ಶಾಲೆಗೆ ನೀಡುವ ದೇಣಿಗೆ ಸರ್ವ ಧರ್ಮದ ಹುಂಡಿಗೆ ಹಾಕುವ ದೇಣಿಗೆಯಂತೆ: ಶೀನಪ್ಪ ಶೆಟ್ಟಿ ನೆಕ್ರಾಜೆ, ಪಂಚಾಯತ್ ಉಪಾಧ್ಯಕ್ಷರು ಸವಣೂರು
ಪುತ್ತೂರು: ಶಾಲೆಗೆ ನೀಡುವ ದೇಣಿಗೆ ಸರ್ವಧರ್ಮದ ಹುಂಡಿಗೆ ಹಾಕುವ ದೇಣಿಗೆಯಂತೆ ಎಂದು ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೀನಪ್ಪ ಶೆಟ್ಟಿ ನೆಕ್ರಾಜೆ ರವರು ಹೇಳಿದರು. ಅವರು ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ. ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪಾಡಿ ಇದರ 2023-24ನೇ ಸಾಲಿನ ಶಾಲಾ ಆರಂಭೋತ್ಸವದಲ್ಲಿ ಮಾತನಾಡುತ್ತಿದ್ದರು.
ಅಕ್ಷರ ರಥ, ಕಲಿಕಾ ಚಪ್ಪರ, ಕಲಿಕಾ ಮಂಟಪ, ಪುಸ್ತಕ ಜೋಳಿಗೆ, ಕಲಿಕಾ ಚೀಲ ಹೀಗೆ ಬೇರೆ ಬೇರೆ ರೀತಿಯ ಪರಿಕಲ್ಪನೆಯೊಂದಿಗೆ ಶಾಲಾ ಆರಂಭೋತ್ಸವ ನಡೆಸಿದ ಈ ಶಾಲೆಯ ಈ ವರ್ಷದ ಪರಿಕಲ್ಪನೆ ಕಲಿಕಾ ಹುಂಡಿ ದಾನಿಗಳು, ಊರವರು, ಪೋಷಕರು ಹಾಗೂ ಬೇರೆ ಬೇರೆ ಸಂಸ್ಥೆಗಳಿಂದ ಶಾಲೆಗೆ ಮತ್ತು ಮಕ್ಕಳ ಕಲಿಕೆಗೆ ಬೇಕಾಗುವ ವಸ್ತುಗಳನ್ನು ಮತ್ತು ದೇಣಿಗೆಯನ್ನು ಸಂಗ್ರಹಿಸುವ ವಿಶಿಷ್ಟ ಪರಿಕಲ್ಪನೆ ಕಲಿಕಾ ಹುಂಡಿ. ಈ ಹುಂಡಿಗೆ ಮಕ್ಕಳ ಕಲಿಕೆಗೆ ಬೇಕಾದ ಪುಸ್ತಕ, ಪೆನ್ನು ಮುಂತಾದ ಪರಿಕಲ್ಪನೆಗಳನ್ನು ಈ ವರ್ಷ ಪೂರ್ತಿ ದಾನಿಗಳು ನೀಡಬಹುದಾಗಿದೆ.
ಈ ಕಲಿಕಾ ಹುಂಡಿಗೆ ಬರೆಯುವ ಪುಸ್ತಕವನ್ನು ಹಾಕುವುದರ ಮೂಲಕ ಚಾಲನೆ ನೀಡಿದ ಶಾಲಾ ದಾನಿಗಳಾದ ಕೃಷ್ಣ ಕುಮಾರ್ ರೈ ಮಕ್ಕಳ ಕಲಿಕೆಯ ದೃಷ್ಟಿಯಿಂದ ಮತ್ತು ಸರಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಇಂತಹ ವಿಭಿನ್ನ ಯೋಜನೆಗಳು ನಿಜಕ್ಕೂ ಉಪಯೋಗಕರವಾದುದು ಎಂದು ಹೇಳಿದರು.
ಸವಣೂರು ಗ್ರಾಮದ ಪಂಚಾಯತ್ ಸದಸ್ಯರಾದ ಗಿರಿಶಂಕರ ಸುಲಾಯ ಮಾತನಾಡಿ ನೂತನ ಕಲಿಕಾ ವರ್ಷ ಎಲ್ಲರಿಗೂ ಕಲಿಕಾ ಏಳಿಯಾಗಲಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ಜರಿನಾರು, ಜಯಶ್ರೀ ಕುಚ್ಚೆಜಾಲು, ಎಸ್.ಡಿಎಂಸಿ ಅಧ್ಯಕ್ಷರಾದ ಗಾಯತ್ರಿ ಒಂತಿಮನೆ, ಉಪಾಧ್ಯಕ್ಷರಾದ ರಾಧಾಕೃಷ್ಣ ದೇವಸ್ಯ ಎಸ್ಡಿಎಂಸಿ ಸದಸ್ಯರು ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಶಿಕ್ಷಕರಾದ ರಶ್ಮಿತಾ ನರಿಮೊಗರು, ಸ್ವಾಗತಿಸಿ ವಂದಿಸಿದರು. ಪದವಿಧರ ಶಿಕ್ಷಕಿ ಫ್ಲಾವಿಯಾ ಕಾರ್ಯಕ್ರಮ ನಿರ್ವಹಿಸಿದರು.
ಅಕ್ಷರ ರಥ, ಕಲಿಕಾ ಚಪ್ಪರ, ಕಲಿಕಾ ಚೀಲ, ಪುಸ್ತಕ ಜೋಳಿಗೆ ಹೀಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಶಾಲಾ ಆರಂಭೋತ್ಸವ ನಡೆಸಿದ ಪುಣ್ಚಪ್ಪಾಡಿ ಶಾಲಾ ಈ ವರ್ಷದ ಪರಿಕಲ್ಪನೆ ಕಲಿಕಾ ಹುಂಡಿ.
ಕಾರ್ಯಕ್ರಮದ ವಿಶೇಷತೆಗಳು
*ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಹಾಗೂ ಮೂವರು ಸದಸ್ಯರು ಕಲಿಕಾ ಹುಂಡಿಗೆ ವಿಶಿಷ್ಟ ದೇಣಿಗೆಗಳನ್ನು ನೀಡಿದ್ದು ವಿಶೇಷವಾಗಿತ್ತು.
*ಭಾಗವಹಿಸಿದ ಎಲ್ಲಾ ಪೋಷಕರು, ಶಿಕ್ಷಕರು, ಊರವರು ವಿವಿಧ ದೇಣಿಗೆಗಳನ್ನು ನೀಡಿ ಕಲಿಕಾ ಹುಂಡಿಯನ್ನು ತುಂಬಿದ್ದು ಗಮನಸೆಳೆಯಿತು.
*ಮಕ್ಕಳನ್ನು ಆರತಿ ಬೆಳಗಿ, ಹೂ ನೀಡಿ, ಕಲಿಕಾ ಸಾಮಗ್ರಿಗಳನ್ನು ನೀಡಿ ಶಾಲೆಗೆ ಬರಮಾಡಿಕೊಂಡದ್ದು ವಿಶಿಷ್ಟವಾಗಿತ್ತು.
*ಇಡೀ ವರ್ಷ ಶಾಲೆಯಲ್ಲಿ ಕಲಿಕಾ ಹುಂಡಿಗೆ ದಾನಿಗಳು ದೇಣಿಗೆಯನ್ನು ನೀಡುವ ವಿಶಿಷ್ಟ ಪರಿಕಲ್ಪನೆ ಎಲ್ಲರಿಗೂ ಮೆಚ್ಚುಗೆಯಾಯಿತು.