ಪುತ್ತೂರು : ಪುತ್ತೂರು ಬಸ್ ನಿಲ್ದಾಣದ ಬಳಿ ಬಿಜೆಪಿ ನಾಯಕರ ಚಿತ್ರಕ್ಕೆ ಚಪ್ಪಲಿ ಹಾರಹಾಕಿ ಶೃದ್ಧಾಂಜಲಿ ಅರ್ಪಿಸಿ ಪ್ಲೆಕ್ಸ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ಬಳಿಕ ಅವರು ನೀಡಿದ ಮಾಹಿತಿಯಂತೆ 7 ಮಂದಿಯನ್ನು ಬಂಧಿಸಿದ್ದರು. ಬಂಧಿತ 9 ಆರೋಪಿಗಳಿಗೆ ಪುತ್ತೂರು ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದು ಇದಕ್ಕೆ ಸಂಬಂಧಪಟ್ಟಂತೆ ಫೋಟೋ, ವಿಡಿಯೋ,ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬ್ಯಾನರ್ ಹಾಕಿರುವುದರ ವಿರುದ್ಧ ಮೆ.15ರಂದು ಬಿಜೆಪಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಪುತ್ತೂರು ನಗರ ಠಾಣೆಯಲ್ಲಿ ಸರಕಾರಿ ಆಸ್ತಿ ದುರುಪಯೋಗ ಮತ್ತು ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿರುವುದಾಗಿ ದೂರು ಸಲ್ಲಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಅದೇ ದಿನ ನರಿಮೊಗರು ಗ್ರಾಮ ನಿವಾಸಿಗಳಾದ ವಿಶ್ವನಾಥ ಮತ್ತು ಮಾಧವ ಎಂಬವರನ್ನು ವಶಕ್ಕೆ ಪಡೆದ ಪೋಲೀಸರು ಮೇ 15ರ ರಾತ್ರಿ ಅಭಿ, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷೀತ್, ಗುರುಪ್ರಸಾದ್ ಎಂಬವರನ್ನು ವಶಕ್ಕೆ ಪಡೆದಿದ್ದರು.
ವಿಚಾರಣೆ ವೇಳೆ ವಶಕ್ಕೆ ಪಡೆದವರಿಗೆ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಲಾಗಿದ್ದು ಥಳಿತಕ್ಕೊಳಗಾದ ಯುವಕರ ಚಿತ್ರ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆಯೂ ಇಂತಹ ಬ್ಯಾನರ್ ಗಳನ್ನು ಪುತ್ತೂರಿನಲ್ಲಿ ಅಳವಡಿಸಲಾಗಿತ್ತು ಆಗ ಪೌರಾಯುಕ್ತರು ಯಾಕೆ ದೂರು ಸಲ್ಲಿಸಿಲ್ಲ ಎಂದು ಪ್ರಶ್ನಿಸಿರುವ ನೆಟ್ಟಿಗರು ಪೋಲೀಸ್ ದೌರ್ಜನ್ಯದ ವಿರುಧ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಪ್ರತಿಕ್ರಿಯೆ
ಈ ಕುರಿತಾಗಿ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಬಿಜೆಪಿ ರಾಜ್ಯಾಧ್ಯಕ್ಷರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದ ಕುರಿತಾಗಿ ಆದಂತಹ ಘಟನೆಗಳು ಜಾಲತಾಣಗಳಲ್ಲಿ ಹರಿದಾಡುತ್ತಿರುವದು ಗಮನಕ್ಕೆ ಬಂದಿದೆ ಈ ಬಗ್ಗೆ ಸತ್ಯಾಂಶ ತಿಳಿಯಲು ವಿಚಾರಣೆ ಕೈಗೊಳ್ಳಲಾಗುವುದು ಎಂದಿದ್ದಾರೆ.