ವಿಟ್ಲ: ಗೌರವ ಶಿಕ್ಷಕಿಯರಿಬ್ಬರನ್ನು ಕೈಬಿಟ್ಟ ವಿಚಾರ ಮಜಿ ಶಾಲೆಯಲ್ಲಿ ಜಮಾಯಿಸಿದ ಪೋಷಕರು

0

ಬಂಟ್ವಾಳ: ವೀರಕಂಬ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರನ್ನು ಹುದ್ದೆಯಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಮಕ್ಕಳ ಹೆತ್ತವರು ಶಾಲೆಯಲ್ಲಿ ಜಮಾಯಿಸಿದ ಘಟನೆ ನಡೆದಿದೆ.

ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದತ್ತು ಸಂಸ್ಥೆ ವೇತನ ನೀಡಿ ಈ ಹಿಂದೆ ಇಬ್ಬರು ಶಿಕ್ಷಕರನ್ನು ನೇಮಿಸಿದ್ದು ಈ ವರ್ಷ ಅವರ ಬದಲಿಗೆ ಬೇರೆ ನಾಲ್ಕು ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಆಕ್ರೋಶಗೊಂಡ ಮಕ್ಕಳ ಹೆತ್ತವರು ಶಾಲೆ ಮುಂಭಾಗ ಜಮಾಯಿಸಿ, ಕೆಲಸದಿಂದ ಕೈಬಿಡಲಾದ ಇಬ್ಬರು ಗೌರವ ಶಿಕ್ಷಕಿಯರನ್ನು ತಕ್ಷಣವೇ ಮರು ನೇಮಕ ಮಾಡಬೇಕು ಎಂದು ಪಟ್ಟು ಹಿಡಿದರು. ಇಬ್ಬರು ಶಿಕ್ಷಕರನ್ನೂ ಮುಂದುವರಿಸಲಾಗುವುದು ಎಂದು ಎಸ್‌ಡಿಎಂಸಿ ಸಭೆಯಲ್ಲಿ ನಿರ್ಣಯ ಕೈಗೊಂಡರೂ ಅದು ಪಾಲನೆ ಆಗಿಲ್ಲ ಎಂದು ದೂರಿದರು.

ಶಾಲೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ದತ್ತು ಪಡೆದಿರುವ ಸುರತ್ಕಲ್ ಮಾತ ಡೆವಲಪರ್ಸ್ ಪ್ರೈವೆಟ್ ಲಿಮಿಟಿಡ್‌ನ ಸಂತೋಷ್ ಕುಮಾರ್ ಶೆಟ್ಟಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿ, ‘ಮುಚ್ಚುವ ಹಂತದಲ್ಲಿದ್ದ ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗಿದೆ.ವರ್ಷಕ್ಕೆ ಲಕ್ಷಾಂತರ ರೂ. ಹಣ ಹಾಕಿ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ ಶಾಲಾ ಕಟ್ಟಡ, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಇಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಮುಂದುವರಿಸುವ ಉದ್ದೇಶದಿಂದ ಅವರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು. ಆದರೆ ಅವರು ಆಯ್ಕೆ ಸಂದರ್ಭದಲ್ಲಿ ಬಂದಿರಲಿಲ್ಲ, ಆದ್ದರಿಂದ ಹೊಸ ಶಿಕ್ಷಕರನ್ನು ನೇಮಿಸಲಾಗಿದೆ’ ಎಂದರು.

ಶಿಕ್ಷಣಾಧಿಕಾರಿಗಳ ಜತೆ ಚರ್ಚಿಸಲಾಗಿದೆ: ಸರಕಾರದ ನಿಯಮದ ಪ್ರಕಾರ ಪ್ರಕ್ರಿಯೆ ನಡೆಸುವಂತೆ ಅವರು ತಿಳಿಸಿದ್ದು, ಅದರಂತೆ ಸಭೆಯಲ್ಲಿ ಇಟ್ಟು ತೀರ್ಮಾನ ಮಾಡಲಾಗುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here