ಕೊಕ್ಕಡ ಪಿಯು ಕಾಲೇಜು ಪ್ರಾಂಶುಪಾಲ ವೆಂಕಟೇಶಮೂರ್ತಿಯವರಿಗೆ ಪ್ರಭಾರ
ಪುತ್ತೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮಯದಲ್ಲಿ ಚುನಾವಣಾಧಿಕಾರಿಯವರ ಅನುಮತಿ ಪಡೆಯದೆ ಬೆಂಗಳೂರಿಗೆ ತೆರಳಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ದ.ಕ.ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಡಿ.ಜಯಣ್ಣರವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಮೇ10ರಂದು ನಡೆದಿದ್ದ ಮತದಾನ ಪ್ರಕ್ರಿಯಗೆ ಸಂಬಂಧಿಸಿ ಮೇ9ರಂದು ದ.ಕ.ಜಿಲ್ಲಾ ಚುನಾವಣಾಧಿಕಾರಿ ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿರುವಂತೆ ಡಿಡಿಪಿಯು ಜಯಣ್ಣರವರಿಗೆ ಸೂಚಿಸಲಾಗಿತ್ತು, ಆದರೆ ಅವರು ಸುದ್ದಿಗೋಷ್ಟಿಗೆ ಹಾಜರಾಗದೆ ಗೈರಾಗಿದ್ದರು.
ನೋಟೀಸ್ ಜಾರಿ: ಈ ಬಗ್ಗೆ ಚುನಾವಣಾಧಿಕಾರಿಯವರು ಡಿಡಿಪಿಐ ಅವರಿಗೆ ನೋಟೀಸ್ ಜಾರಿ ಮಾಡಿದ್ದರು. ನೋಟೀಸ್ಗೆ ಜಯಣ್ಣರವರು ಸಮಾಧಾನಕರವಾಗಿ ಉತ್ತರಿಸಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶಿಸಿದ್ದಾರೆ. ಜಯಣ್ಣರವರ ಅಮಾನತಿನಿಂದ ತೆರವಾದ ಸ್ಥಾನಕ್ಕೆ ಕೊಕ್ಕಡ ಪಿಯು ಕಾಲೇಜು ಪ್ರಾಂಶುಪಾಲ ವೆಂಕಟೇಶಮೂರ್ತಿರವರನ್ನು ಪ್ರಭಾರವಾಗಿ ನೇಮಕ ಮಾಡಲಾಗಿದೆ.
ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡ ಸಿಬ್ಬಂದಿ, ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್ ದಿನ ಆಯಾ ಕೇಂದ್ರಗಳಿಗೆ ತೆರಳುವುದು ವಿಳಂಬವಾಗಿತ್ತು. ಡಿಡಿಪಿಯುರವರು ಮಾಹಿತಿ ನೀಡದೆ ಕೇಂದ್ರಸ್ಥಾನ ತೊರೆದಿರುವುದು ಈ ವಿಳಂಬಕ್ಕೆ ಕಾರಣ ಎಂದು ಜಿಲ್ಲಾ ಚುನಾವಣಾಧಿಕಾರಿಯವರ ಮೇ 9ರ ನಡಾವಳಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಲಿಖಿತ ಉತ್ತರ ನೀಡಿದ್ದ ಸಿ.ಡಿ. ಜಯಣ್ಣರವರು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಮಾಹಿತಿಯನ್ನು ಬೆಂಗಳೂರಿಗೆ ತಲುಪಿಸಲು ನಾನೇ ತೆರಳಬೇಕಾಯಿತು ಎಂದು ಸಮಜಾಯಿಷಿ ನೀಡಿದ್ದರು. ಮೇ22ರಂದು ಮತ್ತೆ ಲಿಖಿತ ಉತ್ತರ ನೀಡಿ, ತನ್ನ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸುವುದಾಗಿ ಹೇಳಿದ್ದರು.