ರಾಮಕುಂಜ ಗ್ರಾ.ಪಂ.ಪಿಡಿಒಗೆ ಬೀಳ್ಕೊಡುಗೆ, ಸನ್ಮಾನ

0

ರಾಮಕುಂಜ: ಕಳೆದ 5 ವರ್ಷಗಳಿಂದ ರಾಮಕುಂಜ ಗ್ರಾ.ಪಂ.ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಮೇ 31ರಂದು ನಿವೃತ್ತರಾದ ಜೆರಾಲ್ಡ್ ಮಸ್ಕರೇನ್ಹಸ್‌ರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಜೂ.7ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. 8 ವರ್ಷ ರಾಮಕುಂಜ ಗ್ರಾ.ಪಂ.ನಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸಿ ನರಿಮೊಗರು ಗ್ರಾ.ಪಂ.ಗೆ ವರ್ಗಾವಣೆಗೊಂಡಿರುವ ರವಿಚಂದ್ರ ಯು ಹಾಗೂ ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಉಪನಿರ್ದೇಶಕರಾಗಿದ್ದು ಮೇ.31 ರಂದು ನಿವೃತ್ತರಾದ ಡಾ.ವೆಂಕಟೇಶ್ ಅವರಿಗೂ ಬೀಳ್ಕೊಡುಗೆ, ಸನ್ಮಾನವೂ ನಡೆಯಿತು.

ಸನ್ಮಾನಿಸಿದ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.ಅವರು ಮಾತನಾಡಿ, ಜೆರಾಲ್ಡ್ ಮಸ್ಕರೇನಸ್ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಆಡಳಿತ ಮಂಡಳಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಎಲ್ಲಾ ಜವಾಬ್ದಾರಿಯನ್ನೂ ತಾವೇ ವಹಿಸಿಕೊಂಡು ಕೆಲಸ ನಿರ್ವಹಿಸಿದ್ದಾರೆ. ಅವರ ಅವಧಿಯಲ್ಲಿ ರಾಮಕುಂಜ ಗ್ರಾಮದಲ್ಲಿ ಗೋ ಶಾಲೆ, ಅಮೈ ಕೆರೆ, ಎತ್ತರಪಡ್ಪು ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಅವರ ವಿಶ್ರಾಂತ ಜೀವನವು ಸುಖಮಯವಾಗಿರಲಿ ಎಂದರು. ರವಿಚಂದ್ರ ಯು ರವರು ರಾಮಕುಂಜ ಗ್ರಾ.ಪಂ.ನಲ್ಲಿ 8 ವರ್ಷ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಜನರ ವಿಶ್ವಾಸಗಳಿಸಿದ್ದಾರೆ. ಅವರು ರಾಮಕುಂಜಕ್ಕೆ ಮತ್ತೆ ಬರುವುದಾದಲ್ಲಿ ಸದಾ ಬಾಗಿಲು ತೆರೆದಿರುತ್ತದೆ. ನಿವೃತ್ತರಾದ ಕೊಯಿಲ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ವೆಂಕಟೇಶ್ ಅವರ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.

ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.ಮಾತನಾಡಿ, ಇಲ್ಲಿಂದ ವರ್ಗಾವಣೆಗೊಂಡ ರವಿಚಂದ್ರ ಯು ರವರು ರಾಮಕುಂಜ ಗ್ರಾ.ಪಂ.ನ ಪ್ರಥಮ ಪಿಡಿಒ. ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತಿಳುವಳಿಕೆ ನೀಡುತ್ತಿದ್ದ ಸಜ್ಜನ ಅಧಿಕಾರಿಯೂ ಆಗಿದ್ದರು. ಅವರು ಪಿಡಿಒ ಆಗಿದ್ದ ವೇಳೆ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಅಮೈ ಕೆರೆ ಅಭಿವೃದ್ಧಿ, ದೇವರಗುಡ್ಡೆಗೆ ಮೆಟ್ಟಿಲು ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ನಡೆದಿದೆ. ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರವೂ ಬಂದಿತ್ತು. ನಿವೃತ್ತ ಪಿಡಿಒ ಜೆರಾಲ್ಡ್ ಮಸ್ಕರೇನಸ್ ಅವರು, ಪಂಚಾಯತ್‌ರಾಜ್ ವ್ಯವಸ್ಥೆ ಬಗ್ಗೆ ಹೆಚ್ಚಿನ ತಿಳುವಳಿಕೆ ಇದ್ದವರಾಗಿದ್ದರು. 8 ಗಂಟೆಗೇ ಕಚೇರಿಗೆ ಬಂದು ಹಿಂದಿನ ದಿನ ಬಾಕಿ ಆಗಿದ್ದ ಕೆಲಸ ನಿರ್ವಹಿಸುತ್ತಿದ್ದರು. ಈ ರೀತಿಯ ಅವರ ಸೇವೆಯಿಂದ ಗ್ರಾಮ ಅಭಿವೃದ್ಧಿಯಾಗಿದೆ. ಮುಂದೆಯೂ ಅವರು ಸಲಹೆ ಸೂಚನೆ ನೀಡುತ್ತಿರಬೇಕು ಎಂದು ಹೇಳಿದ ಅವರು, ಅಧಿಕಾರಿ ವರ್ಗ ಹಾಗೂ ಆಡಳಿತ ಮಂಡಳಿ ಸದಸ್ಯರ ನಡುವೆ ಸ್ನೇಹ ಸಂಬಂಧವಿದ್ದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂಬುದಕ್ಕೆ ರಾಮಕುಂಜ ಗ್ರಾ.ಪಂ.ನಿದರ್ಶನವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಪಿಡಿಒ ಜೆರಾಲ್ಡ್ ಮಸ್ಕರೇನ್ಹಸ್‌ರವರು ಮಾತನಾಡಿ, ಸರಕಾರಿ ಸೇವೆಗೆ ದೇವರ ಅನುಗ್ರಹ ಹಾಗೂ ಮನೆಯವರ ಸಹಕಾರ ದೊರೆತಿದೆ. ಪಂಚಾಯತ್‌ನೊಳಗೆ ಆಡಳಿತ ಮಂಡಳಿ ಸದಸ್ಯರು ಒಂದೇ ಮನೆಯವರಂತೆ ಇದ್ದುದ್ದರಿಂದ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿವರ್ಷವೂ ಇಲ್ಲಿ 40 ರಿಂದ 50 ಲಕ್ಷ ರೂ. ತನಕ ಕಾಮಗಾರಿ ನಡೆದಿದೆ. ಇವೆಲ್ಲವೂ ಗ್ರಾಮಸ್ಥರ ಸಹಕಾರದಿಂದಲೇ ಆಗಿದೆ. ಯಾವುದೇ ಅನಾವಶ್ಯಕ ಚರ್ಚೆಗಳಿಗೆ ಆಸ್ಪದ ನೀಡದೇ ಇರುವುದರಿಂದ ರಾಮಕುಂಜವು ಮಾದರಿ ಗ್ರಾಮ ಪಂಚಾಯತ್ ಆಗಿ ಗುರುತಿಸಿಕೊಂಡಿದೆ ಎಂದರು.

ನರಿಮೊಗರು ಗ್ರಾ.ಪಂ.ಪಿಡಿಒ ರವಿಚಂದ್ರ ಯು.ಅವರು ಮಾತನಾಡಿ, ಪಿಡಿಒ ಆಗಿ ಆರಂಭದ 8 ವರ್ಷ ರಾಮಕುಂಜದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿತ್ತು. ಉದ್ಯೋಗ ಖಾತ್ರಿ ಯೋಜನೆಯೂ ಇಲ್ಲಿನ ಜನರೊಂದಿಗೆ ಬೆರೆತು ಕೆಲಸ ಮಾಡಲು ಅವಕಾಶ ಒದಗಿಸಿತ್ತು. ಜನರ ವಿಶ್ವಾಸಗಳಿಸಿದಲ್ಲಿ ಅದು ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ಇಲ್ಲಿಂದಲ್ಲೇ ಕಲಿತಿದ್ದೇನೆ. ಇಲ್ಲಿನ ಜನತೆ ಈಗಾಲೂ ನನ್ನೊಂದಿಗೆ ನಂಟು, ಬಾಂಧವ್ಯ ಹೊಂದಿದ್ದಾರೆ. ಇಲ್ಲಿನ ಸೇವೆಯನ್ನೇ ಆದರ್ಶವಾಗಿಟ್ಟುಕೊಂಡಿದ್ದೇನೆ ಎಂದರು. ಸನ್ಮಾನ ಸ್ವೀಕರಿಸಿದ ಡಾ.ವೆಂಕಟೇಶ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು.

ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಆತೂರು, ಗ್ರಾ.ಪಂ.ಸದಸ್ಯ ಯತೀಶ್ ಬಾನಡ್ಕ, ಪಿಡಿಒ ಲಲಿತಾ, ಆಶಾಕಾರ್ಯಕರ್ತೆ ಪ್ರೇಮಾತಾರನಾಥ, ಗ್ರಾ.ಪಂ.ಸಿಬ್ಬಂದಿ ದುರ್ಗಾಪ್ರಸಾದ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಗ್ರಾ.ಪಂ.ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸ್ಥಳೀಯ ಶಾಲೆಗಳ ಶಿಕ್ಷಕರು, ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪಿಡಿಒ ಲಲಿತಾ ಸ್ವಾಗತಿಸಿದರು. ಸಿಬ್ಬಂದಿ ನಾರಾಯಣ ಸಾಂತ್ಯ ವಂದಿಸಿದರು. ಸಿಬ್ಬಂದಿ ದುರ್ಗಾಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಮಾಧವ, ವನಿತಾ, ದೀಕ್ಷಿತಾ ಸಹಕರಿಸಿದರು.

ಗೌರವಾರ್ಪಣೆ:
ಗ್ರಾ.ಪಂ.ವತಿಯಿಂದ ನಿವೃತ್ತ ಪಿಡಿಒ ಜೆರಾಲ್ಡ್ ಮಸ್ಕರೇನಸ್, ನಿವೃತ್ತ ಉಪನಿರ್ದೇಶಕ ಡಾ.ವೆಂಕಟೇಶ್ ಹಾಗೂ ಈ ಹಿಂದೆ ರಾಮಕುಂಜ ಗ್ರಾ.ಪಂ.ನಲ್ಲಿ 8 ವರ್ಷ ಸೇವೆ ಸಲ್ಲಿಸಿ ನರಿಮೊಗರು ಗ್ರಾ.ಪಂ.ಗೆ ವರ್ಗಾವಣೆಗೊಂಡಿರುವ ರವಿಚಂದ್ರ ಯು ರವರಿಗೆ ಶಾಲು, ಹಾರಾರ್ಪಣೆ, ಸ್ಮರಣಿಕೆ, ಫಲತಾಂಬೂಲ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಹಾಲಿ ಪಿಡಿಒ ಲಲಿತಾ ಅವರಿಗೂ ಫಲತಾಂಬೂಲ ನೀಡಿ ಗೌರವಿಸಲಾಯಿತು. ಪಿಡಿಒ ಜೆರಾಲ್ಡ್ ಹಾಗೂ ರವಿಚಂದ್ರ ಯು.ಅವರಿಗೆ ಆಶಾ ಕಾರ್ಯಕರ್ತೆಯರು ಗಿಡ ನೀಡಿ ಶುಭಹಾರೈಸಿದರು. ಅಂಗನವಾಡಿ ಕಾರ್ಯಕರ್ತೆಯರೂ ಹೂವು ನೀಡಿ, ಶಿಕ್ಷಣ ಇಲಾಖೆ ಪರವಾಗಿ ಸ್ಥಳೀಯ ಶಾಲೆಯ ಶಿಕ್ಷಕರು ಪುಸ್ತಕ ನೀಡಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here