲದೆ ಪುತ್ತೂರು ಉಪವಿಭಾಗದ ಸುಮಾರು 500ಕ್ಕೂ ಮಿಕ್ಕಿ ಪೊಲೀಸ್ ಸಿಬ್ಬಂದಿಗಳನ್ನು ವಿವಿಧ ಸ್ಥಳಗಳಲ್ಲಿ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಭದ್ರತೆಯನ್ನು ಹೆಚ್ಚಿಸಲು ಪೊಲೀಸರು ವಿಶೇಷ ಸಶಸ್ತ್ರ ಪೊಲೀಸ್ ಶಿಬಿರದಿಂದ ಮತ್ತು ಇತರ ಜಿಲ್ಲೆಗಳಿಂದಲೂ ಸಿಬ್ಬಂದಿಗಳನ್ನು ಕರೆಸಲಿದ್ದು ಸಂಪೂರ್ಣ ನಿಯೋಜನೆಯ ಮೇಲ್ವಿಚಾರಣೆಯನ್ನು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಡುತ್ತಾರೆ.ತುರ್ತು ಸಂದರ್ಭಗಳನ್ನು ಎದುರಿಸಲು ಸಾಕಷ್ಟು ಸಂಖ್ಯೆಯ ಸ್ಟ್ರೈಕಿಂಗ್ ಪಡೆಗಳು ಸಹ ಇರಲಿದೆ.

ರೋಡ್ ಶೋ ಹಿನ್ನೆಲೆ ಅಂಗಡಿಗಳಿಗೆ ನೋಟೀಸ್: ಯೋಗಿ ಆದಿತ್ಯನಾಥ್ ಅವರ ರೋಡ್ ಶೋ ಹಿನ್ನೆಲೆಯಲ್ಲಿ ಅವರು ಹೋಗುವ ರಸ್ತೆಗಳ ಅಕ್ಕಪಕ್ಕದ ಎಲ್ಲ ಅಂಗಡಿಗಳಿಗೆ, ಸಂಸ್ಥೆಗಳಿಗೆ ಈಗಾಗಲೇ ಪೊಲೀಸರು ನೋಟೀಸ್ ನೀಡಿದ್ದಾರೆ. ಅಂಗಡಿಯಲ್ಲಿರುವವರ ಸಂಖ್ಯೆ ಪಡೆದುಕೊಂಡಿರುವ ಪೊಲೀಸರು ತಮ್ಮ ತಮ್ಮ ಕಟ್ಟಡದ ಮುಂದೆ ರಸ್ತೆಗೆ ತೊಂದರೆಯಾಗುವಂತೆ ವಾಹನ ಪಾರ್ಕ್ ಮಾಡದಂತೆ ಸೂಚನೆ ನೀಡಿದ್ದಾರೆ.

ವಾಹನ ಸಂಚಾರ ನಿಷೇಧ, ವಾಹನ ನಿಲುಗಡೆ ನಿಷೇಧ: ಯೋಗಿ ಆದಿತ್ಯನಾಥ್ ಭೇಟಿ ವೇಳೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕೆಲವೊಂದು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಮತ್ತು ವಾಹನ ನಿಲುಗಡೆ ನಿಷೇಽಸಿ ದ.ಕ.ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.

ಪೊಲೀಸರಿಂದ ರಿಹರ್ಸಲ್: ಯೋಗಿ ಆದಿತ್ಯನಾಥ್ ಪುತ್ತೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮೇ 5ರಂದೇ ಪೊಲೀಸರು ಬದಲಿ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮಾಡಿದರು. ದೇವಳಕ್ಕೆ ತೆರಳಿ ಯೋಗಿಯವರು ಎಲ್ಲಿ ನಿಂತು ದೇವರ ದರುಶನ ಮಾಡುತ್ತಾರೆ. ಅವರಿಗೆ ಪ್ರಸಾದ ಕೊಡುವ ಅರ್ಚಕರು ಯಾರು, ಅವರೊಂದಿಗೆ ಆಡಳಿತ ಸಮಿತಿಯವರು ಯಾರೆಲ್ಲ ಇರುತ್ತಾರೆಂಬ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಮೇ 5ರಂದು ಮಧ್ಯಾಹ್ನದ ಬಳಿಕವೇ ಕಿಲ್ಲೆ ಮೈದಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಲಕ್ನೋದಿಂದ ಹೊರಡಲಿರುವ ಯೋಗಿ..

ಬೆಳಿಗ್ಗೆ 7.30ಕ್ಕೆ ಲಕ್ನೋ ವಿಮಾನ ನಿಲ್ದಾಣದಿಂದ ಹೊರಡಲಿರುವ ಯೋಗಿ ಆದಿತ್ಯನಾಥ್‌ರವರು ಶಿವಮೊಗ್ಗ, ಚಿಕ್ಕಮಗಳೂರು ಚುನಾವಣಾ ಪ್ರಚಾರ ಕಾರ್ಯ ಮುಗಿಸಿ 11.25ಕ್ಕೆ ಹರಿಹರಪುರ ಹೆಲಿಪ್ಯಾಡ್‌ನಿಂದ ಹೊರಟು 11.45ಕ್ಕೆ ಮೊಟ್ಟೆತ್ತಡ್ಕ ಎನ್‌ಆರ್‌ಸಿಸಿ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ.ಅಲ್ಲಿಂದ 11.50ಕ್ಕೆ ಹೊರಟು ರಸ್ತೆ ಮಾರ್ಗವಾಗಿ ಆಗಮಿಸಿ ಮಹಾಲಿಂಗೇಶ್ವರ ದೇವಳದ ಬಳಿಯಿಂದ ಕಿಲ್ಲೆಮೈದಾನದ ತನಕ ರೋಡ್‌ಶೋನಲ್ಲಿ ಭಾಗವಹಿಸಿ, ಕಿಲ್ಲೆ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ರಸ್ತೆ ಮಾರ್ಗವಾಗಿ ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ಗೆ ಆಗಮಿಸಿ ಅಲ್ಲಿಂದ 12.50ಕ್ಕೆ ಕಾರ್ಕಳಕ್ಕೆ ತೆರಳಲಿದ್ದಾರೆ.ಸಂಜೆ 4 ಗಂಟೆಗೆ ಹೊನ್ನಾವರ ಹೆಲಿಪ್ಯಾಡ್‌ನಿಂದ ಹೊರಟು 4.40ಕ್ಕೆ ಬಂಟ್ವಾಳ ಹೆಲಿಪ್ಯಾಡ್‌ಗೆ ಆಗಮಿಸಿ 4.50ಕ್ಕೆ ಬಿಸಿರೋಡ್‌ನಿಂದ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರ ರೋಡ್ ಶೋದಲ್ಲಿ ಭಾಗವಹಿಸಿ 5.40ಕ್ಕೆ ಬಂಟ್ವಾಳದಿಂದ ಹೊರಟು 6.20ಕ್ಕೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಲಕ್ನೋಗೆ ಹಿಂತಿರುಗಲಿದ್ದಾರೆ.‌ ಪುತ್ತೂರು ಭೇಟಿ ಕಾರ್ಯಕ್ರಮದ ವೇಳೆ ಯೋಗಿ ಆದಿತ್ಯನಾಥ್ ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ರೋಡ್ ಶೋದಲ್ಲಿ ಭಾಗವಹಿಸುವ ಬಿಜೆಪಿ ಕಾರ್ಯಕರ್ತರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿ ಜಮಾಯಿಸಲಿದ್ದು, ಅಲ್ಲಿಂದ ಪ್ರಧಾನ ಅಂಚೆ ಕಚೆರಿಯ ತನಕ ಡಿ.ಝೋನ್ ಇರುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

45 ನಿಮಿಷ 8೦೦ ಮೀ. ರೋಡ್ ಶೋ.

ಯೋಗಿ ಆದಿತ್ಯನಾಥ್ ಅವರ ಪುತ್ತೂರು ಭೇಟಿ ಕಾರ್ಯಕ್ರಮ ಒಟ್ಟು 45 ನಿಮಿಷಗಳ ಕಾಲ ಇರುತ್ತದೆ ಮತ್ತು 800 ಮೀಟರ್ ತನಕ ಮಾತ್ರ ಅವರ ಪಾದಯಾತ್ರೆ ನಡೆಯಲಿದೆ ಎಂದು ಮಾಹಿತಿ ಲಭಿಸಿದೆ.

ವಾಹನ ಸಂಚಾರದಲ್ಲಿ ಬದಲಾವಣೆ

ಪುತ್ತೂರು: ಮೇ.6ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಪುತ್ತೂರಿಗೆ ಆಗಮಿಸುತ್ತಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ರವರು ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಯೋಗಿ ಆದಿತ್ಯನಾಥ್‌ರವರು ಪುತ್ತೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಪುತ್ತೂರು ನಗರದಲ್ಲಿ ರೋಡ್ ಶೋ ಹಾಗೂ ಕಿಲ್ಲೆ ಮೈದಾನದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡುವ ನಿಟ್ಟಿನಲ್ಲಿ ಪುತ್ತೂರು ನಗರ ವ್ಯಾಪ್ತಿಯಲ್ಲಿ, ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಪಾರ್ಕಿಂಗ್ ಸ್ಥಳ ಹಾಗು ವಾಹನಗಳು ಬದಲಿ ರಸ್ತೆ ಮಾರ್ಗದ ಮೂಲಕ ಸಂಚರಿಸಲು ಆದೇಶಿಸಲಾಗಿದೆ.

ಈ ಅದೇಶದ ಅನ್ವಯ, ಸದ್ರಿ ರಸ್ತೆಯಲ್ಲಿ ಅವಶ್ಯವಿರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಪೊಲೀಸ್ ಆಧೀಕ್ಷಕರು, ದ.ಕ. ಜಿಲ್ಲೆ, ಮಂಗಳೂರು ರವರು ಮೋಟಾರು ವಾಹನ ಕಾಯಿದೆ 1988 ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಾವಳಿ 1989ರ ನಿಯಮ 221ಎ(2) ರ ಪ್ರಕಾರ ಅಽಕಾರ ಹೊಂದಿದವರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸದರಿ ಆದೇಶವನ್ನು ಕಾರ್ಯರೂಪಕ್ಕೆ ತರುವಾಗ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.

ವಾಹನ ಸಂಚಾರ ನಿಷೇಧ

ಮೇ 6ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 2.೦೦ ಗಂಟೆಯವರೆಗೆ ರಾಷ್ಟ್ರೀಯ ಹೆದ್ದಾರಿ 275ರ ಲಿನೆಟ್ ಜಂಕ್ಷನ್ ನಿಂದ ಮುಕ್ರಂಪಾಡಿಯವರೆಗೆ ಹಾಗೂ ಮುಕ್ರಂಪಾಡಿಯಿಂದ ಮೊಟ್ಟೆತ್ತಡ್ಕದವರೆಗೆ ಸದರಿ ರಸ್ತೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಕಾನ್ ವೇ ಬರುವಾಗ ಹಾಗೂ ಹೋಗುವಾಗ ತುರ್ತು ಮತ್ತು ವೈದ್ಯಕೀಯ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಿದೆ. ಬೊಳುವಾರು ಜಂಕ್ಷನ್‌ನಿಂದ ಗಾಂಧಿಕಟ್ಟೆವರೆಗೆ ಮತ್ತು ಕಿಲ್ಲೆ ಮೈದಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಹಾಗೂ ಕೋರ್ಟ್‌ರಸ್ತೆಯಲ್ಲಿ ತುರ್ತು ಮತ್ತು ವೈದ್ಯಕೀಯ ವಾಹನಗಳನ್ನು ಹೊರತುಪಡಿಸಿ ಸದರಿ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಿದೆ.

ಬದಲಿ ರಸ್ತೆ ಮಾರ್ಗ: ಮುಂಗಳೂರು ಮತ್ತು ಕಡಬ ಕಡೆಯಿಂದ ಸಂಚರಿಸುವ ಲಘು ವಾಹನಗಳು ಹಾಗೂ ಸುಳ್ಯ ಮತ್ತು ಸಂಪ್ಯ ಕಡೆಗೆ ಸಂಚರಿಸುವ ವಾಹನಗಳು ಲಿನೆಟ್ ಜಂಕ್ಷನ್- ಬೊಳುವಾರು ಜಂಕ್ಷನ್- ಪಡೀಲ್- ಕೊಟೇಚಾ ಹಾಲ್- ಸಾಲ್ಮರ- ಪುರುಷರಕಟ್ಟೆ- ಪಂಜಳ- ಪರ್ಪುಂಜ ಮಾರ್ಗವನ್ನು ಬಳಸಬೇಕು. ಸುಳ್ಯ ಕಡೆಯಿಂದ ಬರುವ ಲಘು ವಾಹನಗಳು ಪರ್ಪುಂಜ ಕ್ರಾಸ್ ಪಂಜಳ ಪುರುಷರಕಟ್ಟೆ ದರ್ಬೆ ಅರುಣಾ ಥಿಯೇಟರ್ ಸಾಲ್ಮರ ಪಡೀಲ್ ಬೊಳುವಾರು ಲಿನೆಟ್ ಜಂಕ್ಷನ್ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸಬೇಕು.

ಪಾರ್ಕಿಂಗ್ ಸ್ಥಳ: ಕಾರ್ಯಕ್ರಮಕ್ಕೆ ಆಗಮಿಸುವವರರು ಒಂದು ಗಂಟೆ ಮುಂಚಿತವಾಗಿಯೇ ವಾಹನಗಳನ್ನು ಪುತ್ತೂರು ಶ್ರೀಮಹಾಲಿಂಗೇಶ್ವರ
ದೇವಸ್ಥಾನದ ಗದ್ದೆಯಲ್ಲಿ, ಬಂಟರ ಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.

ವಾಹನ ನಿಲುಗಡೆ ನಿಷೇಧ: ಬೆಳಿಗ್ಗೆಯಿಂದ ಕಾರ್ಯಕ್ರಮ ಮುಗಿಯುವ ವರೆಗೆ ಶ್ರೀಧರ್ ಭಟ್ ಜಂಕ್ಷನ್‌ನಿಂದ ಗಾಂಧಿಕಟ್ಟೆ ಹಾಗೂ ಗಾಂಧಿಕಟ್ಟೆಯಿಂದ ಕೋರ್ಟ್ ರಸ್ತೆ ಮೂಲಕ ಕಿಲ್ಲೆ ಮೈದಾನ ಹಾಗೂ ಕಿಲ್ಲೆ ಮೈದಾನದ ಸುತ್ತಮುತ್ತ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here