ಶಾಸಕ ಅಶೋಕ್ ಕುಮಾರ್ ರೈಯವರಿಂದ ಇಲಾಖೆಗಳಿಗೆ ಭೇಟಿ-ಅಧಿಕಾರಿಗಳೊಂದಿಗೆ ಸಭೆ

0

‘ಬಡವರ ಸಮಸ್ಯೆಗಳಿಗೆ ಮೊದಲ ಆದ್ಯತೆಯಲ್ಲಿ ಸೇವೆ ನೀಡಿ-ಶಾಸಕರಿಗೆ ದೂರು ಬಾರದಂತೆ ಕೆಲಸ ಮಾಡಿ’; ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಶಾಸಕರಿಂದ ವಾರ್ನಿಂಗ್

ಪುತ್ತೂರು:ಕ್ಷೇತ್ರದ ನೂತನ ಶಾಸಕರಾಗಿ ಚುನಾಯಿತರಾಗಿರುವ ಅಶೋಕ್ ಕುಮಾರ್ ರೈಯವರು ಈಗಾಗಲೇ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು ಮೇ 26ರಂದು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಕಾರ್ಯನಿರ್ವಹಣೆ ಕುರಿತು ಮಾರ್ಗದರ್ಶನ, ಎಚ್ಚರಿಕೆ ನೀಡಿ ಅಭಿವೃದ್ಧಿ ಕೆಲಸಗಳಿಗೆ ಅಧಿಕಾರಿಗಳ ಸಹಕಾರ ಯಾಚಿಸಿದರು.

ಬಡವರ ಸಮಸ್ಯೆಗಳಿಗೆ ಮೊದಲ ಆದ್ಯತೆಯೊಂದಿಗೆ ಸ್ಪಂದಿಸಿ ತಕ್ಷಣ ಸೇವೆ ಸಿಗಬೇಕು. ಬೇರೆಯವರಿಗೆ ಕೊಡುವುದು ಬೇಡ ಎಂದು ಹೇಳುವುದಿಲ್ಲ. ಆದರೆ ಮೊದಲ ಆದ್ಯತೆ ಬಡವರಿಗೆ ಇರಬೇಕು. ಇದರ ಜೊತೆಗೆ ಸೇವೆಯಲ್ಲಿ ತೊಂದರೆ ಆಗದಂತೆ ನೋಡಬೇಕು. ಈ ಕುರಿತು ಶಾಸಕರಿಗೆ ದೂರು ಬಾರದಂತೆ ಕೆಲಸ ನಿರ್ವಹಿಸಿ. ದೂರು ಬಂದಲ್ಲಿ ನಾನು ಖಂಡಿತಾ ಅದರ ಬಗ್ಗೆ ಗಮನ ಹರಿಸುತ್ತೇನೆ ಎಂದು ನೂತನ ಶಾಸಕ ಅಶೋಕ್ ಕುಮಾರ್ ರೈ ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪುತ್ತೂರು ನಗರಸಭೆಯಲ್ಲಿ ಮೇ 26ರಂದು ಅಧಿಕಾರಿಗಳ ಹಾಗು ಸಿಬ್ಬಂದಿಗಳ ಸಭೆ ನಡೆಸಿದ ಅವರು, ಆಡಳಿತ ಮತ್ತು ಅಭಿವೃದ್ಧಿ ಕಾಮಗಾರಿಗಳು ಮತ್ತು ಮನೆ ನಿವೇಶನ ಅರ್ಜಿ ಬಾಕಿ ಇರುವ ಕುರಿತು ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಅನಕ್ಷರಸ್ಥರು, ಸರಕಾರಿ ಕಚೇರಿಯಲ್ಲಿ ಹೇಗೆ ವ್ಯವಹರಿಸುವುದು ಎಂಬುದೇ ಗೊತ್ತಿಲ್ಲದವರೂ ಕಚೇರಿಗೆ ಬರುತ್ತಾರೆ. ಅವರಿಗೆ ನಗರಸಭೆಯಿಂದ ಸರಿಯಾದ ಸ್ಪಂದನೆ ಸಿಗಬೇಕು. ಮನೆ ಕೊಡುವ ಕೆಲಸ, ಒಳಚರಂಡಿ ವ್ಯವಸ್ಥೆ ಸಹಿತ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿ ಯಾವುದೇ ದೂರುಗಳು ಬರಬಾರದು. ಹೊಸ ಶಾಸಕರ ಮೇಲೆ ಜನರು ಬಹಳ ನೀರಿಕ್ಷೆಯಲ್ಲಿರುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು. ಶಾಸಕರು ಫೋನ್ ಮಾಡುತ್ತಾರೆ. ಹೇಳುತ್ತಾರೆ ಎಂದು ಬೈಯಬೇಡಿ. ಶಾಸಕರನ್ನು ಅರ್ಥ ಮಾಡಿಕೊಳ್ಳಿ. ಶಾಸಕರಲ್ಲಿ ಬಡವರು ಬಂದು ದೂರು ನೀಡಿದರೆ ಖಂಡಿತ ಅದರ ಬಗ್ಗೆ ಗಮನ ಹರಿಸುತ್ತೇವೆ. ಅವರ ಸಮಸ್ಯೆಗೆ ಪರಿಹಾರ ಕ್ರಮ ಆಗಬೇಕು. ನಾನು ಕೂಡಾ 10 ವರ್ಷದಿಂದ ಟ್ರಸ್ಟ್ ಮಾಡಿಕೊಂಡು ಬಡವರ ಸೇವೆ ಮಾಡುತ್ತಿದ್ದೇನೆ. ಮೊದಲು ಪುರಸಭೆಗೆ ಬಹಳ ಹತ್ತಿರವಾದ ಕೆಲಸ ಮಾಡುತ್ತಿದ್ದೆ. ಕೆಲವರಿಗೆ ತೊಂದರೆ ಕೊಡುತ್ತಿದ್ದೆ. ಇನ್ನು ಜಾಸ್ತಿ ಕೊಡಬೇಕಾಗುತ್ತದೆ. ತೊಂದರೆ ಕೊಡದ ರೀತಿಯಲ್ಲಿ ಕೆಲಸ ಮಾಡಬೇಕೆಂದು ನನ್ನ ವಿನಂತಿ ಎಂದರು.

ಈಗ ಟೇಕ್ ಅಪ್ ಮಾಡಿದರೆ 4 ವರ್ಷದಲ್ಲಿ ಇಂಪ್ಲಿಮೆಂಟ್:
ಒಳಚರಂಡಿ ವ್ಯವಸ್ಥೆ ಇವತ್ತು ನಾಳೆ ಆಗುವುದಿಲ್ಲ.ಅದಕ್ಕೆ ಡಿಪಿಆರ್ ಆಗಬೇಕು. ಜಾಗ ಒತ್ತುವರಿ ಮಾಡಬೇಕೆಂಬ ತೊಂದರೆ ಇರುತ್ತದೆ. ಆದರೆ ಅದಕ್ಕೆ ಅನುದಾನ ಬರಬೇಕಾದರೆ ಈಗಲೇ ಟೇಕ್‌ಅಪ್ ಮಾಡಬೇಕು. 4 ವರ್ಷದಲ್ಲಿ ಇಂಪ್ಲಿಮೆಂಟ್ ಆಗುತ್ತದೆ. ಮಂಗಳೂರಿನಲ್ಲಿ ಮಾಡಿದ್ದಾರೆ. ಅಲ್ಲಿ ನನ್ನದೂ ಜಾಗ ಹೋಗಿದೆ. ಆದ್ಯತೆ ಮೇರೆಗೆ ಕೆಲಸ ಮಾಡಿ. ಅನುದಾನ ಸಿಗಬೇಕಾದರೆ ನಾವು ಪ್ರಸ್ತಾವನೆ ಕಳುಹಿಸಬೇಕು. ಒಳಚರಂಡಿಗೆ ಮೊದಲ ಆದ್ಯತೆ ನೀಡಬೇಕು. ಇವತ್ತು ನಾಳೆಯಾದರೂ ಇದು ಬಹಳ ಅಗತ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಕಾನೂನಿನ ಮಧ್ಯೆ ಪರಿಹಾರ ಕಂಡು ಕೊಂಡು ಕೆಲಸ ಮಾಡಿ: ಕಾನೂನು ಬಿಟ್ಟು ಯಾವ ಕೆಲಸ ಮಾಡಲು ಸಾಧ್ಯವಿಲ್ಲ. ಕಾನೂನನ್ನು ಬಿಟ್ಟು ಮಾಡಿ ಎಂದು ಹೇಳುವುದೂ ಇಲ್ಲ. ಕಾನೂನಿನ ಮಧ್ಯೆ ಪರಿಹಾರ ಕಂಡುಕೊಂಡು ಕೆಲಸ ಮಾಡಬೇಕು.ಸಾರ್ವಜನಿಕರಿಗೆ ಸೇವೆ ಕೊಡಿ ಎಂದು ಹೇಳಿದ ಶಾಸಕರು, ಈಗಲೂ ಕೊಡುತ್ತಾ ಇದ್ದೀರಿ. ಇದಕ್ಕಿಂತ ಇನ್ನೂ ಹೆಚ್ಚಿನ ಸರ್ವಿಸ್ ಕೊಡಿ.ಅಽಕಾರಿಗಳನ್ನು ಬಿಟ್ಟು ಕೆಲಸ ಆಗುವುದಿಲ್ಲ. ನಿಮ್ಮ ಸಹಕಾರ ಅಗತ್ಯವಾಗಿ ಇರಲಿ ಎಂಬ ವಿನಂತಿ ಮಾಡುವುದಾಗಿ ಹೇಳಿದರು.

ಹೌಸಿಂಗ್ ಡಿಪಾರ್ಟ್‌ಮೆಂಟ್ ಪ್ರೊಜೆಕ್ಟ್ ಪುತ್ತೂರಿಗೆ ತರಬೇಕು: ಹೌಸಿಂಗ್ ಡಿಪಾರ್ಟ್‌ಮೆಂಟ್‌ಗೆ ಸಂಬಂಧಿಸಿ ಮೈಸೂರು, ಬೆಂಗಳೂರು ಕಡೆಯಲ್ಲಿ ಮನೆ ಕಟ್ಟಿಕೊಡುವ ಕೆಲಸ ಆಗಿದೆ. ಬೆಂಗಳೂರಿನ ಒಂದು ಕಡೆಯಲ್ಲಿ 2 ಲಕ್ಷ ಮನೆ ಕಟ್ಟಿಕೊಡುವ ಕೆಲಸ ಮಾಡಲಾಗಿದೆ. ಅಂತಹ ಪ್ರೊಜೆಕ್ಟ್‌ಗಳನ್ನು ಪುತ್ತೂರಿಗೆ ತರಬಹುದಾ ಎಂಬ ಚಿಂತನೆ ಮಾಡಬೇಕು ಎಂದು ಶಾಸಕರು ಹೇಳಿದರು.

ತಾಲೂಕು ಕಚೇರಿ, ನಗರಸಭೆ ಅತೀ ಹೆಚ್ಚು ದೂರು ಬರುವ ಕೇಂದ್ರ: ಜನರಿಂದ ಅತೀ ಹೆಚ್ಚು ದೂರುಗಳು ಬರುವುದು ತಾಲೂಕು ಕಚೇರಿ ಮತ್ತು ನಗರಸಭೆಯ ವಿರುದ್ಧ. ಈ ಕುರಿತು ಗಮನ ಹರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಕೊಡುವಲ್ಲಿ ಸಹಕರಿಸಿ ಎಂದು ಅಶೋಕ್ ರೈ ಹೇಳಿದರು. ನಗರಸಭೆಯಲ್ಲೂ ಮನೆ ಕೊಡುವ ಅವಕಾಶವಿದೆ. ಆದರೆ ಫಲಾನುಭವಿಗಳಲ್ಲಿ ಸರಿಯಾದ ದಾಖಲೆಗಳಿಲ್ಲ. ಹಲವಾರು ಯೋಜನೆ ಇದ್ದರೂ ಪ್ರಯೋಜನ ಆಗುತ್ತಿಲ್ಲ. ಇವೆಲ್ಲವನ್ನು ತುಲನೆ ಮಾಡಿ ಇರುವುದರಲ್ಲಿ ಉತ್ತಮ ಸೇವೆ ಕೊಡಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರಿನ ಕುಡಿಯುವ ನೀರಿನ ಸರಬರಾಜಿಗೆ ಮೂರು ಗ್ರಾಮಗಳ ಸಂಪರ್ಕ: ಉಪ್ಪಿನಂಗಡಿಯಿಂದ ಪುತ್ತೂರಿಗೆ ಬರುವ ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿ ಮೂರು ಗ್ರಾಮಗಳಿಗೂ ಸಂಪರ್ಕ ಒದಗಿಸುವ ಕುರಿತು ಶಾಸಕರು ಪ್ರಸ್ತಾಪಿಸಿ ಇದರ ಸಾಧಕ ಬಾಧಕಗಳ ಕುರಿತು ಅಧಿಕಾರಿಗಳ ಸಲಹೆ ಪಡೆದರು.
ಪೌರಾಯುಕ್ತ ಮಧು ಎಸ್.ಮನೋಹರ್ ಮಾತನಾಡಿ ಜಲಸಿರಿಯಿಂದ ಈ ಕುರಿತು ಮೂರು ಗ್ರಾಮಗಳಿಗೆ ನೀರಿನ ಸಂಪರ್ಕಕ್ಕೆ ಒಡಂಬಡಿಕೆ ಆಗಿತ್ತು. ಆದರೆ ಅದು ಈಗ ನಿಂತು ಹೋಗಿದೆ ಎಂದರು. ಜಲಸಿರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಮಾದೇಶ್ ಮತ್ತು ನಗರಸಭೆ ನೀರಿನ ವಿಭಾಗದ ಮುಖ್ಯಸ್ಥ ವಸಂತ್ ಅವರು ಮಾತನಾಡಿ ಜಲಸಿರಿಯಿಂದ ಈ ಯೋಜನೆ ಬೇಡ. ಅದರ ಬದಲು ಜಲಜೀವನ್ ಮಿಷನ್ ಮೂಲಕ ಮೂರು ಗ್ರಾಮಗಳಿಗೆ ಸಂಪರ್ಕ ಯೋಜನೆ ಮಾಡುವ ಪ್ರಸ್ತಾವನೆ ಇದೆ ಎಂದರು. ಶಾಸಕರು ಮಾತನಾಡಿ ಅದು ಇಂಪ್ಲಿಮೆಂಟ್ ಆಗಬೇಕಾದರೆ ಮೂರ‍್ನಾಲ್ಕು ವರ್ಷ ಬೇಕಾದೀತು. ಅಲ್ಲಿನ ತನಕ ಮೂರು ಗ್ರಾಮಕ್ಕೆ ನೀರಿನ ಸಮಸ್ಯೆ ಎದುರಾಗಲಿದೆ.ಈ ನಿಟ್ಟಿನಲ್ಲಿ ಅದನ್ನು ಕಾಯದೆ ನೀರಿನ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದರು. ಪೌರಾಯುಕ್ತರು ಮಾತನಾಡಿ ನಮಗೆ ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ ಎಂದರು.

ಬೆಳ್ಳಿಪ್ಪಾಡಿ ಡ್ಯಾಮ್ ಬೇಕಾ ಬೇಡವಾ ?: ಬೆಳ್ಳಿಪ್ಪಾಡಿ ಸಮೀಪ ರೂ.400 ಕೋಟಿಯಲ್ಲಿ ಡ್ಯಾಮ್‌ಗೆ ಪ್ರಸ್ತಾವನೆ ಬಂದಿದೆ. ಅದರಿಂದ ಪುತ್ತೂರು ನಗರಸಭೆಗೆ ನೀರಿನ ಸೌಲಭ್ಯ ಮಾಡಬಹುದಾ ಅಥವಾ ಇದು ಕೇವಲ ಗ್ರಾಮ ಸಂಪರ್ಕಕ್ಕೆ ಮಾತ್ರ ಪ್ರಯೋಜವಾಗುವುದೇ ಎಂದು ಶಾಸಕರು ಪ್ರಶ್ನಿಸಿದರು. ಈ ಕುರಿತು ಪೌರಾಯುಕ್ತರು ಮಾತನಾಡಿ ಬೆಳ್ಳಿಪ್ಪಾಡಿ ಡ್ಯಾಮ್‌ನಲ್ಲಿ ನೀರಿನ ಸಂಗ್ರಹಣೆ ಆದರೆ ನಗರಸಭೆಯ ನೆಕ್ಕಿಲಾಡಿಯಲ್ಲಿರುವ ಡ್ಯಾಮ್‌ನಲ್ಲಿ ನೀರಿನ ಸಂಗ್ರಹಣೆಗೆ ತೊಂದರೆ ಆಗುತ್ತದೆ ಎಂದರು.ನೆಕ್ಕಿಲಾಡಿಯ ಡ್ಯಾಮ್‌ನ್ನು ಪರಿಶೀಲಿಸಿ ಅದನ್ನು ಏರಿಸುವ ಕುರಿತು ಶಾಸಕರು ಪ್ರಸ್ತಾಪಿಸಿದರು.

ಮಳೆಗಾಲದಲ್ಲಿ ಹೂಳೆತ್ತುವ ಕಾಮಗಾರಿ ಮಾಡಿ: ಮಳೆಗಾಲದಲ್ಲಿ ಚರಂಡಿ ಬ್ಲಾಕ್ ಆಗುವುದು ಸಹಜ.ಈ ನಿಟ್ಟಿನಲ್ಲಿ ಈಗಲೇ ಹೂಳೆತ್ತುವ ಕಾಮಗಾರಿ ನಡೆಸಿ. ಅಂಕಲ್ ಸ್ವೀಟ್ಸ್ ಬಳಿ ಮಳೆ ನೀರು ರಸ್ತೆಯಲ್ಲಿ ಹೋಗುತ್ತಿದೆ ಎಂಬ ದೂರು ಬಂದಿದೆ. ಶಾಲಾ ಮಕ್ಕಳು ಹೋಗುವಾಗ ಇದು ಅಪಾಯಕಾರಿ ಹಾಗಾಗಿ ತಕ್ಷಣ ಅಲ್ಲಿ ಆದ್ಯತೆ ಮೇರೆಗೆ ಕೆಲಸ ಮಾಡಿಸಿ. ಅಲ್ಲಿ ಹೋಟೆಲ್‌ಗಳಿಂದ ತ್ಯಾಜ್ಯ ಚರಂಡಿಗೆ ಬಿಡುತ್ತಾರೆ ಎಂಬ ಮಾಹಿತಿ ಇದೆ. ಅದನ್ನು ಪರಿಶೀಲಿಸಿ ಎಂದು ಶಾಸಕರು ಹೇಳಿದರು. ಉತ್ತರಿಸಿದ ಪೌರಾಯುಕ್ತರು ಈಗಾಗಲೇ ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಇನ್ನೂ ಉಳಿದೆಡೆ ಎರಡು ವಿಭಾಗದಲ್ಲಿ ಕೆಲಸ ನಡೆಯುತ್ತಿದೆ ಎಂದರು.

ನೂತನ ಶಾಸಕರಿಗೆ ಅಭಿನಂದನೆ: ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ನಗರಸಭೆ ಅಧಿಕಾರಿಗಳ ಪರವಾಗಿ ಗೌರವ ಸಲ್ಲಿಸಲಾಯಿತು. ಇಲ್ಲೂ ಶಾಸಕರು ನಿಂತುಕೊಂಡೇ ಗೌರವ ಸ್ವೀಕರಿಸಿದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಶಾಲು ಹೊದಿಸಿ, ಫಲಪುಷ್ಪ ನೀಡಿದರು. ಸದಸ್ಯ ಯೂಸೂಫ್ ಡ್ರೀಮ್ ಅವರು ಶಲ್ಯ ಹೊದಿಸಿದರು.‌ ಈ ಸಂದರ್ಭ ನಗರಸಭೆ ಕಾರ್ಯಪಾಲಕ ಇಂಜಿನಿಯರ್ ದುರ್ಗಾಪ್ರಸಾದ್, ಕಚೇರಿ ವ್ಯವಸ್ಥಾಪಕ ಪಿಯುಸ್ ಡಿಸೋಜ, ಸಮುದಾಯ ಅಧಿಕಾರಿ ಕರುಣಾಕರ, ಪ್ರಥಮ ದರ್ಜೆ ಸಹಾಯಕ ಉಮಾನಾಥ, ಲೆಕ್ಕಿಗ ಸಿ.ಆರ್ ದೇವಾಡಿಗ, ಇಂಜಿನಿಯರ್ ಶ್ರೀಧರ್ ನಾಯ್ಕ್, ಕಂದಾಯ ಅಧಿಕಾರಿ ರಾಜೇಶ್ ನಾಯ್ಕ್, ರವೀಂದ್ರ, ರವಿಪ್ರಕಾಶ್, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ವರಲಕ್ಷ್ಮೀ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮ್ಯಾನ್ ಪವರ್ ಕಡಿಮೆ
ನಗರಸಭೆಯಲ್ಲಿ 236 ಸಿಬ್ಬಂದಿಗಳ ಪೈಕಿ ಕೇವಲ 38 ಮಂದಿ ಖಾಯಂ ಸಿಬ್ಬಂದಿಗಳಿದ್ದಾರೆ. 199 ಹುದ್ದೆ ಖಾಲಿ ಇದೆ. 11 ಮಂದಿ ಖಾಯಂ ಪೌರಕಾರ್ಮಿಕರಿದ್ದಾರೆ. 41ಮಂದಿ ನೇರಪಾವತಿ. ಅದರಲ್ಲೂ 34 ಮಂದಿ ಖಾಯಂಗೆ ಆಯ್ಕೆಯಾಗಿದ್ದಾರೆ. ನಿತ್ಯ ಶೇ.20 ಮಂದಿ ಗೈರಾಗುತ್ತಾರೆ. ಕೇವಲ 45 ಮಂದಿ ಮಾತ್ರ ಕೆಲಸಕ್ಕೆ ಸಿಗುತ್ತಾರೆ. 5 ಮಂದಿ ಇಂಜಿನಿಯರ್ ಬೇಕಾಗಿದ್ದಾರೆ. ಆದರೆ ಇರುವುದು ಕೇವಲ 3 ಮಂದಿ. ಅದರಲ್ಲೂ ಜ್ಯೂನಿಯರ್ ಇಂಜಿನಿಯರ್‌ಗೆ ಮೂರು ದಿನ ಸುಳ್ಯಕ್ಕೆ ನಿಯೋಜನೆ, ಎಡಬ್ಲ್ಯೂಡಿಯವರಿಗೆ ಮೂರು ದಿನ ಮೂಡಬಿದ್ರೆಗೆ ನಿಯೋಜನೆ ಇದೆ. ಆರೋಗ್ಯ ನಿರೀಕ್ಷಕರಲ್ಲೂ ಮೂವರಲ್ಲಿ ಇಬ್ಬರಿಗೆ ಕಡಬ ಮತ್ತು ಸುಳ್ಯ ನಿಯೋಜನೆ ಇದೆ. ಒಟ್ಟು ಇಲ್ಲಿ ಮ್ಯಾನ್ ಪವರ್ ಕಡಿಮೆ ಇದೆ ಎಂದು ಪೌರಾಯುಕ್ತರು ಶಾಸಕರಿಗೆ ಮಾಹಿತಿ ನೀಡಿ ನಗರಸಭೆಯಿಂದ ಆಗುತ್ತಿರುವ ವಿವಿಧ ಕಾಮಗಾರಿಗಳು ಮತ್ತು ತೆರಿಗೆ ವಸೂಲಾತಿ ಮತ್ತು ನೀರಿನ ಬಿಲ್ ಪಾವತಿ ಮತ್ತು ಬಜೆಟ್ ಕಾಮಗಾರಿಗಳ ಮಾಹಿತಿ ನೀಡಿದರು.

ಬಡವರಿಗೆ ಅನ್ಯಾಯವಾದರೆ ಖಂಡಿತಾ ಅಶೋಕ್ ರೈ ನಗರಸಭೆಯಲ್ಲಿ ಕೂತುಕೊಳ್ಳುತ್ತಾನೆ
ಯುಜಿಡಿ ಮಾಡಬೇಕೆಂಬ ಆಲೋಚನೆ ಇದೆ.ನಿಮ್ಮ ಸಹಕಾರ ಬೇಕು. ಸರಕಾರದಿಂದ ಏನು ಬೇಕು. ಏನು ತರಬೇಕು. ಪೂರ್ಣ ಪ್ರಮಾಣದ ಶ್ರಮ ನಾನು ಹಾಕುತ್ತೇನೆ. ಶೇ.100 ಯುಜಿಡಿಗೆ ರೂ. 500 ಕೋಟಿ ತರುತ್ತೇನೆ ಎಂದು ಆಶ್ವಾಸನೆ ಕೊಡಲು ನಾನು ಹೋಗುವುದಿಲ್ಲ. ಮೊದಲು ಪ್ರಸ್ತಾವನೆ ಕೊಡಬೇಕು. ಆಮೇಲೆ ಏನು ಮಾಡಬಹುದು ಎಂದು ನೋಡಬಹುದು. ಪುತ್ತೂರಿಗೆ ಮೆಡಿಕಲ್ ಕಾಲೇಜು, ಡ್ರೈನೇಜ್ ಸಿಸ್ಟಮ್, ಯಾರ‍್ಯಾರು ಸೈಟ್ ಕೇಳಿದ್ದಾರೋ ಅವರಿಗೆ ಸೈಟ್ ಕೊಡುವ ಆಲೋಚನೆ ನನ್ನಲ್ಲಿದೆ. ಈಗಾಗಲೇ ಆಗಿರುವ ಟೆಂಡರ್‌ಗಳಿಗೆ ನಾನು ಹಸ್ತಾಂತರ ಮಾಡುವುದಿಲ್ಲ. ಕೇವಲ ಸೇವೆಯಲ್ಲಿ ಮಾತ್ರ ನಾನು ಹಸ್ತಾಂತರ ಮಾಡುತ್ತೇನೆ. ಭ್ರಷ್ಟಾಚಾರ ನಿಲ್ಲಬೇಕು. ಬಡವರಿಗೆ ಅನ್ಯಾಯವಾದರೆ ಖಂಡಿತಾ ಅಶೋಕ್ ರೈ ನಗರಸಭೆಯಲ್ಲಿ ಬಂದು ಕೂತುಕೊಳ್ಳುತ್ತಾನೆ ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಯಾವ ರೀತಿ ಫೈಲ್ ಮೂವ್‌ಮೆಂಟ್ ಮಾಡಬೇಕೆಂದು ಸ್ವಂತ ಜೀವನದಲ್ಲಿ ಅರಿತಿದ್ದೇನೆ

ನಾನು ನೂತನವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದೇನೆ. ನನ್ನಲ್ಲಿ ತುಂಬಾ ನಿರೀಕ್ಷೆಗಳು ಇದೆ.ಜನರು ಕೂಡಾ ನನ್ನಲ್ಲಿ ಬಹಳ ನಿರೀಕ್ಷೆಯಲ್ಲಿದ್ದಾರೆ. ನಾನು ನಿಮ್ಮಿಂದ ನಿರೀಕ್ಷೆಯಲ್ಲಿದ್ದೇನೆ. ನಾನು ಏನು ಮಾತನಾಡಿದ್ದರೂ ಅದು ಜನರ ಮಾತು ಎಂದು ತಿಳಿದುಕೊಳ್ಳಬೇಕು. ನನ್ನ ಗುರಿ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆ. ಹಾಗಾಗಿ ಇಲ್ಲಿ ಅಧಿಕಾರಿಗಳಿಲ್ಲದೆ ಯಾವ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಜನಪ್ರತಿನಿಧಿಯಾದರೂ ಅಧಿಕಾರಿಗಳ ಸಹಾಯವಿಲ್ಲದೆ ನನಗೂ ಏನೂ ಮಾಡಲು ಸಾಧ್ಯವಿಲ್ಲ. ಕಚೇರಿಗಳಲ್ಲಿ ಯಾವ ರೀತಿಯ ಕೆಲಸ ಆಗಬೇಕು. ಯಾವ ರೀತಿ ಫೈಲ್ ಮೂವ್‌ಮೆಂಟ್ ಮಾಡಬೇಕು. ಎಲ್ಲಿಂದ ಎಲ್ಲಿಗೆ ರೀಚ್ ಆಗುತ್ತದೆ. ಯಾವ ರೀತಿ ರೀಚ್ ಆಗುತ್ತದೆ ಎಂದು ನಾನು ಜನಪ್ರತಿನಿಧಿಯಾಗಿ ಇಲ್ಲದಿರುವಾಗಲೂ ಅರಿತಿದ್ದೇನೆ. ಸ್ವಂತ ಜೀವನದಲ್ಲಿ ಅನುಭವಿಸಿದ್ದೇನೆ. ನಾನು ಯಾರಿಗೂ ಒತ್ತಡ ಹಾಕುವುದಕ್ಕೆ ಹೋಗುವುದಿಲ್ಲ. ನಾನು ನಿಮ್ಮಲ್ಲಿ ವಿನಂತಿ ಮಾತ್ರ ಮಾಡುತ್ತೇನೆ.ನೀವು ಸರ್ವಿಸ್ ಇಷ್ಟರ ತನಕ ಕೊಡಲಿಲ್ಲ ಎಂದು ನಾನು ಹೇಳುತ್ತಿಲ್ಲ. ಜನರಿಗೆ ಎಷ್ಟು ಸೇವೆ ನೀಡಿದರೂ ಸಾಕಾಗುವುದಿಲ್ಲ. ಇವತ್ತು ನಗರಸಭೆಯಲ್ಲಿ ಮಾನವ ಶ್ರಮಕ್ಕೆ ಸಿಬ್ಬಂದಿ ಕೊರತೆ ಇದೆ. ನಾನು ಈ ಸ್ಥಾನಕ್ಕೆ ಬರಲು ಜನರೇ ಕಾರಣ. ಆದರೆ ನಾನು ಕೂಡಾ ಉದ್ಯಮಿ ಆಗಿದ್ದು ಬಿಲ್ಡಿಂಗ್ ಕನ್‌ಸ್ಟ್ರಕ್ಷನ್ ಮಾಡಿದ್ದರಿಂದ ತಾಲೂಕು ಕಚೇರಿ, ಪುರಸಭೆ ವ್ಯಾಪ್ತಿಯಲ್ಲಿ ಏನೇನು ಕೆಲಸ ಆಗುತ್ತದೆ ಎಂಬುದನ್ನು ನಾನು ಆಳವಾಗಿ ತಿಳಿದು ಕೊಂಡಿದ್ದೇನೆ. ನಿಮ್ಮಲ್ಲಿ ನನ್ನ ವಿನಂತಿ ಇಷ್ಟೆ. ಅಶೋಕ್ ರೈಗೆ ಸ್ವಂತಕ್ಕೆ ಏನೂ ನಿರೀಕ್ಷೆ ಇಲ್ಲ. ಜನರಿಗೆ ಸೇವೆ ಮಾಡಿ ಜನರ ಕೆಲಸ ಮಾಡಿ ಅದೇ ನನ್ನ ವಿನಂತಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

LEAVE A REPLY

Please enter your comment!
Please enter your name here