ಬೆಟ್ಟಂಪಾಡಿ: ವರ್ಷದ ಮೊದಲ ಮತ್ತು ಕೊನೆಯ ಜಾತ್ರೆ ನಡೆಯುವ ವಿಶೇಷ ಶಿವ ಸಾನ್ನಿಧ್ಯವಾದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಜಾತ್ರೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ 25 ರಂದು ನಡೆಯಿತು. ರಾತ್ರಿ ಭಜನೆ, ಮಹಾಪೂಜೆಯಾಗಿ ದೇವರ ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನೆರವೇರಿತು.
ಎರಡು ಬಾರಿ ಜಾತ್ರೆ – ಆರಂಭ ಮತ್ತು ಕೊನೆಯ ಜಾತ್ರೆ
ಪತ್ತನಾಜೆಗೆ ಸಾಮಾನ್ಯವಾಗಿ ಎಲ್ಲಾ ದೈವ ದೇವರುಗಳ ಉತ್ಸವ ಕೊನೆಗೊಂಡು ದೀಪಾವಳಿಗೆ ಮತ್ತೆ ಆರಂಭಗೊಳ್ಳುವುದು ತುಳುನಾಡಿನ ಧಾರ್ಮಿಕ ರೂಢಿಯಾಗಿದೆ. ದೀಪಾವಳಿ ಕಳೆದು ಕಾರ್ತಿಕ ಹುಣ್ಣಿಮೆಯ ದಿನ ಕ್ಷೇತ್ರದ ವರ್ಷಾವಧಿ ಉತ್ಸವ ನಡೆಯುತ್ತದೆ. ಪತ್ತನಾಜೆಯ ದಿನ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಉತ್ಸವ ಬಲಿ, ಬಟ್ಟಲುಕಾಣಿಕೆ ನಡೆದು ಎರಡನೇ ಜಾತ್ರೆಯು ಕಟ್ಟುಕಟ್ಟಳೆ ರೀತಿಯಲ್ಲಿಯೇ ನಡೆಯುತ್ತಿರುವುದು ವಿಶೇಷ ಎನಿಸಿಕೊಂಡಿದೆ. ಇದು ಮಾಗಣೆಯಲ್ಲಿಯೂ ಪ್ರಸಿದ್ದಿ ಪಡೆದಿದೆ.
ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್ ಕಾನುಮೂಲೆ, ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಸೇರಿದಂತೆ ಊರ ಪರವೂರ ಭಕ್ತಾಭಿಮಾನಿಗಳು ದೇವರ ಉತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.