ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 26ವರ್ಷ ಗುಮಾಸ್ತರಾಗಿ, ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಮೇ 31ರಂದು ಸೇವೆಯಿಂದ ನಿವೃತ್ತರಾದ ಸೆಬಾಸ್ಟಿಯನ್ ಪಿ.ಜೆ.ಅವರಿಗೆ ಬೀಳ್ಕೊಡುಗೆ ಸಮಾರಂಭ ಮೇ 31ರಂದು ಸಂಜೆ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ಅವರು ಮಾತನಾಡಿ, ಸೆಬಾಸ್ಟಿಯನ್ ಅವರು ಸಂಘದಲ್ಲಿ 36 ವರ್ಷ ಉತ್ತಮ ಸೇವೆ ಮಾಡಿದ್ದಾರೆ. ಬ್ಯಾಂಕಿನ ಎಲ್ಲಾ ಕಷ್ಟದ ಸಂದರ್ಭದಲ್ಲೂ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಸಾಲ ವಸೂಲಾತಿಗೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಸಂಸ್ಥೆಯ ಮೇಲೆಯೂ ಅಪಾರ ಅಭಿಮಾನ ಹೊಂದಿದ್ದರು. 28 ವರ್ಷದ ಹಿಂದೆ ನಾನು ಸಂಘದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಅವರ ಕೆಲಸ ಖಾಯಂಗೊಳಿಸಿದ್ದೇವೆ. ಈಗಾಗಲೇ ನಿವೃತ್ತರಾಗಿರುವ ಹಿರಿಯ ಸಿಬ್ಬಂದಿಗಳ ಸೇವೆಯಿಂದ ಬ್ಯಾಂಕ್ ಸಹ ಅಭಿವೃದ್ಧಿ ಪಥದಲ್ಲಿ ಸಾಗಿದೆ. ನಿವೃತ್ತರಾದ ಸೆಬಾಸ್ಟಿಯನ್‌ರವರ ಮುಂದಿನ ಜೀವನವು ಸುಖಮಯವಾಗಿರಲಿ, ದೇವರು ಅವರಿಗೆ ಆಯುರಾರೋಗ್ಯ ಕರುಣಿಸಲಿ ಎಂದರು.
ನಿರ್ದೇಶಕರಾದ ಸರ್ವೋತ್ತಮ ಗೌಡರವರು ಮಾತನಾಡಿ,7 ಗ್ರಾಮಗಳ ವ್ಯಾಪ್ತಿ ಹೊಂದಿರುವ ಸಂಘವು ಗ್ರಾಮೀಣ ಪ್ರದೇಶದ ರೈತರಿಗೆ ಉತ್ತಮ ಸೇವೆ ನೀಡುತ್ತಿದೆ. ಸೆಬಾಸ್ಟಿಯನ್‌ರವರು 36 ವರ್ಷ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ನಿವೃತ್ತಿ ಜೀವನವು ಸುಖಮಯವಾಗಿರಲೆಂದು ಹಾರೈಸಿದರು. ಇನ್ನೋರ್ವ ನಿರ್ದೇಶಕಿ ಉಷಾ ಅಂಚನ್ ಅವರು ಮಾತನಾಡಿ, ಸೆಬಾಸ್ಟಿಯನ್ ಅವರು ಸಹಕಾರ ಸಂಘದ ಸಿಬ್ಬಂದಿಯೂ ಆಗಿ ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದಾರೆ. ಸಂಘದ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ಮೂಲಕ ಸಂಘದ ಅಭಿವೃದ್ಧಿಗೂ ಕಾರಣರಾಗಿ ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದರು. ನಿರ್ದೇಶಕ ಜಯಾನಂದ ಬಂಟ್ರಿಯಾಲ್‌ರವರು ಮಾತನಾಡಿ, ಸೆಬಾಸ್ಟಿಯನ್‌ರವರು ಒಳ್ಳೆಯ ವ್ಯಕ್ತಿತ್ವದವರಾಗಿದ್ದು, ಗ್ರಾಹಕರೊಂದಿಗೆ ಬೆರೆತು ಉತ್ತಮ ಸೇವೆ ನೀಡಿದ್ದಾರೆ. ಸಂಘಟನಾ ಚತುರರೂ ಆಗಿದ್ದು ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಅವರ ನಿವೃತ್ತ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಡಿಸಿಸಿ ಬ್ಯಾಂಕ್‌ನ ಮೇಲ್ವಿಚಾರಕ ವಸಂತ ಅವರು ಮಾತನಾಡಿ, ಸೆಬಾಸ್ಟಿಯನ್ ಅವರು ನಿಷ್ಠೆ, ದಕ್ಷತೆಯಿಂದ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿ ಶುಭಹಾರೈಸಿದರು. ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್.ಯಡಪಡಿತ್ತಾಯರವರು ಮಾತನಾಡಿ, ಸೇವೆಯಲ್ಲಿ ನಿವೃತ್ತಿ ಸಹಜ ಪ್ರಕ್ರಿಯೆ. ಸೆಬಾಸ್ಟಿಯನ್ ಅವರು 36 ವರ್ಷ ಸೇವೆ ಸಲ್ಲಿಸಿದ್ದರೂ ಆರಂಭದಲ್ಲಿ ಬಹಳಷ್ಟು ಕಷ್ಟಪಟ್ಟಿದ್ದಾರೆ. ಗ್ರಾಹಕರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದಾರೆ. ಅವರ ನಿವೃತ್ತಿ ಜೀವನವು ಸುಖಮಯವಾಗಿರಲಿ ಎಂದರು. ಸಂಘದ ವ್ಯವಸ್ಥಾಪಕ ರತ್ನಾಕರ ಬಂಟ್ರಿಯಾಲ್‌ರವರು ಮಾತನಾಡಿ, ಸೆಬಾಸ್ಟಿಯನ್ ಅವರು ಆರಂಭದಲ್ಲಿ ಅತೀ ಕಡಿಮೆ ಸಂಬಳಕ್ಕೆ ದುಡಿದ ಸಿಬ್ಬಂದಿಯೂ ಆಗಿದ್ದಾರೆ. ರಾತ್ರಿ,ಹಗಲು ಕೆಲಸ ಮಾಡಿದ್ದಾರೆ. ಉತ್ತಮ ಸೇವೆ ನೀಡುತ್ತಿದ್ದ ಅವರು ಗ್ರಾಹಕರ ಅಪಾರ ಪ್ರೀತಿ, ಗೌರವವನ್ನೂ ಗಳಿಸಿದ್ದಾರೆ ಎಂದರು.
ಸ್ವಾಗತಿಸಿ ಮಾತನಾಡಿದ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಯಂ. ದಯಾಕರ ರೈ ಅವರು , 28 ವರ್ಷದ ಹಿಂದೆ ಸಂಘ ಬಾಗಿಲು ಹಾಕುವ ಸಂದರ್ಭ ಒದಗಿ ಬಂದಾಗ ಸಂಘಕ್ಕೆ ಬೆನ್ನೆಲುಬಾಗಿ ನಿಂತ ಹಿರಿಯ ಸಿಬ್ಬಂದಿಗಳಲ್ಲಿ ಸೆಬಾಸ್ಟಿಯನ್ ಪಿ.ಜೆ. ಸಹ ಒಬ್ಬರಾಗಿದ್ದಾರೆ. ಆಯಾಸವಿಲ್ಲದೆ ದುಡಿಮೆ, ಯಾವುದೇ ಒತ್ತಡವಿದ್ದರೂ ನಿಭಾಯಿಸಿಕೊಂಡು ಕೆಲಸ ನಿರ್ವಹಿಸುವಲ್ಲಿ ಸೆಬಾಸ್ಟಿಯನ್‌ರವರು ನಿಪುಣರಾಗಿದ್ದರು. ಯಾವುದೇ ಸಂದಿಗ್ಧ ಪರಿಸ್ಥಿತಿಯಿದ್ದರೂ ಸಾಲ ವಸೂಲಾತಿ ವಿಚಾರದಲ್ಲಿ ಸಂಘಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿ ಎಂದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಪ್ರಶಾಂತ ರೈ, ಸುದರ್ಶನ್, ಸುಲೋಚನಾ ಡಿ., ಅಣ್ಣು ಬಿ., ಸುಮಿತ್ರಾ, ಗುರುರಾಜ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಯಂ.ಟಿ. ಮಹೇಶ್ ವಂದಿಸಿದರು. ಜಯಾನಂದ ಬಂಟ್ರಿಯಾಲ್ ನಿರೂಪಿಸಿದರು. ಸುಲೋಚನಾ ಪ್ರಾರ್ಥಿಸಿದರು. ನಿವೃತ್ತ ಸಿಬ್ಬಂದಿ ಪದ್ಮನಾಭ ಶೆಟ್ಟಿ, ಸಂಘದ ಮೆನೇಜರ್ ರಮೇಶ ನಾಯ್ಕ, ಸಿಬ್ಬಂದಿಗಳಾದ ಅನಿಶ್ ಕೆ.ಜೆ., ಸಂದೀಪ್‌ಕುಮಾರ್, ಅಶೋಕ ಎಸ್., ಮುಕುಂದ ಪ್ರಸಾದ್ ಎಸ್., ರೋಶನ್‌ಕುಮಾರ್ ಬಿ.ಜೆ., ಪಿ.ನಾಗೇಶ, ತಾರಾನಾಥ, ಪ್ರಮೋದ್, ಪಿಗ್ಮಿ ಸಂಗ್ರಾಹಕ ಕೆ.ರಘುನಾಥ, ಕ್ಯಾಂಪ್ಕೋ ಶಾಖಾ ಮೇನೇಜರ್ ಸಚಿನ್ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸನ್ಮಾನ:ನಿವೃತ್ತರಾದ ಸೆಬಾಸ್ಟಿಯನ್ ಪಿ.ಜೆ.ಅವರಿಗೆ ಶಾಲು, ಹಾರಾರ್ಪಣೆ ಮಾಡಿ, ಮೈಸೂರು ಪೇಟ, ಫಲತಾಂಬೂಲ ನೀಡಿ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಿಬ್ಬಂದಿಗಳೂ ಸೆಬಾಸ್ಟಿಯನ್ ಅವರನ್ನು ಗೌರವಿಸಿದರು. ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದ ಸೆಬಾಸ್ಟಿಯನ್ ಪಿ.ಜೆ.ಅವರು, 1986ರಲ್ಲಿ ಸಂಘಕ್ಕೆ ಸೇರ್ಪಡೆಗೊಂಡಿದ್ದರೂ 1998ರ ತನಕ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸಿದ್ದೇನೆ. ಸಂಘದ ಪ್ರಧಾನಕಚೇರಿ, ಶಾಖಾ ಕಚೇರಿಗಳಲ್ಲಿ, ಪಡಿತರ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಕೆಲಸ ನಿರ್ವಹಿಸಿದ್ದೇನೆ. ಸಹಕಾರ ಸಂಘದಲ್ಲಿನ ಕೆಲಸಕ್ಕೆ ಸಮಯದ ಮಿತಿಯಿಲ್ಲ. ರಾತ್ರಿ ಹಗಲು ಕೆಲಸ ನಿರ್ವಹಿಸಬೇಕಾಗುತ್ತದೆ.36 ವರ್ಷಗಳ ಸೇವೆಯ ಸಂದರ್ಭದಲ್ಲಿ ಸದಸ್ಯರಿಗೆ ಸರಿಯಾದ ಸೇವೆ ಒದಗಿಸಿದ್ದೇನೆ ಎಂಬ ಸಂತೃಪ್ತಿ ಇದೆ. ಸಂಘದಲ್ಲಿ ಈಗ ಉತ್ತಮ ಅಧ್ಯಕ್ಷರೂ ಇದ್ದು ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದಾರೆ ಎಂದರು.