ಮಂಗಳೂರು: ಅಶ್ವಿನ್ ಹಾಸನ್ ಕನ್ನಡ ಚಿತ್ರರಂಗ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ಐಟಿ ಉದ್ಯೋಗಿಯಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು 2014 ರಲ್ಲಿ ಉದ್ಯೋಗ ತೊರೆದು ಪೂರ್ಣ ಪ್ರಮಾಣದ ನಟನೆಗೆ ಇಳಿದರು.
ಹಾಸನದ ಹಳ್ಳಿಯೊಂದರಲ್ಲಿ ಹುಟ್ಟಿ, ವೃತ್ತಿಯಲ್ಲಿ ಇಂಜಿನಿಯರ್ ಆಗಿ ಪ್ರವೃತ್ತಿಯಲ್ಲಿ ನಟನೆಯನ್ನು ಮೆಚ್ಚಿ ಇಂದು ಫುಲ್ ಟೈಮ್ ಕಲಾವಿದನಾಗಿ ಅಭಿನಯದ ಮೂಲಕ ಸೈ ಎನಿಸಿಕೊಂಡ ಅಪ್ಪಟ ಕನ್ನಡಿಗ ಅಶ್ವಿನ್ ಹಾಸನ್. 2005 ರಿಂದ ಡಾ. ಬಿ.ವಿ.ರಾಜಾರಾಮ್ ನೇತೃತ್ವದ `ಕಲಾಗಂಗೋತ್ರಿ’ ತಂಡದಲ್ಲಿ ಹಲವಾರು ನಾಟಕ ಪ್ರದರ್ಶನ ನೀಡಿದ ಇವರು ರಂಗಭೂಮಿ ಕಲಾವಿರೂ ಹೌದು. ನಂತರ ಕಿರುತೆರೆಗೆ ಬಂದ ಇವರು ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕಿರುತರೆಯಲ್ಲಿ ನಟನೆ ಮಾತ್ರವಲ್ಲದೇ ಧಾರಾವಹಿಗಳ ಸಂಭಾಷಣೆ ಬರೆಯುವಲ್ಲಿಯೂ ನಿರತರಾಗಿದ್ದವರು ಅಶ್ವಿನ್ ಹಾಸನ್.
ಸುಮಾರು 75 ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮತ್ತು ನಾಯಕ ನಟನಾಗಿ ನಟಿಸಿರುವ ಇವರು ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸೂಪರ್ ಹಿಟ್ ಮೂವಿಗಳಾದ ಜಗ್ಗುದಾದಾ, ಹೆಬ್ಬುಲಿ, ರಾಜಕುಮಾರ, ಪಯಣಿಗರು, ಗಜಾನನ & ಗ್ಯಾಂಗ್, ಹೋಪ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರಿಯರ ಮನ ಗೆದ್ದವರು. ಡಾ. ವಿಷ್ಣು ವರ್ಧನ ರಾಷ್ಟ್ರಿಯ ಉತ್ಸವದಲ್ಲಿ ನಡೆದ ಕಿರುಚಿತ್ರೋತ್ಸವದಲ್ಲಿ ವರ್ಜಿನ್ ಕಿರು ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ಇದೀಗ ದಿವಾಕರ್ ದಾಸ್ ನೇರ್ಲಾಜೆ ನಿರ್ಮಾಣದ ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ಮೂಡಿಬಂದ ವಿನು ಬಳಂಜ ನಿರ್ದೇಶನದ ʼಬೇರʼ ಸಿನಿಮಾದಲ್ಲಿ ಅಶ್ವಿನ್ ಹಾಸನ್ ರವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದು ಈಗಾಗಲೇ ಭರ್ಜರಿ ಹವಾ ಸೃಷ್ಟಿಸಿರುವ ʼಬೇರʼ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಕುರಿತು ಸಿನಿ ಪ್ರಿಯರು ಭಾರೀ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಬೇರ ಸಿನಿಮಾದಲ್ಲಿ ಅಶ್ವಿನ್ ಹಾಸನ್ ನಟಿಸಿದ್ದು ಸಿನಿ ಪ್ರಿಯರಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿದೆ. ವಿಭಿನ್ನ ಕಥೆಯನ್ನು ಒಳಗೊಂಡ ಬೇರ ಸಿನಿಮಾ ಜೂ. 16 ರಂದು ತೆರೆ ಕಾಣಲು ಸಿದ್ದವಾಗಿದೆ.