ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯಮಟ್ಟದ ಐಟಿ -ಫೆಸ್ಟ್ `ಪಿನ್ಯಾಕಲ್-2023′

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್ ಐಟಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ವಾರ್ಷಿಕ ಐಟಿ -ಫೆಸ್ಟ್ ಪಿನ್ಯಾಕಲ್ 2023’ನ್ನು ಆಯೋಜಿಸಲಾಯಿತು.

ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ಬೆಂಗಳೂರಿನ ಐಬಿಎಂ ಕಂಪನಿಯಲ್ಲಿ ಸೀನಿಯರ್ ಡೆವಲಪರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿವಯ್ಯ ಕೆ.ಪಿ.ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕಾಲೇಜು ಜೀವನವು ಒಬ್ಬ ವಿದ್ಯಾರ್ಥಿಯ ಬದುಕನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ನಮಗೆ ದೊರೆತ ಒಂದು ಪುಟ್ಟ ಅವಕಾಶವನ್ನೂ ಬಿಡದೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಲ್ಲಿ ನಮ್ಮಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸಗಳು ಬಲಗೊಳ್ಳುತ್ತವೆ. ಸಮಯ ಹಾಗೂ ಅವಕಾಶಗಳ ಸದ್ಬಳಕೆಯೇ ಜೀವನದ ಯಶಸ್ಸಿನ ಮೂಲಮಂತ್ರ’ ಎಂದು ಹೇಳಿದರು.


ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ ಪ್ರಾಂಶುಪಾಲರಾದ ವಂ|ಡಾ| ಆಂಟೊನಿ ಪ್ರಕಾಶ್ ಮೊಂತೆರೋರವರು `ಯುವಜನರಲ್ಲಿ ಬಹಳಷ್ಟು ಸಾಮರ್ಥ್ಯವಿದೆ. ಆದರೆ ಇಂದಿನ ಕಾಲಘಟ್ಟದಲ್ಲಿ ಅವರಲ್ಲಿ ತಾಳ್ಮೆ ಕಡಿಮೆಯಾಗಿ ಅಸಹಿಷ್ಣುತೆ ಜಾಸ್ತಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೌಲ್ಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ಅತಿ ವಂ| ಲಾರೆನ್ಸ್ ಮಸ್ಕರೇಞಸ್‌ರವರು “ಸ್ಪರ್ಧೆಗಳನ್ನು ಆಯೋಜಿಸಿದಾಗ ವಿದ್ಯಾರ್ಥಿಗಳ ಸಂಘಟನಾ ಸಾಮರ್ಥ್ಯ, ನಾಯಕತ್ವ ಗುಣ ಸಂವಹನಾ ಕಲೆ ಹಾಗೂ ಆತ್ಮ ವಿಶ್ವಾಸ ವೃದ್ಧಿಯಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು” ಎಂದು ಹೇಳಿದರು.


2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಬಿಸಿಎ ಪದವಿ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಪಡೆದ ಫಾತಿಮತ್ ಸಾನಿದ ಹಾಗೂ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ತೃತೀಯ ಬಿಸಿಎ ವಿದ್ಯಾರ್ಥಿನಿ ವಿದುಷಿ ಅನುಶ್ರೀಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ದಿಶಾ ಮತ್ತು ಬಳಗ ಪ್ರಾರ್ಥಿಸಿದರು. ಫೆಸ್ಟ್‌ನ ವಿದ್ಯಾರ್ಥಿ ಸಂಯೋಜಕರಾದ ಜೋನ್ ವಿಸ್ಟನ್ ಟೈಟಸ್ ಡಯಾಸ್ ಸ್ವಾಗತಿಸಿ ವೀಕ್ಷಾ ಎ ವಂದಿಸಿದರು. ಬೃಂದಾ ಬಿ ಜಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕರಾದ ಗೀತಾ ಪೂರ್ಣಿಮಾ ಮತ್ತು ರಾಜೇಶ್ವರಿ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ವಿಭಾಗ ಮುಖ್ಯಸ್ಥ, ಕಾರ್ಯಕ್ರಮದ ಸಂಚಾಲಕರೂ ಆದ ವಿನಯಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಫೆಸ್ಟ್‌ನ ಮುಖ್ಯಾಂಶಗಳು:
ಫೆಸ್ಟ್‌ನಲ್ಲಿ ಪ್ರೊಡಕ್ಟ್ ಲಾಂಚ್, ಐಟಿ ಕ್ವಿಜ್, ಐಟಿ ಮ್ಯಾನೇಜರ್, ಕೋಡಿಂಗ್, ವೆಬ್ ಡಿಜೈನ್, -ಟೋಗ್ರಫಿ, ಪೇಪರ್ ಪ್ರೆಸೆಂಟೇಶನ್, ಸರ್‌ಪ್ರೈಜ್ ಇವೆಂಟ್, ಗೇಮಿಂಗ್ ಹಾಗೂ ಗ್ರೂಪ್ ಡಾನ್ಸ್ ಹೀಗೆ 10 ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಬಳ್ಳಾರಿಯ ಶ್ರೀಮೇಧಾ ಕಾಲೇಜ್ ತಂಡ ಸೇರಿ ಒಟ್ಟು 17 ತಂಡಗಳು ಭಾಗವಹಿಸಿದ್ದವು. ಬಹುತೇಕ ಸ್ಪರ್ಧೆಗಳಿಗೆ ಗಣಕ ವಿಜ್ಞಾನ ವಿಭಾಗದ ಹಿರಿಯ ವಿದ್ಯಾರ್ಥಿಗಳೇ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಮಾತ್ರವಲ್ಲದೆ ವಿಭಾಗದ ಬಹಳಷ್ಟು ಹಿರಿಯ ವಿದ್ಯಾರ್ಥಿಗಳು ಪ್ರಾರಂಭದಿಂದ ಕೊನೆಯವರೆಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.


ಸಮಾರೋಪ ಸಮಾರಂಭ:
ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ| ಗಣೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಬೆಂಗಳೂರಿನ ಟಿಸಿಎಸ್ ಸಂಸ್ಥೆಯಲ್ಲಿ ಡೇಟಾ ಅನಲಿಸ್ಟ್ ಆಗಿರುವ ಗ್ಯಾವಿನ್ ಕ್ರಿಸ್ ಮಸ್ಕರೇಞಸ್ ಹಾಗೂ ಐಬಿಎಂ ನಲ್ಲಿ ಸಾಪ್ಟ್ ವೇರ್ ಟೆಸ್ಟರ್ ಆಗಿರುವ ಶೆರ್ಮನ್ ಬ್ಯಾಪ್ಟಿಸ್ಟ್ ರಾಡ್ರಿಗಸ್ ಅತಿಥಿಗಳಾಗಿ ಭಾಗವಹಿಸಿದರು. ಫೆಸ್ಟ್‌ನ ವಿದ್ಯಾರ್ಥಿ ಸಂಯೋಜಕರಾದ ಹೃದಯ್ ಎಸ್ ನಾಯ್ಕ್ ಸ್ವಾಗತಿಸಿದರು, ದ್ವಿತೀಯ ಬಿಸಿಎ ವಿದ್ಯಾರ್ಥಿ ಅಭಿಷೇಕ್ ಕಾಮತ್ ವಂದಿಸಿದರು. ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ವಿನಯಚಂದ್ರ ಸ್ಪರ್ಧೆಗಳ ವಿಜೇತರ ಹೆಸರನ್ನು ವಾಚಿಸಿದರು. ಮಂಗಳೂರಿನ ಬಳ್ಳಾರಿಯ ಶ್ರೀ ಮೇಧಾ ಕಾಲೇಜಿಗೆ ಫೆರ್ ಪ್ಲೇ ಪ್ರಶಸ್ತಿಯನ್ನು ನೀಡಲಾಯಿತು. ಎಸ್ ಡಿ ಯಂ ಕಾಲೇಜ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ತಂಡಕ್ಕೆ ರನ್ನರ್ಸ್ ಅಪ್ ಪ್ರಶಸ್ತಿ ದೊರಕಿತು. ಉಜಿರೆಯ ಎಸ್ ಡಿ ಯಂ ಕಾಲೇಜಿನ ವಿದ್ಯಾರ್ಥಿಗಳ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿತು.

LEAVE A REPLY

Please enter your comment!
Please enter your name here