ಕಾಂಗ್ರೆಸ್ ಕಾರ್ಯಕರ್ತರ ಸಾಂಕೇತಿಕ ಪ್ರತಿಭಟನೆ ಬೆನ್ನಲ್ಲೇ ಸ್ವಚ್ಛಗೊಂಡ ಮುಂಡೂರು ಗ್ರಾಮ ಪಂಚಾಯತ್ ವಠಾರ

0

ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ವಠಾರ ತ್ಯಾಜ್ಯ ರಾಶಿಯಿಂದ ಕೂಡಿದ್ದು ಸ್ವಚ್ಛತೆ ಮರೀಚಿಕೆಯಾಗಿದೆ ಎಂದು ಆರೋಪಿಸಿ ಅ.3ರಂದು ಕಾಂಗ್ರೆಸ್ ಕಾರ್ಯಕರ್ತರು ಗ್ರಾ.ಪಂಗೆ ದಿಢೀರ್ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿ, ಗ್ರಾ.ಪಂ ಆಡಳಿತವನ್ನು ತರಾಟೆಗೆತ್ತಿಕೊಂಡಿರುವ ಬೆನ್ನಲ್ಲೇ ಗ್ರಾ.ಪಂ ವತಿಯಿಂದ ಗ್ರಾ.ಪಂ ವಠಾರವನ್ನು ಸ್ವಚ್ಛಗೊಳಿಸಲಾಗಿದೆ.


ಗ್ರಾ.ಪಂ ಅಧ್ಯಕ್ಷರು ಸ್ವಚ್ಛತೆ ವಿಚಾರದಲ್ಲಿ ನಿರ್ದೇಶನ ನೀಡಿದ್ದರು. ಇದೀಗ ಗ್ರಾ.ಪಂ ವಠಾರ ಸಂಪೂರ್ಣವಾಗಿ ಸ್ವಚ್ಛಗೊಂಡಿದ್ದು ಶೌಚಾಲಯವನ್ನೂ ಶುಚಿಗೊಳಿಸಲಾಗಿದೆ. ಗ್ರಾ.ಪಂ ಸದಸ್ಯರಾದ ಬಾಬು ಕಲ್ಲಗುಡ್ಡೆ, ಉಮೇಶ್ ಗೌಡ ಅಂಬಟ ಮೊದಲಾದವರು ಸ್ವಚ್ಛತೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಗ್ರಾ.ಪಂ ಸಿಬ್ಬಂದಿ ಸತೀಶ್ ಹಿಂದಾರು, ಸ್ವಚ್ಛತಾ ಸೇನಾನಿಗಳಾದ ಸುಶೀಲ ಮತ್ತು ವಾರಿಜ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ನೇತೃತ್ವದ ಕಾಂಗ್ರೆಸ್ ತಂಡ ಗ್ರಾ.ಪಂ.ಗೆ ಭೇಟಿ ನೀಡಿ ಸ್ವಚ್ಛತೆ ವಿಚಾರದಲ್ಲಿ ಸಾಂಕೇತಿಕ ಪ್ರತಿಭಟನೆ ರೀತಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಅವರ ಮುಂದಾಳತ್ವದಲ್ಲಿ ಗ್ರಾ.ಪಂಗೆ ಮನವಿ ಸಲ್ಲಿಸಿ ಮೂರು ದಿನದ ಮೊದಲು ಸ್ವಚ್ಛತೆ ಮಾಡುವಂತೆ ಗಡುವು ವಿಧಿಸಿದ್ದರು. ಇದೀಗ ಗ್ರಾ.ಪಂ ವಠಾರ ಸಂಪೂರ್ಣವಾಗಿ ಸ್ವಚ್ಛಗೊಂಡಿದೆ. ನಾವು ನೀಡಿದ ಗಡುವಿಗೆ ಮೊದಲೇ ಗ್ರಾ.ಪಂ ವಠಾರವನ್ನು ಸ್ವಚ್ಛಗೊಳಿಸಲಾಗಿದ್ದು ಇದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸುಪ್ರೀತ್ ಕಣ್ಣಾರಾಯ ಹಾಗೂ ಪ್ರವೀಣ್ ಆಚಾರ್ಯ ತಿಳಿಸಿದ್ದಾರೆ.

ಅ.2ರಂದು ಮಾಡಬೇಕಿದ್ದ ಸ್ವಚ್ಛತಾ ಕಾರ್ಯವನ್ನು ಸರಕಾರದ ಸಮೀಕ್ಷೆ ಇದ್ದ ಕಾರಣ ಮುಂದೂಡಲಾಗಿದ್ದು ಮೊದಲೇ ತೀರ್ಮಾನಿಸಿದಂತೆ ಅ.4ರಂದು ಸ್ವಚ್ಛತೆ ಮಾಡಿದ್ದೇವೆ, ಯಾರದೋ ಹೋರಾಟ, ಪ್ರತಿಭಟನೆ ಕಾರಣಕ್ಕೆ ಸ್ವಚ್ಛತೆ ಮಾಡಿದ್ದಲ್ಲ ಎಂದು ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here