ಪುತ್ತೂರು (ಮೇ 30): ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ – “ಫಿಲೋ ವೆಂಚುರ-ಅವಿನ್ಯ 2023”ವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟಣೆಯನ್ನು ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ನೆರವೇರಿಸಲಾಗಿದ್ದು, ಪ್ರಾಂಶುಪಾಲರಾದ ಡಾ. ಆಂಟೊನಿ ಪ್ರಕಾಶ್ ಮೊಂತೆರೋರವರು ಅಧ್ಯಕ್ಷತೆಯನ್ನು ವಹಿಸಿದ್ದರು. ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಕಾಂ (ಹೆಚ್ ಆರ್ ಡಿ) ವಿಭಾಗದ ಸಹಪ್ರಾಧ್ಯಾಪಕರಾದ ಡಾ.ವೇದವ ರವರು “ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮುಖ್ಯತೆ ವಹಿಸಲಾಗುತ್ತಿದೆ. ಸ್ಪರ್ಧೆಗಳು ವಿದ್ಯಾರ್ಥಿಗಳ ಸುಪ್ರ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಸಹಕಾರಿಯಾಗುತ್ತವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವ-ಸಾಮರ್ಥ್ಯ, ಹಾಗೂ ಸೃಜನಶೀಲತೆಗೆ ಒತ್ತು ನೀಡಲಾಗುತ್ತದೆ. ಇಂತಹ ಸ್ಪರ್ಧೆಗಳನ್ನು ಆಯೋಜಿಸುವುದು ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಧಿಗಳ ಮನೋಬಲವನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ಸ್ಟ್ಯಾನಿ ಪಿಂಟೋ “ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯದ ಬಗ್ಗೆ ಕನಸು ಕಾಣಬೇಕು ಹಾಗೂ ಕನಸುಗಳ ಸಾಕಾರವಾಗುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು” ಎಂದು ಹೇಳಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲರಾದ ಡಾ.ಆಂಟೊನಿ ಪ್ರಕಾಶ್ ಮೊಂತೆರೋರವರು ವಿವಿಧ ಕಾಲೇಜುಗಳಿಂದ 54 ತಂಡಗಳು ಭಾಗವಹಿಸುತ್ತಿರುವುದು ಬಹಳ ಸಂತಸದ ವಿಚಾರ. ಅಹಂಭಾವ, ಹೊಟ್ಟೆಕಿಚ್ಚು ಮುಂತಾದ ಋಣಾತ್ಮಕ ಚಿಂತನೆಗಳು ನಮ್ಮನ್ನು ಅವನತಿಗೆ ಕೊಂಡೊಯ್ದರೆ ಸಹಕಾರ ಮನೋಭಾವ, ಆತ್ಮವಿಶ್ವಾಸ, ತಾಳ್ಮೆ ಮುಂತಾದ ಧನಾತ್ರಮಕ ಚಿಂತನೆಗಳು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲವು. ವಿದ್ಯಾರ್ಥಿಗಳು ಯಾವತ್ತೂ ಧನಾತ್ಮಕವಾಗಿ ಚಿಂತಿಸಬೇಕು” ಎಂದು ಹೇಳಿದರು.
ಎಂಕಾಂ ವಿಭಾಗದಲ್ಲಿ ರ‍್ಯಾಂಕ್ ವಿಜೇತರಾದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಫಿಲೋವೆಂಚುರ-ಅವಿನ್ಯ 2023ರಲ್ಲಿ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ 6 ಸ್ಪರ್ಧೆಗಳು ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ 2 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ವಿನ್ಯಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕರಾದ ಯಶವಂತ ಜಿ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಿಲೋವೆಂಚುರ-ಅವಿನ್ಯ 2023ರ ವಿದ್ಯಾರ್ಥಿ ಸಂಯೋಜಕರಾದ ಅಂಕಿತಾ ಕೆ ವಂದಿಸಿದರು. ದ್ವಿತೀಯ ಎಂ. ಕಾಂ. ವಿದ್ಯಾರ್ಥಿನಿ ಸುಹಾಸಿನಿ ಕಾರ್ಯಕ್ರಮ ನಿರ್ವಹಿಸಿದರು. ಫಿಲೋವೆಂಚುರ-ಅವಿನ್ಯ 2023ರ ವಿದ್ಯಾರ್ಥಿ ಸಂಯೋಜಕ ಕಿರಣ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.