ಸಮಾಜಮುಖಿಯಾಗಿ ಬದುಕುವವರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ: ಕೃಷ್ಣಪ್ಪ ಪೂಜಾರಿ
ಆಲಂಕಾರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರೂ ಆದ ಕೆ.ಚಂದ್ರಶೇಖರ ಪೂಜಾರಿ ಆಲಂಕಾರು ಅವರಿಗೆ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಶ್ರದ್ದಾಂಜಲಿ ಸಭೆ ಜೂ.3ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನದಯಾಳು ಸಭಾಭವನದಲ್ಲಿ ನಡೆಯಿತು.


ನುಡಿನಮನ ಸಲ್ಲಿಸಿದ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿಯವರು, ಸಮಾಜಮುಖಿಯಾಗಿ ಬದುಕುವವರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ ಎಂಬುದಕ್ಕೆ ಕೆ.ಚಂದ್ರಶೇಖರ ಪೂಜಾರಿಯವರೇ ನಿದರ್ಶನರಾಗಿದ್ದಾರೆ. ಸಮಾಜದ ಎಲ್ಲಾ ಜಾತಿ, ಧರ್ಮದವರ ಪ್ರೀತಿಗೆ ಪಾತ್ರರಾಗಿರುವ ಅವರೊಬ್ಬ ಧನ್ಯತಾಜೀವಿಯಾಗಿದ್ದರು. ಕಡು ಬಡತನದ ಕುಟುಂಬದಲ್ಲಿ ಜನಿಸಿದ ಚಂದ್ರಶೇಖರ ಅವರು ಶಾಲೆಗೆ ಹೋಗಲು ಕಷ್ಟಕರವಾಗಿದ್ದ ಸಂದರ್ಭದಲ್ಲೂ ಪ.ಪೂ.ಶಿಕ್ಷಣ ಪಡೆದುಕೊಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಲ್ಲಿ ಬೆಳೆದವರು. ತಂದೆಯಾಗಿ ಅವರು ಮಾಡಬೇಕಾದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು. ಅನೇಕ ಸಂಘ ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದ ಕೆ.ಚಂದ್ರಶೇಖರ ಪೂಜಾರಿಯವರದ್ದು ಸ್ವಾರ್ಥರಹಿತ, ಫಲಾಪೇಕ್ಷೆ ಇಲ್ಲದ ಮೌನ ಸೇವೆಯಾಗಿದೆ. ಯಕ್ಷಗಾನದ ಪ್ರಬುದ್ಧ ಅರ್ಥದಾರಿಯಾಗಿ ಜಿಲ್ಲೆಯ ಮೂಲೆ ಮೂಲೆಯಲ್ಲೂ ಸೇವೆ ನೀಡಿದ್ದಾರೆ. ಯಶಸ್ವಿ ಕಾರ್ಯಕ್ರಮ ಸಂಘಟಕ, ನಿರೂಪಕರೂ ಆಗಿದ್ದರು. ಶರವೂರು ದೇವರ ಅವಭೃತ ಸೇವೆಯ ಕೈಂಕರ್ಯದಲ್ಲಿ ಪ್ರತಿವರ್ಷವೂ ತೊಡಗಿಕೊಳ್ಳುತ್ತಿದ್ದ ಚಂದ್ರಶೇಖರ ಅವರು, ದೇವರ ಅವಭೃತ ನಡೆಯುತ್ತಿದ್ದ ಕುಮಾರಧಾರ ನದಿಯ ಪರಿಸರದಲ್ಲೇ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಕೃಷ್ಣಪ್ಪ ಪೂಜಾರಿ ಹೇಳಿದರು.
ಆತ್ಮಹತ್ಯೆ ಮಹಾಪಾಪ:
ಕಷ್ಟಗಳು ಜೀವನದಲ್ಲಿ ಬರುವುದು ಸ್ವಾಭಾವಿಕ. ಜಗತ್ತಿನಲ್ಲಿ ಯಾರೂ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಲೋಪವಿದೆ. ಇಂತಹ ಸಂದರ್ಭದಲ್ಲಿ ಜೀವನದ ಘನತೆ ಉಳಿಸಿಕೊಂಡು ಹೋಗುವಂತದ್ದು ಸವಾಲಿನ ಕೆಲಸ ಆಗಿದೆ. ಆತ್ಮಹತ್ಯೆಯಂತಹ ಮಹಾಪಾಪ ಯಾವುದೂ ಇಲ್ಲ. ಆತ್ಮಹತ್ಯೆ ಮಾಡಬಾರದು. ಅದು ತಪ್ಪು ನಿರ್ಧಾರ. ನಮ್ಮನ್ನು ನಾವೇ ಸಾಯಿಸುವ ಅಧಿಕಾರವಿಲ್ಲ. ಹುಟ್ಟಿಸಿದ ಪರಮಾತ್ಮನಿಗೇ ಮಾತ್ರ ಸಾಯಿಸುವ ಅಧಿಕಾರವಿರುವುದು ಎಂದು ಕೃಷ್ಣಪ್ಪ ಪೂಜಾರಿ ಹೇಳಿದರು.
ಎಲ್ಲರೊಂದಿಗೂ ಉತ್ತಮ ಬಾಂಧವ್ಯ:
ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ಕುಮಾರ್ ಕೆಡೆಂಜಿ ಮಾತನಾಡಿ, ಕೆ.ಚಂದ್ರಶೇಖರ ಪೂಜಾರಿಯವರು ಎಲ್ಲಾ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ತಮ್ಮ ಜೀವಿತಾವಧಿಯಲ್ಲಿ ಎಲ್ಲರಿಗೂ ಒಳಿತನ್ನೇ ಬಯಸಿದ್ದರು. ಬಿಲ್ಲವ ಸಮಾಜದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದರು ಎಂದು ಹೇಳಿದರು.
ಉತ್ತಮ ವ್ಯಕ್ತಿತ್ವದವರು:
ಆಲಂಕಾರು ಗ್ರಾ.ಪಂ.ಅಧ್ಯಕ್ಷ ಸದಾನಂದ ಆಚಾರ್ಯ ಅವರು ಮಾತನಾಡಿ, ಚಂದ್ರಶೇಖರ ಅವರು ಉತ್ತಮ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೇಳಿದರು.
ಆತ್ಮೀಯತೆಯ ಸಂಬಂಧ ಬೆಳೆಸಿಕೊಂಡಿದ್ದರು:
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ ಮಾತನಾಡಿ, ಸಾಮಾನ್ಯ ವ್ಯಕ್ತಿಯ ಜೊತೆಗೂ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದವರು ಚಂದ್ರಶೇಖರ ಪೂಜಾರಿಯವರು. ಅವರದ್ದು ಬಹುಮುಖ ವ್ಯಕ್ತಿತ್ವ. ಆಲಂಕಾರು ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದರು. ಶರವೂರು ದೇವಸ್ಥಾನದ ಆಡಳಿತ ಸಮಿತಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ದೇವಸ್ಥಾನದ ಇತರೇ ಸಮಿತಿಗಳಲ್ಲೂ ತೊಡಗಿಕೊಂಡು ದೇವಸ್ಥಾನದ ಕೀರ್ತಿ ಬೆಳಗಿಸಿದ್ದಾರೆ ಎಂದರು.
ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದರು:
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಮಾತನಾಡಿ, ಕೆ.ಚಂದ್ರಶೇಖರ ಪೂಜಾರಿಯವರು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದವರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ನಂಬಲೂ ಅಸಾಧ್ಯವಾಗಿದೆ. ಆಲಂಕಾರಿನಲ್ಲಿ ಜೇಸಿಐ ಆರಂಭಗೊಂಡಾಗ ಅದರಲ್ಲೂ ತೊಡಗಿಕೊಂಡಿದ್ದರು. ಎಲ್ಲಾ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಎಲ್ಲರನ್ನೂ ಒಗ್ಗಟ್ಟಿನಲ್ಲಿ ಕೊಂಡೊಯ್ಯುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ ಅವರಲ್ಲಿತ್ತು ಎಂದರು.
ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ:
ಆಲಂಕಾರು ಶ್ರೀ ದುರ್ಗಾಂಬಾ ಕಲಾ ಸಂಗಮದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ನೈಮಿಷ ಮಾತನಾಡಿ, ಪ್ರಬುದ್ಧ ಯಕ್ಷಗಾನ ಅರ್ಥದಾರಿಯಾಗಿದ್ದ ಕೆ.ಚಂದ್ರಶೇಖರ ಪೂಜಾರಿಯವರು ಎಲ್ಲರೊಂದಿಗೂ ಆತ್ಮೀಯ ನಂಟು ಹೊಂದಿದ್ದರು. ಕೆಲ