ಉಪ್ಪಿನಂಗಡಿ : ಕಳೆದ ಒಂದು ತಿಂಗಳಿಂದ ಬತ್ತಿ ಹೋಗಿ ಹರಿವು ಸ್ಥಗಿತಗೊಂಡಿದ್ದ ನೇತ್ರಾವತಿ ನದಿಯಲ್ಲಿ ಕಳೆದೆರಡು ದಿನಗಳಿಂದ ಅಲ್ಲಲ್ಲಿ ಸುರಿಯತೊಡಗಿದ ಮಳೆಯ ಪರಿಣಾಮ ಗುರುವಾರ ಮುಂಜಾನೆಯಿಂದಲೇ ನೀರಿನ ಹರಿವು ಪ್ರಾರಂಭಗೊಂಡಿದ್ದು, ಮತ್ತೆ ನದಿಯು ಜೀವಂತಿಕೆಯನ್ನು ಪಡೆದಂತಾಗಿದೆ.
ಎಪ್ರಿಲ್ 6 ನೇ ತಾರೀಕಿನಿಂದ ಹರಿವು ಸ್ಥಗಿತಗೊಂಡು ಬಳಿಕದ ದಿನಗಳಲ್ಲಿ ಸಂಪೂರ್ಣ ಬರಾಡಾಗಿದ್ದ ನೇತ್ರಾವತಿ ನದಿಯು ಇತಿಹಾಸದಲ್ಲಿ ಕಂಡು ಕೇಳಿರದ ರೀತಿಯಲ್ಲಿ ಸಂಪೂರ್ಣ ಬಯಲಾಗಿತ್ತು. ಜಲಚರಗಳು ಜೀವಕಳೆದುಕೊಂಡು ಪಕ್ಷಿಗಳಿಗೆ ಆಹಾರವಾಗುತ್ತಿದ್ದ ದೃಶ್ಯ ಮನ ಕರಗುವಂತಿತ್ತು.
ಈ ಮಧ್ಯೆ ಚಂಡ ಮಾರುತದ ಕಾರಣಕ್ಕೆ ಕಳೆದೆರಡು ದಿನಗಳಿಂದ ನದಿ ಪಾತ್ರದ ಸ್ಥಳಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇದೀಗ ನದಿಯಲ್ಲಿ ಮತ್ತೆ ನೀರಿನ ಹರಿವು ಕಾಣಿಸಿಕೊಂಡಿದೆ. ಕ್ಷೀಣವಾದ ರೀತಿಯಲ್ಲಿ ನೀರಿನ ಹರಿವು ಪ್ರಾರಂಭಗೊಂಡಿದೆಯಾದರೂ ನೀರಿಲ್ಲದೆ ಬಯಲಿನಂತಾಗಿದ್ದ ನೇತ್ರಾವತಿ ನದಿ ಇದೀಗ ಉಪ್ಪಿನಂಗಡಿಯಲ್ಲಿ ಮತ್ತೆ ಜೀವಂತಿಕೆಯನ್ನು ಪಡೆದಂತಾಗಿದೆ.
ಭಾರೀ ಗಾಳಿ ಮಳೆ :
ಗುರುವಾರದಂದು ಸಾಯಂಕಾಲ 4 ಗಂಟೆ ಸುಮಾರಿಗೆ ಸಾಧಾರಣ ಮಳೆ ಸುರಿಯಿತ್ತಾದರೂ , ರಾತ್ರಿ 7.30 ರರ ಬಳಿಕ ಭಾರೀ ಗಾಳಿಯೊಂದಿಗೆ ಸಿಡಿಲಬ್ಬರದ ಮಳೆ ಸುರಿಯಿತು. ಹೆದ್ದಾರಿ ಅಗಲೀಕರಣದ ಕಾರಣಕ್ಕೆ ನಡೆಯುತ್ತಿರುವ ಕಾಮಗಾರಿಯಿಂದಾಗಿ ಹಲವೆಡೆ ಚರಂಡಿಗಳು ಮುಚ್ಚಲ್ಪಟ್ಟಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದೆ ಸಮಸ್ಯೆಗಳು ಸೃಷ್ಠಿಸಲ್ಪಟ್ಟಿದೆ.