ಆಲಂಕಾರು: ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ಶುಭಾರಂಭ

0


ಸ್ವಾವಲಂಬಿ ಬದುಕಿನಿಂದ ಗ್ರಾಮದ ಪ್ರಗತಿ: ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಆಲಂಕಾರು: ಆಲಂಕಾರು ಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ಜೂ.2ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು, ದುಡಿಯುವ ಕೈಗಳಿಗೆ ಮನಸ್ಸುಗಳಿರಬೇಕು. ನಿಸ್ವಾರ್ಥ ಚಿಂತನೆ ಮೈಗೂಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಇದರಿಂದ ಕುಟುಂಬ, ಗ್ರಾಮ, ದೇಶದ ಪ್ರಗತಿ ಆಗಲಿದೆ ಎಂದು ನುಡಿದರು. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ವಾಣಿಜ್ಯ ಮಳಿಗೆಗಳೂ ಅವಶ್ಯಕವೆನಿಸಿದೆ. ಎಲ್ಲರಿಗೂ ಸರಕಾರಿ ಉದ್ಯೋಗ ಸಿಗುವುದಿಲ್ಲ. ದುಡಿಯಲು ನಾನಾ ಕ್ಷೇತ್ರಗಳಿವೆ. ದುಡಿಯುವ ಕೈಗಳಿಗೆ ಮನಸ್ಸು ಬೇಕಷ್ಟೇ. ಸೋಮಾರಿಗಳಾಗುವುದರಿಂದ ದೇಶ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದು ಸ್ವಾಮೀಜಿ ಹೇಳಿದರು.



ಗಿಡ ನೆಟ್ಟು ಬೆಳೆಸಿ:
ಆಲಂಕಾರು ಪೇಟೆಯಲ್ಲಿ ಸುಂದರ ವಾಣಿಜ್ಯ ಮಳಿಗೆ ನಿರ್ಮಾಣಗೊಳಿಸಿರುವ ಮಾಲಕ ನಾರ್ಣಪ್ಪ ಗೌಡ ಮಳಿಗೆಯ ಪರಿಸರದಲ್ಲಿ 5 ಗಿಡ ನೆಟ್ಟು ಬೆಳೆಸಬೇಕು. ಅಭಿವೃದ್ಧಿಗೆ ಪ್ರಕೃತಿಯ ಕೊಡುಗೆಯೂ ಅಪಾರವಾಗಿದೆ. ಆದ್ದರಿಂದ ಜನರು ತಮ್ಮ ಹುಟ್ಟುಹಬ್ಬ ಸೇರಿದಂತೆ ತಮ್ಮ ಮನೆಯಲ್ಲಿ ನಡೆಯುವ ಯಾವುದೇ ಶುಭ ಕಾರ್ಯಕ್ರಮಗಳ ಸಂದರ್ಭದಲ್ಲಿ ಪರಿಸರದಲ್ಲಿ ಗಿಡ ನೆಟ್ಟು ಬೆಳೆಸಬೇಕು. ಇದರಿಂದ ಮನುಷ್ಯನಿಗೆ ನರಕವೇ ಬರುವುದಿಲ್ಲ. ಅನೇಕ ಜೀವಜಂತುಗಳಿಗೆ ಆಹಾರ ಸಿಗುತ್ತದೆ. ನೀರಿನ ಫಲವತ್ತತೆಯೂ ಬೆಳೆಯುತ್ತದೆ. ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಸ್ವಾಮೀಜಿ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಆಲಂಕಾರು ಗ್ರಾ.ಪಂ.ನಿವೃತ್ತ ಪಿಡಿಒ ಜಗನ್ನಾಥ ಶೆಟ್ಟಿ ಎಂ., ಅವರು ಮಾತನಾಡಿ, ಆಲಂಕಾರು ಪೇಟೆ ಬೆಳೆದಿದ್ದು ಸಾಕಷ್ಟು ವಾಣಿಜ್ಯ ಸಂಕೀರ್ಣಗಳೂ ನಿರ್ಮಾಣಗೊಂಡಿವೆ. ಇದರಿಂದ ಪೇಟೆಯ ಬೆಳವಣಿಗೆಯೂ ಆಗಿದೆ. ಇಂತಹ ವಾಣಿಜ್ಯ ಸಂಕೀರ್ಣಗಳ ಮೂಲಕ ಉದ್ಯೋಗ ರಹಿತರಿಗೆ ಉದ್ಯೋಗವೂ ಸೃಷ್ಟಿಯಾಗಲಿ ಎಂದರು. ಇನ್ನೋರ್ವ ಅತಿಥಿ ಮೆಸ್ಕಾಂ ಆಲಂಕಾರು ಶಾಖಾ ಜೂನಿಯರ್ ಇಂಜಿನಿಯರ್ ಪ್ರೇಮ್‌ಕುಮಾರ್‌ರವರು ಮಾತನಾಡಿ, ಸಣ್ಣಪೇಟೆಯಾಗಿದ್ದ ಆಲಂಕಾರು ಪೇಟೆ ಈಗ ಬಹಳಷ್ಟು ಬೆಳೆದಿದೆ. ಇನ್ನಷ್ಟೂ ಬೆಳೆಯಲಿ. ನಾರ್ಣಪ್ಪ ಗೌಡರ ಮಾಲಕತ್ವದ ದುರ್ಗಾಕಾಂಪ್ಲೆಕ್ಸ್ ಅಭಿವೃದ್ಧಿ ಹೊಂದಲಿ ಎಂದರು. ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಮಾತನಾಡಿ, ದುರ್ಗಾಕಾಂಪ್ಲೆಕ್ಸ್ ಆಲಂಕಾರು ಪೇಟೆಗೆ ಮುಕುಟಮಣಿಯಾಗಿದೆ. ಇಂತಹ ವ್ಯವಸ್ಥೆಗಳಿಂದ ಪೇಟೆಯಲ್ಲಿ ಸಿಗುವ ಸವಲತ್ತುಗಳೂ ಹಳ್ಳಿಗೂ ಬರಲು ಸಾಧ್ಯವಿದೆ. ಜನರೂ ಪೇಟೆ ಸುತ್ತುವುದು ತಪ್ಪಲಿದೆ. ದುರ್ಗಾಕಾಂಪ್ಲೆಕ್ಸ್ ಮೂಲಕ ಜನರಿಗೆ ಉತ್ತಮ ಸೇವೆ ಸಿಗಲಿ ಎಂದರು. ಕಟ್ಟಡ ಮಾಲಕ ನಾರ್ಣಪ್ಪ ಗೌಡ ಕೆಮ್ಮಿಂಜೆ, ಮೋಹನಾಂಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಕಟ್ಟಡದ ಇಂಜಿನಿಯರ್‌ಗಳಾದ ಮನೋಹರ ಹಾಗೂ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಅವರನ್ನು ಕಟ್ಟಡ ಮಾಲಕರ ಪರವಾಗಿ ಸ್ವಾಮೀಜಿ ಶಾಲುಹೊದಿಸಿ, ಫಲತಾಂಬೂಲ ನೀಡಿ ಗೌರವಿಸಿದರು. ಕಟ್ಟಡ ಮಾಲಕ ನಾರ್ಣಪ್ಪ ಗೌಡ ಕೆಮ್ಮಿಂಜೆ ಹಾಗೂ ಮೋಹನಾಂಗಿ ದಂಪತಿ ಸ್ವಾಮೀಜಿಗೆ ತುಳಸಿ ಮಾಲಾರ್ಪಣೆ ಮಾಡಿ, ಫಲತಾಂಬೂಲ ನೀಡಿ ಗೌರವಿಸಿದರು.
ಲಕ್ಷ್ಮೀ ಪಿ.ದೋಳ ನೆಕ್ಕರೆ ಸ್ವಾಗತಿಸಿ, ಚಕ್ರಪಾಣಿ ಬಾಕಿಲ ವಂದಿಸಿದರು. ರಾಮಣ್ಣ ಗೌಡ ದೋಳ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಆಲಡ್ಕ ಪ್ರಾರ್ಥಿಸಿದರು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ತೇಜಸ್ವಿನಿ ಕಟ್ಟಪುಣಿ, ಪ್ರವೀಣ್ ಕುಂಟ್ಯಾನ, ಲೆಕ್ಕಪರಿಶೋಧಕ ಶ್ರೀಧರ ಗೌಡ ಕಣಜಾಲು, ನಿವೃತ್ತ ಮುಖ್ಯಶಿಕ್ಷಕ ನಾಗಪ್ಪ ಗೌಡ ಮರುವಂತಿಲ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಪದ್ಮಪ್ಪ ಗೌಡ ರಾಮಕುಂಜ, ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಗೌಡ ಪಜ್ಜಡ್ಕ, ಪುತ್ತೂರು ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಪೂವಪ್ಪ ನಾಯ್ಕ್ ಶಾಂತಿಗುರಿ, ಕಡಬ ತಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಎಂಡೋ ವಿರೋಧಿ ಹೋರಾಟ ಸಮಿತಿ ದ.ಕ.ಜಿಲ್ಲಾ ಅಧ್ಯಕ್ಷ ಪೀರ್ ಮಹಮ್ಮದ್ ಆಲಂಕಾರು ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಮಾಲಕ ನಾರ್ಣಪ್ಪ ಗೌಡರವರ ಸಹೋದರ ಗೋಪಣ್ಣ ಗೌಡ, ಪುತ್ರ ಪ್ರಸಾದ್ ಕೆಮ್ಮಿಂಜೆ, ಪುತ್ರಿಯರಾದ ನಮಿತಾ, ಪ್ರಣೀತಾ, ನಿವೇದಿತಾ, ಲತಾ, ಅಳಿಯಂದಿರಾದ ಪ್ರಕಾಶ್ ಇಚ್ಚೂರು, ನಂದಾದೀಪ, ಶಿವಪ್ರಸಾದ್ ಹಾಗೂ ಕುಟುಂಬಸ್ಥರು ಸಹಕರಿಸಿದರು.

LEAVE A REPLY

Please enter your comment!
Please enter your name here