ಆಲಂಕಾರಿನ ಉದ್ಯಮಿ ಚಂದ್ರಶೇಖರ ಕೆ. ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ

0

ಡೆತ್‌ನೋಟ್ ಬರೆದಿಟ್ಟು ಸೊಂಟಕ್ಕೆ ಬಲೂನು ಕಟ್ಟಿಕೊಂಡು ಕೃತ್ಯ | ನೂರಾರು ಮಂದಿಯಿಂದ ಅಂತಿಮ ದರ್ಶನ

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಜನರಲ್ ಸ್ಟೋರ್‌ನ ಮಾಲಕ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರೂ ಆಗಿದ್ದ ಆಲಂಕಾರು ಶ್ರೀ ಭಾರತಿ ಶಾಲೆಯ ಮುಂಭಾಗದ ದುರ್ಗಾಸದನ ನಿವಾಸಿ ಚಂದ್ರಶೇಖರ ಕೆ. (67ವ.) ಅವರು ಮೇ 26ರಂದು ಮುಂಜಾನೆ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆಯಿಂದ ಕುಮಾರಧಾರ ನದಿ ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೇ 25ರಂದು ಎಂದಿನಂತೆ ಅಂಗಡಿಗೆ ಬಂದಿದ್ದ ಚಂದ್ರಶೇಖರ ಅವರು ರಾತ್ರಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪತ್ತನಾಜೆ ಅಂಗವಾಗಿ ನಡೆದ ರಂಗಪೂಜೆ ಹಾಗೂ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವಸ್ಥಾನದಿಂದ ರಾತ್ರಿ ಸುಮಾರು 10 ಗಂಟೆ ವೇಳೆಗೆ ಮನೆಗೆ ಬಂದಿದ್ದರು. ಮೇ 26ರಂದು ಮುಂಜಾನೆ ಅಂದಾಜು 4 ಗಂಟೆ ವೇಳೆಗೆ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟು ತನ್ನ ಕಾರಿನಲ್ಲಿ ಕುದ್ಮಾರು ಗ್ರಾಮದ ಶಾಂತಿಮೊಗರುಗೆ ಬಂದ ಅವರು, ಕಾರನ್ನು ಸೇತುವೆಯ ಮೇಲೆ ನಿಲ್ಲಿಸಿ ಸೇತುವೆಯಿಂದ ಕುಮಾರಧಾರ ನದಿ ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ 4.10ರ ವೇಳೆಗೆ ಚಂದ್ರಶೇಖರ ಅವರು ಮಂಗಳೂರಿನಲ್ಲಿರುವ ಕಿರಿಯ ಪುತ್ರ ಪುಷ್ಪರಾಜ ಅವರ ಮೊಬೈಲ್‌ಗೆ ಕರೆ ಮಾಡಿರುವುದು ಚಂದ್ರಶೇಖರ ಅವರ ಮೊಬೈಲ್‌ನ ಡಯಲ್ಡ್ ಲೀಸ್ಟ್‌ನಲ್ಲಿ ಕಂಡುಬಂದಿದೆ. ಆದರೆ ಪುಷ್ಪರಾಜ ಅವರ ಮೊಬೈಲ್ ಈ ವೇಳೆ ಸ್ವಿಚ್ಡ್ ಆಫ್ ಆಗಿತ್ತು ಎಂದು ಹೇಳಲಾಗಿದೆ.‌

ಡೆತ್‌ನೋಟ್‌ನಿಂದ ಸುಳಿವು: ಮುಂಜಾನೆ 5.30ರ ವೇಳೆಗೆ ಚಂದ್ರಶೇಖರ ಅವರ ಹಿರಿಯ ಮಗ ಗಣರಾಜ ಅವರು ಎದ್ದು ಹೊರ ಬಂದ ವೇಳೆ ಮನೆಯಲ್ಲಿ ಕಾರು ಹಾಗೂ ತಂದೆ ಚಂದ್ರಶೇಖರ ಅವರು ಇರಲಿಲ್ಲ. ಇದೇ ವೇಳೆ ಮನೆಯಲ್ಲಿ ಚಂದ್ರಶೇಖರ ಅವರು ಬರೆದಿಟ್ಟಿದ್ದ ಡೆತ್‌ನೋಟ್ ಪತ್ತೆಯಾಗಿತ್ತು. ಶಾಂತಿಮೊಗರು ಸೇತುವೆಯಿಂದ ನದಿ ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಕಾರಿಗೆ ಲಾಕ್ ಮಾಡಿ ಸೇತುವೆ ಮೇಲೆ ನಿಲ್ಲಿಸುತ್ತೇನೆ. ಕಾರಿನ ಕೀ ಟಯರ್‌ನ ಅಡಿಯಲ್ಲಿ ಇದೆ. ಮೃತದೇಹ ಪತ್ತೆ ಹಚ್ಚಲು ಅನುಕೂಲವಾಗುವಂತೆ ಸೊಂಟಕ್ಕೆ ಬಲೂನು ಕಟ್ಟಿಕೊಂಡಿದ್ದೇನೆ ಎಂದೆಲ್ಲಾ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದರು ಎಂದು ಹೇಳಲಾಗಿದೆ. ಅದರಂತೆ ಗಣರಾಜ ಅವರು ಸುಮಾರು 6 ಗಂಟೆ ವೇಳೆಗೆ ಶಾಂತಿಮೊಗರುಗೆ ಬಂದಿದ್ದು ಈ ವೇಳೆ ಕಾರು ಸೇತುವೆ ಮೇಲೆ ನಿಂತಿತ್ತು. ನದಿ ನೀರಿನಲ್ಲಿ ಬಲೂನು ತೇಲಾಡುತಿತ್ತು. ಇದರಿಂದ ಚಂದ್ರಶೇಖರ ಅವರು ಡೆತ್‌ನೋಟ್‌ನಲ್ಲಿ ಬರೆದಿಟ್ಟಂತೆ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿತ್ತು.

ಮೃತದೇಹ ಹೊರಕ್ಕೆ: ಸ್ಥಳೀಯ ಈಜುಗಾರ ಪೂವಪ್ಪ ಎಂಬವರು ನದಿ ನೀರಿಗೆ ಇಳಿದು ತೇಲಾಡುತ್ತಿದ್ದ ಬಲೂನುಗೆ ಕಟ್ಟಲಾಗಿದ್ದ ಹಗ್ಗದ ಸಹಾಯದಿಂದ ಮೃತದೇಹವನ್ನು ಪತ್ತೆ ಹಚ್ಚಿದರು. ಬಳಿಕ ಮೃತದೇಹಕ್ಕೆ ಹಗ್ಗ ಕಟ್ಟಿ ಅದರ ಸಹಾಯದಿಂದ ಮೇಲಕ್ಕೆ ತರಲಾಯಿತು. ನಂತರ ಕಡಬ ಸಮುದಾಯ ಆರೋಗ್ಯಕೇಂದ್ರಕ್ಕೆ ಕೊಂಡೊಯ್ದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಧ್ಯಾಹ್ನ ಆಲಂಕಾರಿನ ಅವರ ಮನೆಗೆ ಮೃತದೇಹ ತಂದು ಅಂತ್ಯಕ್ರಿಯೆ ನಡೆಸಲಾಯಿತು.

ಚಂದ್ರಶೇಖರ ಅವರು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಜೀವನದಲ್ಲಿ ಜಿಗುಪ್ಸೆಯ ಮಾತುಗಳನ್ನಾಡುತ್ತಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ಪುತ್ರ ಗಣರಾಜ್ ಅವರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಗಿರಿಜಾ, ಪುತ್ರರಾದ ಗಣರಾಜ, ಪುಷ್ಪರಾಜ, ಸೊಸೆಯಂದಿರಾದ ಸುನೀತಾ, ರಕ್ಷಿತಾ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.

ನೂರಾರು ಮಂದಿಯಿಂದ ಸಂತಾಪ: ಚಂದ್ರಶೇಖರ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಶಾಂತಿಮೊಗರು, ಕಡಬ ಸಮುದಾಯ ಆಸ್ಪತ್ರೆ, ಆಲಂಕಾರಿನ ಅವರ ನಿವಾಸಕ್ಕೆ ಬಂದು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ.ನಾರಾಯಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಉಪಾಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು, ನಿರ್ದೇಶಕರಾದ ಜಯಕರ ಪೂಜಾರಿ ಕಲ್ಲೇರಿ, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಗಂಗಾರತ್ನ ವಸಂತ್ ಅಗತ್ತಾಡಿ, ಜಿನ್ನಪ್ಪ ಸಾಲ್ಯಾನ್ ಕಡಬ, ಜಯಪ್ರಕಾಶ್ ದೋಳ, ಜಯಂತ ಪೂಜಾರಿ ನೆಕ್ಕಿಲಾಡಿ, ಸಂತೋಷ್ ಕುಮಾರ್ ಮತ್ರಾಡಿ, ಮಂಜುಳಾ ಕೆ.ಸಿ.ಕಲ್ಲೇರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯಲ್ಗ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್‌ಕುಮಾರ್ ಅಗತ್ತಾಡಿ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜಯಕುಮಾರ್ ಸೊರಕೆ, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ದಯಾನಂದ ರೈ ಮನವಳಿಕೆ, ಪ್ರಶಾಂತ ರೈ ಮನವಳಿಕೆ, ಪುತ್ತೂರು ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷ ಪೂವಪ್ಪ ನಾಯ್ಕ್, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ಪಾಲೇರಿ, ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗೀಸ್, ಕುಮಾರಿವಾಸುದೇವನ್, ಬಾಲಕೃಷ್ಣ ಬಾಣಜಾಲು, ಸಹಕಾರ ಸಂಘದ ನಿವೃತ್ತ ಲೆಕ್ಕಪರಿಶೋಧಕ ಬಾಲಕೃಷ್ಣ ಗೌಡ, ಬೆಳ್ತಂಗಡಿ ಗುರುದೇವ ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಆಲಂಕಾರು, ಶಾಂತಿಮೊಗರು ದೇವಸ್ಥಾನದ ಮೊಕ್ತೇಸರ ಪ್ರವೀಣ್‌ಕುಮಾರ್ ಕೆಡೆಂಜಿ, ಸುಬ್ರಹ್ಮಣ್ಯದ ಉದ್ಯಮಿ ರವಿ ಕಕ್ಕೆಪದವು, ಆಲಂಕಾರು ಜ್ಞಾನಸುಧಾ ತರಬೇತಿ ಕೇಂದ್ರದ ಸಂಚಾಲಕ ಜನಾರ್ದನ ಬಿ.ಎಲ್., ಶೇಷಪತಿ ರೈ ಗುತ್ತುಪಾಲು, ಶಿವಪ್ಪ ಗೌಡ ಕಜೆ, ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ವಸಂತ ಎ.ಅಗತ್ತಾಡಿ, ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ನವೀನ ರೈ, ಚಂದ್ರಶೇಖರ ಸನಿಲ್, ಹೊನ್ನಪ್ಪ ಪೂಜಾರಿ ಕೈಂದಾಡಿ, ಸದಾನಂದ ಪೂಜಾರಿ ಮಡ್ಯೊಟ್ಟು, ಸಾಮ್ಯುವೆಲ್ ಜೋಸ್ ಸಹಿತ ಆಲಂಕಾರು ಪೇಟೆಯ ವರ್ತಕರು, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳು, ಸಲಹಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಅಂಗಡಿಮುಂಗಟ್ಟು ಬಂದ್: ಚಂದ್ರಶೇಖರ ಅವರ ಗೌರವಾರ್ಥ ಆಲಂಕಾರು ಪೇಟೆಯ ವರ್ತಕರು ಮಧ್ಯಾಹ್ನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಿದ್ದಾರೆ. ಮೃತರು ನಿರ್ದೇಶಕರಾಗಿದ್ದ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಲಂಕಾರು ಪ್ರಧಾನ ಕಚೇರಿ, ಕಡಬ, ಕಲ್ಲುಗುಡ್ಡೆ, ನೆಟ್ಟಣ ಹಾಗೂ ಕೊಲ ಶಾಖೆಗಳಲ್ಲಿ ವ್ಯವಹಾರ ಸ್ಥಗಿತಗೊಳಿಸಲಾಗಿತ್ತು.

ಯಶಸ್ವಿ ಸಹಕಾರಿ: ಚಂದ್ರಶೇಖರ ಆಲಂಕಾರು ಅವರು 2004ರಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡು ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 2005ರಲ್ಲಿ ಇವರು ಅಧ್ಯಕ್ಷರಾಗಿದ್ದಾಗ ಕೇವಲ 2.5 ಲಕ್ಷ ರೂ.ಬಂಡವಾಳದೊಂದಿಗೆ ಸಂಘದಲ್ಲಿ ಬ್ಯಾಂಕಿಂಗ್ ಸೇವೆ ಆರಂಭಿಸಿದ್ದರು. ಆ ಬಳಿಕ 2009, 2014,2019ರಲ್ಲೂ ನಿರ್ದೇಶಕರಾಗಿ ಆಯ್ಕೆಗೊಂಡಿದ್ದರು. 2004ರಿಂದ 2020ರ ತನಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರ ಅವಧಿಯಲ್ಲಿ ಆಲಂಕಾರಿನಲ್ಲಿ ಸ್ವಂತ ನಿವೇಶನದಲ್ಲಿ ಸಂಘಕ್ಕೆ ಭವ್ಯ ಕಟ್ಟಡವೂ ನಿರ್ಮಾಣಗೊಂಡಿತ್ತು. ಈಗ ಸಂಘಕ್ಕೆ ಕಡಬ, ಕಲ್ಲುಗುಡ್ಡೆ, ನೆಟ್ಟಣ, ಕೊಲದಲ್ಲೂ ಶಾಖೆಗಳಿದ್ದು 176 ಕೋಟಿ ರೂ., ವಾರ್ಷಿಕ ವ್ಯವಹಾರ ಮಾಡುತ್ತಿದೆ. 2004ರಿಂದ 202೦ರ ತನಕ ಅಧ್ಯಕ್ಷರಾಗಿ, ಆ ಬಳಿಕದಿಂದ ಈ ತನಕವೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ ಅವರು ಸಂಘದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ವಿದ್ಯಾರ್ಥಿ ವೇತನ, ಬಡ ಮಕ್ಕಳಿಗೆ ಪುಸ್ತಕ ವಿತರಣೆಯೂ ಇವರ ಅವಧಿಯಲ್ಲಿ ಆರಂಭಿಸಲಾಗಿತ್ತು.

ಯಶಸ್ವಿ ಉದ್ಯಮಿ: ಚಂದ್ರಶೇಖರ ಅವರು ಸುಮಾರು 25 ವರ್ಷಗಳ ಹಿಂದೆ ಆಲಂಕಾರು-ಉಪ್ಪಿನಂಗಡಿ ಮಧ್ಯೆ ಅಂಬಾಸಿಡರ್ ಕಾರು ಓಡಿಸುತ್ತಿದ್ದು ಶೇಖರಣ್ಣ ಎಂದೇ ಚಿರಪರಿಚಿತರಾಗಿದ್ದರು. ನಂತರ ಕಾರು ಮಾರಾಟ ಮಾಡಿ ಆಲಂಕಾರಿನಲ್ಲಿ ಶ್ರೀ ದುರ್ಗಾಂಬಾ ಜನರಲ್ ಸ್ಟೋರ್ ಎಂಬ ಹಾರ್ಡ್‌ವೇರ್ ಮಾರಾಟದ ಅಂಗಡಿ ತೆರೆದು ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದರು.

ಯಶಸ್ವಿ ಸಂಘಟಕ: ಚಂದ್ರಶೇಖರ ಅವರು ಯಶಸ್ವಿ ಸಂಘಟಕರಾಗಿದ್ದು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷರಾಗಿ, ಆಲಂಕಾರು ವಲಯ ಬಿಲ್ಲವ ಸಂಘದ ಸಂಚಾಲಕರಾಗಿ, ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಪ್ರವರ್ತಕರಾಗಿ ಸೇವೆ ಸಲ್ಲಿಸಿದ್ದರು. ಶರವೂರು
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ಅಲಂಕಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಚಂದ್ರಶೇಖರ ಅವರು, ಈ ಹಿಂದೆ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು. ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ, ಆಲಂಕಾರು ಶ್ರೀ ದುರ್ಗಾಂಬಾ ಕಲಾ ಸಂಗಮದ ಅಧ್ಯಕ್ಷರಾಗಿ, ಶರವೂರು ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಇವರು ಯಕ್ಷಗಾನ ತಾಳಮದ್ದಳೆಯ ಯಶಸ್ವಿ ಅರ್ಥಧಾರಿಯಾಗಿ, ಯಕ್ಷಗಾನ ವೇಷಧಾರಿಯಾಗಿಯೂ ಗುರುತಿಸಿಕೊಂಡಿದ್ದರು. ಪುತ್ತೂರು ಬಿಲ್ಲವ ಸಂಘ, ಮೂರ್ತೆದಾರರ ಮಹಾಮಂಡಲದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

ಸುದ್ದಿಬಿಡುಗಡೆ ಬಗ್ಗೆ ಅಪಾರ ಅಭಿಮಾನ

ಮೃತ ಚಂದ್ರಶೇಖರ ಅವರು ಸುದ್ದಿಬಿಡುಗಡೆ ಪತ್ರಿಕೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಪತ್ರಿಕೆ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಜನಪರ ಆಂದೋಲನಗಳಿಗೆ ಸಂಪೂರ್ಣ ಬೆಂಬಲ, ಸಹಕಾರ ನೀಡುತ್ತಿದ್ದ ಇವರು ಪುತ್ತೂರು ಸುದ್ದಿಬಿಡುಗಡೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಂಪಾದಕೀಯ ಲೇಖನವನ್ನು ಚಾಚೂ ತಪ್ಪದೆ ಓದುತ್ತಿದ್ದರಲ್ಲದೆ ಅವರು ಬರಹದಲ್ಲಿನ ವಿಚಾರವನ್ನು ಸಮರ್ಥಿಸಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದರು.

ಬಲೂನ್ ಸಹಾಯದಿಂದ ಮೃತದೇಹ ಪತ್ತೆ

ಚಂದ್ರಶೇಖರ ಅವರು ಆತ್ಮಹತ್ಯೆಗೂ ಮುನ್ನ ಎರಡು ಬಲೂನುಗಳನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರು. ಸೊಂಟಕ್ಕೆ ಕಟ್ಟಲು ಬಳಸುವ ನೂಲಿನ ಒಂದು ತುದಿಗೆ ಎರಡು ಬಲೂನುಗಳನ್ನು ಗಟ್ಟಿಯಾಗಿ ಕಟ್ಟಿ ಅದರ ಇನ್ನೊಂದು ತುದಿಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರು. ತನ್ನ ಮೃತದೇಹ ನೀರಿನಲ್ಲಿ ಮುಳುಗಿದರೂ ಮೃತದೇಹದ ಪತ್ತೆಗೆ ಸಹಾಯ ಆಗಲೆಂದು ಬಲೂನು ಕಟ್ಟಿಕೊಂಡಿದ್ದರು ಎಂದು ಅಂದಾಜಿಸಲಾಗಿದೆ. ಈಜುಗಾರ ಪೂವಪ್ಪ ಅವರು ಬಲೂನ್‌ನ ಸಹಾಯದಿಂದಲೇ ಮೃತದೇಹವನ್ನು ಸುಲಭವಾಗಿ ಪತ್ತೆ ಹಚ್ಚಿ ಮೇಲಕ್ಕೆ ತರುವಲ್ಲಿ ಯಶಸ್ವಿಯೂ ಆದರು.

LEAVE A REPLY

Please enter your comment!
Please enter your name here