ಕಾಂಗ್ರೆಸ್‌ನವರು ಮಾಡಿಸಿದ್ದಾರೆನ್ನುವ ಮುಖಂಡರಿಗೆ ಮಾನ ಮರ್ಯಾದೆ ಇದೆಯಾ?!-ಶ್ರೀಕೃಷ್ಣ ಉಪಾಧ್ಯಾಯ

0

ಪುತ್ತೂರು: ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ಕಾಂಗ್ರೆಸ್ ಮಾಡಿಸಿದ್ದು ಎಂದು ಹೇಳೋ ಮುಖಂಡರಿಗೆ ನಯಾಪೈಸೆ ಮರ್ಯಾದೆ ಇದೆಯೇ?, ಸರ್ಕಾರ ರಚನೆಯಾಗೋ ಮೊದಲೇ ಅವರು ಯಾಕಾಗಿ ಮಾಡಿಸ್ತಾರೆ ಎಂದು ಶ್ರೀಕೃಷ್ಣ ಉಪಾಧ್ಯಾಯ ಅವರು ಪ್ರಶ್ನಿಸಿದ್ದಾರೆ.


ಮೇ 20ರಂದು `ಸುದ್ದಿ’ ಜೊತಗೆ ಮಾತನಾಡಿದ ಅವರು, ಈ ಪ್ರಕರಣ ಕಾಂಗ್ರೆಸ್ಸಿಗರ ಕುಮ್ಮಕ್ಕಿನಿಂದ ನಡೆದಿದೆ ಎನ್ನುವ ಬಿಜೆಪಿ ಮುಖಂಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಪೆಟ್ಟು ತಿಂದ ಹಿಂದೂ ಕಾರ್ಯಕರ್ತರು ನೀಡಿದ ಹೇಳಿಕೆಯಲ್ಲಿ ಡಿವೈಎಸ್ಪಿ ಹೇಳುತ್ತಿದ್ದ ಒತ್ತಡ, ಕರೆಗಳ ಮಾತನ್ನು ಉಲ್ಲೇಖಿಸಿದ್ದಾರೆ. ಇದನ್ನು ಗಮನಿಸುವಾಗ ಈ ಘಟನೆಯ ಹಿಂದೆ ರಾಜಕೀಯ ಒತ್ತಡ ಇದ್ದುದು ಸ್ಪಷ್ಟವಾಗುತ್ತದೆ. ಇದನ್ನು ಕಾಂಗ್ರೆಸ್ ಮಾಡಿಸಿದ್ದು ಎಂದು ಹೇಳೋ ಮುಖಂಡರಿಗೆ ನಯಾಪೈಸೆ ಮರ್ಯಾದೆ ಇದೆಯೇ? ಸರ್ಕಾರ ರಚನೆಯಾಗೋ ಮೊದಲೇ ಅವರು ಯಾಕಾಗಿ ಮಾಡಿಸ್ತಾರೆ? ಅವರ ಉದ್ದೇಶ ಏನು ಎಂದು ಪ್ರಶ್ನಿಸಿದರು.


ಯಾರಾದರೂ ಈ ತರದ ಅನ್ಯಾಯ ಮಾಡಬಾರದು. ದೌರ್ಜನ್ಯಕ್ಕೊಳಗಾದವರು ಪುತ್ತಿಲ ಬಣದಲ್ಲಿ ಗುರುತಿಸಿಕೊಂಡವರಲ್ಲ, ಫೀಲ್ಡ್ ಮಾಡಿದವರಲ್ಲ. ಹಿಂದೂಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು. ಇದರ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡಿರಬಹುದು ಎನ್ನುವುದು ಕಾಮನ್ ಸೆನ್ಸ್. ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಕೂಗಿದ ಮಾಜಿ ಶಾಸಕ ಸಂಜೀವ ಮಠಂದೂರು ಮೇಲೆ ಸಂಶಯ ಯಾಕೆಂದರೆ ಅವರು ಗಾಯಾಳು ಯುವಕರನ್ನು ನೋಡಲೂ ಬರಲಿಲ್ಲ. ಸಂಜೀವ ಮಠಂದೂರು, ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಆಸ್ಪತ್ರೆಗೆ ಬಂದಿಲ್ಲ. ತಮಗಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ನೋಡಲು ಬರಬೇಕೆನ್ನುವ ಕನಿಷ್ಠ ಪ್ರಜ್ಞೆಯಿಲ್ಲ. ಹಾಗಿದ್ದಾಗ ಇವರೇ ಮಾಡಿಸಿದ್ದು ಅಂತ ನಾವು ಯಾಕೆ ಹೇಳಬಾರದು? ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ಹೇಳಿದರು.


2 ದಿನಗಳಲ್ಲಿ ಇದರ ಹಿಂದೆ ಯಾರಿದ್ದಾರೋ ಅವರ ಹೆಸರು ಬಹಿರಂಗಪಡಿಸ್ತೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ. ಈ ಮೂಲಕ ಇವರ ಮಾನ ಹರಾಜಾಗಬೇಕು. ನಾವೆಲ್ಲರೂ ಬಿಜೆಪಿ ಬಿಜೆಪಿ ಎಂದು ಜಪ ಮಾಡ್ತಿದ್ದವರು. ಇಂತಹವರ ಮೇಲೆ ಪೊಲೀಸ್ ದೌರ್ಜನ್ಯ ಮಾಡಿಸಿರುವುದು ತುಂಬಾ ಬೇಜಾರಿನ ವಿಷಯ. ಇದು ದೇವರು ಮೆಚ್ಚದ ಕೆಲಸ. ಸಂಘಟನೆಗಳು ಒಟ್ಟಾಗಿವೆ. ಸತ್ಯ ಹೊರಬರಬೇಕೆಂದು ಎಲ್ಲರೂ ಹೇಳ್ತಿದ್ದಾರೆ. ಹಿಂದೂ ಸಮಾಜ ರಾಜಕೀಯ ಹಿತಾಸಕ್ತಿ ಮರೆತು ನಮ್ಮ ಕಾರ್ಯಕರ್ತರಿಗೆ ನ್ಯಾಯ ಕೊಡಿಸಬೇಕೆಂದು ಶುದ್ಧ ಮನಸ್ಸಿನಿಂದ ಒಗ್ಗಟ್ಟಾಗಿ ಸರಿಯಾದ ನ್ಯಾಯಯುತ ಹೋರಾಟ ನಡೆದರೆ ನ್ಯಾಯ ಸಿಗಬಹುದೆನ್ನುವ ವಿಶ್ವಾಸವಿದೆ ಎಂದು ಹೇಳಿದರು.


ಕಾರ್ಯಕರ್ತರಿಗೆ ಆದ ಅನ್ಯಾಯ ಯಾಕೆ ಪ್ರಚಾರ ಆಗಬಾರದು? ಇದು ಅನ್ಯಾಯವನ್ನು ಮುಚ್ಚಿಹಾಕುವ ಪ್ರಯತ್ನ ಮಾಡ್ತಿರೋದ ? ಕಾರ್ಯಕರ್ತರಿಗೆ ಷಡ್ಯಂತ್ರ ಮಾಡಿ ಹೊಡೆಸಿದ ವಿಚಾರ ಪ್ರಚಾರ ಆಗಲೇಬೇಕು. ಇಡೀ ದೇಶವ್ಯಾಪಿಯಾಗಿ ಪ್ರಚಾರ ಆಗಬೇಕು, ನ್ಯಾಯ ಸಿಗಬೇಕು. ಅಪಪ್ರಚಾರಗಳನ್ನು ಮಾಡುತ್ತಾ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಆಗುತ್ತಿದೆ. ಯಾವ ಕಡೆಯಿಂದ ಪ್ರೆಷರ್ ಬಿದ್ದಿದ್ದು ಎನ್ನುವ ಬಗ್ಗೆ ಜನರಿಗೆ ಅಂದಾಜಿದೆ. ಮುಂದಕ್ಕೆ ಕಾನೂನಾತ್ಮಕ ಹೋರಾಟವನ್ನು ಮಾಡಿಯೇ ಮಾಡುತ್ತೇವೆ ಎಂದು ಶ್ರೀಕೃಷ್ಣ ಉಪಧ್ಯಾಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here