ಪುತ್ತೂರು, ಮೇ 30: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾದ ವತಿಯಂದ ಆಯೋಜಿಸಲಾದ ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ – “ಫಿಲೋ ವೆಂಚುರ-ಅವಿನ್ಯ 2023” ದ ಸಮಾರೋಪ ಸಮಾರಂಭವನ್ನು ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ಅತಿ ಜೆರೋಮ್ ಲಾರೆನ್ಸ್ ಮಸ್ಕರೇಞಸ್ ರವರು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಲಿಯೋ ನೊರೋನ್ಹ ರವರು “ಪ್ರತಿಯೋರ್ವನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊರತರುವುದು ಹಾಗೂ ಪ್ರತಿಭೆಗಳನ್ನು ಅನ್ವೇಶಿಸುವುದು ಸ್ಪರ್ಧೆಗಳ ಮೂಲ ಉದ್ದೇಶವಾಗಿದೆ” ಎಂದು ಹೇಳಿದರು.
ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಆಂಟನಿಪ್ರಕಾಶ್ ಮೊಂತೆರೊರವರು ಸಂದರ್ಭೋಚಿತವಾಗಿ ಮಾತನಾಡಿ ಭಾಗವಹಿಸಿದ ಪ್ರತಿಯೋರ್ವ ವಿದ್ಯಾರ್ಥಿಗೂ ಅಭಿನಂದನೆ ಸಲ್ಲಿಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಸಂಚಾಲಕರಾದ ಅತಿ ಜೆರೋಮ್ ಲಾರೆನ್ಸ್ ಮಸ್ಕರೇಞಸ್ ರವರು “ವಿದ್ಯಾರ್ಥಿಗಳಿಗೆ ಬಹುದೊಡ್ಡ ಸಾಮಾಜಿಕ ಜವಾಬ್ದಾರಿ ಇದೆ. ಅವರು ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಡು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿ ಇತತರಿಗೆ ಮಾದರಿಯಾಗಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಆತ್ಮವಿಶ್ವಾಸ ಹಾಗೂ ಧನಾತ್ಮಕ ಚಿಂತನೆಗಳು ಬಲಗೊಳ್ಳುತ್ತವೆ” ಎಂದು ಹೇಳಿ ಸಂಘಟಕರ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು.
ವಿವಿಧ ಕಾಲೇಜುಗಳಿಂದ ಒಟ್ಟು 54 ತಂಡಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ 6 ಸ್ಪರ್ಧೆಗಳು ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ 2 ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜ್ಗೆ ಸಮಗ್ರ ಪ್ರಶಸ್ತಿ ದೊರೆತರೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜ್ ರನ್ನರ್ಸ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿತು.
ವಿದ್ಯಾರ್ಥಿನಿ ಆಶಿಕಾ ಕೆ ಸ್ವಾಗತಿಸಿದರು. ಎಂ ಕಾಂ ವಿಭಾಗದ ಪ್ರಾಧ್ಯಾಪಕಿ ಪೃಥ್ವಿ ವಿಜೇತರ ವಿದ್ಯಾರ್ಥಿನಿ ಅರ್ಪಿತಾ ವಂದಿಸಿದರು. ಬಹುಮಾನ ವಿಜೇತರ ಹೆಸರನ್ನು ವಾಚಿಸಿದರು. ದ್ವಿತೀಯ ಎಂಕಾಂ ವಿದ್ಯಾರ್ಥಿ ಶ್ರೀರಾಮ್ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಫಿಲೋವೆಂಚುರ-ಅವಿನ್ಯ 2023ರ ಸಂಯೋಜಕರಾದ ಯಶವಂತ ಜಿ ನಾಯಕ ಹಾಗೂ ವಿದ್ಯಾರ್ಥಿ ಸಂಯೋಜಕರಾದ ಕಿರಣ್ ರೈ ಮತ್ತು ಅಂಕಿತಾ ಕೆ ಉಪಸ್ಥಿತರಿದ್ದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಪ್ರೊ.ಗಣೇಶ್ ಭಟ್ ಹಾಗೂ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾದ ಉಪನ್ಯಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.