ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಧವಿಲ್ಲ- ಉಪ್ಪಿನಂಗಡಿಯಲ್ಲಿ ಅಭಿನಂದನೆ ಸ್ವೀಕರಿಸಿ ಅಶೋಕ್ ಕುಮಾರ್ ರೈ

0

ಉಪ್ಪಿನಂಗಡಿ: ಅಭಿವೃದ್ಧಿಯ ವಿಚಾರವಾಗಿ ಯಾವುದೇ ರಾಜಕೀಯ ಬೇಧ ಮಾಡುವುದಿಲ್ಲ. `ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು’ ಎಂಬ ಕಾಂಗ್ರೆಸ್‌ನ ಸಿದ್ಧಾಂತದಡಿ ಮುನ್ನಡೆಯುತ್ತೇನೆ. ಶಾಸಕನಾಗಿ ಆಯ್ಕೆಯಾದ 29 ದಿನಗಳಲ್ಲಿ ಎಲ್ಲಾ ಸರಕಾರಿ ಇಲಾಖೆಗಳಿಗೂ ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದೇನೆ. ಯಾವುದೇ ಅಧಿಕಾರಿಗಳಲ್ಲಿ ನನಗೆ ದ್ವೇಷವಿಲ್ಲ. ಉತ್ತಮ ಕೆಲಸ ಮಾಡುವವರಿಗೆ ಸಂಪೂರ್ಣ ಸಹಕಾರ ಇದೆ. ಆದರೆ ಕಚೇರಿಗೆ ಬರುವ ಜನ ಸಾಮಾನ್ಯರನ್ನು ಸುಮ್ಮನೇ ಅಲೆದಾಡಿಸಿದರೆ, ಭ್ರಷ್ಟಾಚಾರ ಮಾಡಿದ್ರೆ ಅಂತಹ ಅಧಿಕಾರಿಗಳನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಜೂ.10ರಂದು ನಡೆದ ಶಾಸಕರಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಸಾರ್ವಜನಿಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲರೂ ಒಗ್ಗೂಡಿ ಮಾಡುವ ಸಂಘಟನೆಯೇ ಪಕ್ಷ. ಎಲ್ಲರೂ ಪರಸ್ಪರ ಕೈಜೋಡಿಸಿ ಸಹಕಾರ ನೀಡಿದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯ. ನನ್ನ ಹಾಗೂ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರಾದ ಬಿಸಿಲಲ್ಲಿ ದುಡಿದಿದ್ದೀರಿ. ದಣಿದಿದ್ದೀರಿ. ನಿಮಗೆ ಹೇಗೆ ಕೃತಜ್ಞತೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಆದರೆ ಹೃದಯದಲ್ಲಿ ಜಾಗ, ಹೃದಯದ ಪ್ರೀತಿ ನೀಡುತ್ತೇನೆ. ಸರಕಾರದ ಸೌಲಭ್ಯಗಳನ್ನು ಅರ್ಹರ ಮನೆಗೆ ತಲುಪಿಸುವ, ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಕಾರ್ಯಕರ್ತರಿಂದ ಆಗಬೇಕು. ನನ್ನ ಸಮಯವನ್ನು ಸಂಪೂರ್ಣ ಈ ಕ್ಷೇತ್ರದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇನೆ. ಬಿಜೆಪಿಯಂತೆ ಧರ್ಮಾಧಾರಿತ ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಪಕ್ಷ ಬೇಧ, ಧರ್ಮ ಬೇಧ ನನಗಿಲ್ಲ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಚಿಂತನೆ ನನ್ನದು. ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗಳಾಗಬೇಕು. ಅಭಿವೃದ್ಧಿಯೊಂದಿಗೆ ಪಕ್ಷವನ್ನು ಬೆಳೆಸುವ ಕಾರ್ಯ ಮಾಡೋಣ ಎಂದರು.


ಪುತ್ತೂರು ತಾಲೂಕಿನಲ್ಲಿ 3 ಸಾವಿರದಷ್ಟು ಅಕ್ರಮ- ಸಕ್ರಮ ಕಡತಗಳು ಪೆಂಡಿಂಗ್ ಇದೆ. ನಾನು ಶಾಸಕನಾಗಿ ಆಯ್ಕೆಯಾದ ದಿನದಿಂದಲೇ ವಲಯ, ಬೂತ್ ಅಧ್ಯಕ್ಷರಲ್ಲಿ ಹೇಳುತ್ತಿದ್ದೇನೆ. ನಿಮ್ಮ ಊರಿನ, ಊರಿನ ಜನರ ಸಮಸ್ಯೆಗಳ ಪಟ್ಟಿಯನ್ನು ನನಗೆ ತಲುಪಿಸಿ. ಒಂದು ರೂಪಾಯಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ಅಕ್ರಮ- ಸಕ್ರಮ, 94ಸಿ ಮುಂತಾದ ಫೈಲ್‌ಗಳನ್ನು ಕ್ಲಿಯರ್ ಮಾಡಿಕೊಡುತ್ತೇನೆ. ಆದರೆ 29 ದಿನದಲ್ಲಿ ನನಲ್ಲಿಗೆ ಬಂದಿದ್ದು 34 ಅಕ್ರಮ- ಸಕ್ರಮ ಫೈಲ್‌ಗಳ ಪಟ್ಟಿ ಮಾತ್ರ ಎಂದು ತಿಳಿಸಿದ ಅವರು, ಒಬ್ಬನಿಂದ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಎಲ್ಲರ ಸಹಕಾರವಿದ್ದಾಗ ಮಾತ್ರ ಉತ್ತಮ ಅಭಿವೃದ್ದಿ ಮಾಡಲು ಸಾಧ್ಯ. ನಿಮ್ಮೂರಿನ ಸಮಸ್ಯೆಗಳನ್ನು, ಅಭಿವೃದ್ಧಿ ಬೇಡಿಕೆಗಳನ್ನು ಲಿಖಿತವಾಗಿ ನನಗೆ ತಲುಪಿಸಿ. ಅದಕ್ಕೆ ಪರಿಹಾರ ನೀಡುವ ಕಾರ್ಯ ಶಾಸಕನಾಗಿ ನಾನು ಮಾಡುತ್ತೇನೆ. ಸರಕಾರಿ ಇಲಾಖೆಗಳಲ್ಲಿ ಜನಸಾಮಾನ್ಯರನ್ನು ಅಧಿಕಾರಿಗಳು ಸುಮ್ಮನೆ ಅಲೆದಾಡಿಸುತ್ತಿದ್ದರೆ, ದಾಖಲೆ ಸಹಿತ ನನ್ನ ಗಮನಕ್ಕೆ ತನ್ನಿ. ನಿಮ್ಮೊಂದಿಗೆ ನಾನೇ ಖುದ್ದಾಗಿ ಬಂದು ನಿಮಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ. ಕಾಂಗ್ರೆಸ್ ಸರಕಾರ ಹಾಗೂ ಮತ್ತು ನಾನು ಸರಕಾರಿ ಅಧಿಕಾರಿಗಳಲ್ಲಿ ಉತ್ತಮ ಕೆಲಸವನ್ನು ಬಿಟ್ಟರೆ ಬೇರೇನನ್ನೂ ಬಯಸೋದಿಲ್ಲ. ಈಗಾಗಲೇ ನಾನು ಮೆಡಿಕಲ್ ಕಾಲೇಜ್, ಮಾಣಿ- ಪುತ್ತೂರು ಚತುಷ್ಪಥ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತನಾಡಿದ್ದೇನೆ. ಉತ್ತಮ ಅಭಿವೃದ್ಧಿಯೊಂದಿಗೆ ನಾವೆಲ್ಲಾ ಜೊತೆಯಾಗಿ ಪಕ್ಷ ಕಟ್ಟೋಣ. ಎಲ್ಲರ ಮನಸ್ಸುಗಳನ್ನು ಪ್ರೀತಿಯಿಂದ ಗೆಲ್ಲೋಣ ಎಂದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ, ಬಿಜೆಪಿಯ ಧರ್ಮಾಧಾರಿತ ಸಿದ್ಧಾಂತದಲ್ಲಿ ಬದುಕಿದ್ರೆ ಭಾರತ ಛಿದ್ರವಾಗಲಿದ್ದು, ಕಾಂಗ್ರೆಸ್‌ನ ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು ಸಿದ್ಧಾಂತದಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಪುತ್ತೂರಿಗೆ ಕಾಂಗ್ರೆಸ್ ಶಾಸಕರಿಲ್ಲ ಅನ್ನುವ ಕೊರಗನ್ನು ಈ ಅಶೋಕ್ ಕುಮಾರ್ ರೈಯವರು ನೀಗಿಸಿದ್ದು, ಮುಂದಿನ 25 ವರ್ಷದ ವರೆಗೂ ಕಾಂಗ್ರೆಸ್ ಅನ್ನು ಅಲುಗಾಡಿಸಲು ಆಗದಂತೆ ನಾವು ಕೆಲಸ ಮಾಡಬೇಕು ಎಂದರು.


ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪಕ್ಷ ಸಂಘಟನೆ ಮಾಡುವುದು ಅತೀ ಮುಖ್ಯವಾಗಿದ್ದು, 10 ಕೆಲಸಗಳಲ್ಲಿ ಒಂದು ಆಗದಿದ್ದರೆ ಅದರ ಬಗ್ಗೆ ಮಾತ್ರ ಋಣಾತ್ಮಕವಾಗಿ ಮಾತನಾಡದೇ ಆದ 9 ಕೆಲಸಗಳ ಬಗ್ಗೆ ಧನಾತ್ಮಕವಾಗಿ ಮಾತನಾಡುವ, ಅದರ ಬಗ್ಗೆ ಪ್ರಚಾರ ಮಾಡುವ ಕಾರ್ಯ ನಮ್ಮಿಂದಾಗಬೇಕು ಎಂದರು.


ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಮುಹಮ್ಮದ್ ಮಾತನಾಡಿ, ನಾವೆಲ್ಲಾ ನಮ್ಮ ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಶಾಸಕರೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಶ್ರಮಿಸೋಣ. ಸರಕಾರಿ ಸವಲತ್ತುಗಳನ್ನು ಅರ್ಹರಿಗೆ ಮುಟ್ಟಿಸುವ ಕೆಲಸ ಮಾಡೋಣ ಎಂದರು.


ಜಿ.ಪಂ. ಮಾಜಿ ಸದಸ್ಯ ಶಾಹುಲ್ ಹಮೀದ್ ಮಾತನಾಡಿ, ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಗೆಲ್ಲದಿದ್ರೂ, ಉತ್ತಮ ಪೈಪೋಟಿಯನ್ನು ನೀಡಿದೆ. ನಮಗೆ ಕಾಂಗ್ರೆಸ್‌ನ ಶಾಸಕರಿಲ್ಲ ಅನ್ನೋದನ್ನು ಅಶೋಕ್ ಕುಮಾರ್ ರೈಯವರು ನೀಡಿದ್ದಾರೆ. ನೀವು ಪುತ್ತೂರಿಗೆ ಅಲ್ಲ. ಬೆಳ್ತಂಗಡಿಗೂ ಶಾಸಕನಂತೆ ಇರಬೇಕು ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ., ಬಿಜೆಪಿಯ ಆಡಳಿತದ ಅವಧಿಯಲ್ಲಿ ಲಂಚ ನೀಡಿದರೆ ಮಾತ್ರ 94ಸಿ, ಅಕ್ರಮ- ಸಕ್ರಮಗಳು ಆಗುತ್ತಿತ್ತು. ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ 25 ವರ್ಷಗಳಿಂದ ನಿವೇಶನ ಒದಗಿಸುವ ಕಾರ್ಯವೂ ಆಗಿಲ್ಲ. ತಾರತಮ್ಯ ನೀತಿಯಿಂದಾಗಿ ಆಗಿನ ಸವಲತ್ತುಗಳು ಕೆಲವರಿಗೆ ಮಾತ್ರ ಸೀಮಿತವಾಗಿದ್ದು ಬಿಟ್ಟರೆ, ಉಳಿದವರ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿತ್ತು. ಆದರೆ ಈಗ ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಸರಕಾರ ಇದ್ದು, ಎಲ್ಲಾ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಮೂಲಕ, ಪಕ್ಷದ ಜಾತ್ಯಾತೀತ ಸಿದ್ಧಾಂತದ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ಗ್ರಾ.ಪಂ., ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ ತರಬೇಕೆಂದು ತಿಳಿಸಿದರು.


ವೇದಿಕೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಸ್ಮಾನ್ ಬಂಟ್ವಾಳ, ಕೆಪಿಸಿಸಿ ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು, ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಉಪ್ಪಿನಂಗಡಿ ಮಾಲೀಕುದ್ದೀನಾರ್ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ, ಕಾಂಗ್ರೆಸ್ ಮುಖಂಡರಾದ ಉಲ್ಲಾಸ್ ಕೋಟ್ಯಾನ್, ನೂರುದ್ದೀನ್ ಸಾಲ್ಮರ್, ಜೋಕಿಂ ಡಿಸೋಜಾ, ಪ್ರಸಾದ್ ಕೌಶಲ್ ಶೆಟ್ಟಿ, ವೇದನಾಥ ಸುವರ್ಣ, ಸಿದ್ದೀಕ್ ಕೆಂಪಿ, ಅಸ್ಮಾ ಘಟ್ಟಮನೆ, ಕುಮಾರಿ ಬೇಬಿ, ಶಾರದಾ ಅರಸು, ದುರ್ಗಾ ಪ್ರಸಾದ ರೈ ಕುಂಬ್ರ, ನೂರುದೀನ್ ಸಾಲ್ಮರ, ಜಯಪ್ರಕಾಶ್ ಬದಿನಾರು, ಮಹೇಶ್ ಅಂಕೊತ್ತಿಮಾರ್, ಶ್ರೀನಿವಾಸ ಶೆಟ್ಟಿ ಕೊಲ, ಮುಹಮ್ಮದ್ ಕೊಪ್ಪಳ, ಕೃಷ್ಣರಾವ್ ಆರ್ತಿಲ, ಅಯೂಬ್ ಕೂಟೇಲು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೩೪ ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್, ಹಿರೇಬಂಡಾಡಿ ಕಾಂಗ್ರೆಸ್ ವಲಯಾಧ್ಯಕ್ಷ ರವಿ ಪಟಾರ್ತಿ, ಅಶ್ರಫ್ ಬಸ್ತಿಕ್ಕಾರ್, ಯೂಸುಫ್ ಪೆದಮಲೆ, ಅಝೀಝ್ ಬಸ್ತಿಕ್ಕಾರ್, ಯೊಗೀಶ್ ಸಾಮಾನಿ, ವಿದ್ಯಾಗೌರಿ, ಸತೀಶ್ ಶೆಟ್ಟಿ ಹೆನ್ನಾಳ, ಸೇಸಪ್ಪ ನೆಕ್ಕಿಲು, ಗೀತಾ ದಾಸರಮೂಲೆ, ಅನಿತಾ ಕೇಶವ ಗೌಡ, ಸವಿತಾ ಹರೀಶ್, ನಝೀರ್ ಬೆದ್ರೋಡಿ, ಕಲಂದರ್ ಶಾಫಿ ಮತ್ತಿತರರು ಉಪಸ್ಥಿತರಿದ್ದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಸ್ವಾಗತಿಸಿದರು. ನಝೀರ್ ಮಠ ವಂದಿಸಿದರು. ಜಗನ್ನಾಥ ಶೆಟ್ಟಿ ಕೋಡಿಂಬಾಡಿ ಕಾರ್ಯಕ್ರಮ ನಿರೂಪಿಸಿದರು. ಯು.ಟಿ. ತೌಸೀಫ್, ಶಬೀರ್ ಕೆಂಪಿ, ಆಚಿ ಕೆಂಪಿ ಸಹಕರಿಸಿದರು.

ಕಂದಾಯ, ಆರೋಗ್ಯ ಇಲಾಖೆಗೆ ಪ್ರತ್ಯೇಕ ಪಿಎ
ನಿಮ್ಮ ಕಷ್ಟ- ಸುಖಗಳಿಗೆ ಶಾಸಕನಾಗಿ ನಾನು ಸದಾ ಸ್ಪಂದಿಸುತ್ತಾ ಇರುತ್ತೇನೆ. ಆದರೆ ಕೆಲವೊಮ್ಮೆ ಕಾರ್ಯದೊತ್ತಡದಿಂದ ಎಲ್ಲರ ದೂರವಾಣಿ ಕರೆಗೆ ಉತ್ತರಿಸಲು ಸಾಧ್ಯವಾಗದಿರಬಹುದು. ಆಗ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರು ಸಿಕ್ಕಿಲ್ಲ ಎಂಬ ಭಾವನೆ ನಿಮ್ಮಲ್ಲಿ ಬೇಡ. ಜನರಿಗೆ ಅತೀ ಹೆಚ್ಚು ಸಮಸ್ಯೆಗಳಿರುವ ಕಂದಾಯ ಹಾಗೂ ಆರೋಗ್ಯ ಇಲಾಖೆಯ ಸಮಸ್ಯೆಗಳನ್ನು ಆಲಿಸಲೆಂದೇ ನನ್ನ ಕಡೆಯಿಂದ ಇಬ್ಬರು ಪ್ರತ್ಯೇಕ ಪಿಎಗಳನ್ನು ನಾನು ನೇಮಕಾತಿ ಮಾಡಿಕೊಳ್ಳುತ್ತೇನೆ. 15 ದಿನಗಳೊಳಗೆ ಈ ನೇಮಕಾತಿ ನಡೆಯಲಿದ್ದು, ಆರೋಗ್ಯ ಮತ್ತು ಕಂದಾಯ ಇಲಾಖೆಗಳಲ್ಲಿ ನಿಮಗೆ ಯಾವುದೇ ಸಮಸ್ಯೆಗಳು ಇದ್ದರೆ ಇವರಲ್ಲಿ ಹೇಳಿದರೆ ಸಾಕು. ಅದನ್ನು ಬಗೆಹರಿಸುವ ಕೆಲಸ ನಾನು ಮಾಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

LEAVE A REPLY

Please enter your comment!
Please enter your name here