ಪುತ್ತೂರು: 2023ರ ಹಲಸಿನ ಹಬ್ಬ ಜೂ. 17, 18ರಂದು ಪುತ್ತೂರು ಜೈನ ಭವನದಲ್ಲಿ ನಡೆಯಲಿದೆ. ಕಾಲ ಒಂದಿತ್ತು. ಉಣ್ಣಲು ತಿನ್ನಲು ಆಹಾರದ ಕೊರತೆ ಇತ್ತು. ಊರ ಮಂದಿ ಹೊಟ್ಟೆ ತುಂಬುವುದಕ್ಕಾಗಿ ಬೇಸಿಗೆಯನ್ನೇ ಕಾಯುತ್ತಿದ್ದರು. ವಿಶು (ಸೌರಮಾನ ಯುಗಾದಿ) ಹಬ್ಬ ದಾಟಿತೆಂದರೆ ಎಲ್ಲೆಲ್ಲೂ ಸಿಗುತ್ತಿತ್ತು ಮಾಗಿದ ಹಲಸಿನ ಹಣ್ಣು. ಹಲಸಿನ ಹಣ್ಣಿಗೋಸ್ಕರ ಅನತಿ ದೂರದಿಂದ ಜನ ಕೇಳಿ ಬಂದಾರು. ಕೊರೆದ ಹಲಸಿನ ಹಣ್ಣಿನಿಂದ ಸಿಪ್ಪೆ ಬಿಟ್ಟು ಬೇರೆ ಎಲ್ಲವನ್ನೂ ಬಳಸಿಯಾರು. ಮಳೆಗಾಲಕ್ಕಾಗಿ ಒಂದಷ್ಟು ಬೇಳೆ, ಸೊಳೆಯನ್ನು ತೆಗೆದಿಟ್ಟಾರು. ಅದೋ ಎಷ್ಟೊಂದು ವೈವಿಧ್ಯಗಳನ್ನು ಹಲಸಿನಲ್ಲಿ ಮಾಡಿ ತೋರಿಸಿದ್ದಾರೆ. ಕಡುಬಂತೆ, ಇಡ್ಲಿಯಂತೆ, ವಡೆ ಸುಟ್ಟವು ಹೋಳಿಗೆಗಳಂತೆ, ಬನ್ಸು ಕಟ್ಲೆಟ್ಟು ಚಿಪ್ಸುಗಳಂತೆ, ಉಣ್ಣುವ ಅನ್ನಕ್ಕೆ ವೈವಿಧ್ಯಮಯ ಪಾಕೇತನಗಳಂತೆ, ಹಪ್ಪಳ ಸೆಂಡಿಗೆ ಪಾಯಸಗಳಂತೆ, ಹಣ್ಣುರಸ ಹಣ್ಣಪ್ಪಳ ಬೆರಟಿಗಳಂತೆ, ದೋಸೆ ರೊಟ್ಟಿ ಚಪಾತಿಗಳಂತೆ. ಅಬ್ಬಬ್ಬಾ ಹಲಸಿನಲ್ಲಿ ನಡೆದ ಸಂಶೋಧನೆಗಳೇನು ವೈವಿಧ್ಯಗಳೇನು? ಒಂದೊಂದು ತಿಂಡಿಗಳ ತಯಾರಿಯಲ್ಲಿಯೂ ವೈವಿಧ್ಯಗಳು. ಆಧುನಿಕ ಜಗತ್ತಿನ ನೂತನ ತಿಂಡಿಗಳ ಪಟ್ಟಿಬೇಕೇ? ಬಿರಿಯಾನಿ, ಪಿಜ್ಜ ಬರ್ಗರ್, ಕಬಾಬ್, ಮಿಲ್ಕ್ ಶೇಕ್, ಇವುಗಳೆಲ್ಲ ಹಲಸಿನ ನೂತನ ಸಂಶೋಧನೆಗಳು. ಇವೆಲ್ಲವುಗಳನ್ನು ನೋಡಬೇಕೆಂದು, ರುಚಿಯನ್ನು ಸವಿಯಬೇಕೆಂದು, ತಿನ್ನಬೇಕೆಂದುಕೊಂಡವರು ಹಲಸಿನ ಹಬ್ಬಕ್ಕೆ ಭೇಟಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.