ಪುತ್ತೂರು:ಚಿಕ್ಕಮುಡ್ನೂರು ಗ್ರಾಮದ ಬೀರಿಗ ಅಂಗನವಾಡಿ ಕಾರ್ಯಕರ್ತೆ ಅರುಣಾ ಬೀರಿಗ, ಇಡಬೆಟ್ಟು ರಿಕ್ಷಾ ಚಾಲಕ ಶ್ರೀಧರ ಮಣಿಯಾಣಿ, ಎಂಡೋಸಲ್ಫಾನ್ ಸಂತ್ರಸ್ತರ ಪರ ಹೋರಾಟಗಾರ ಶ್ರೀಧರ ಗೌಡ ಕೊಕ್ಕಡ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 12 ಸಾಧಕರಿಗೆ ವಿಜಯ ಕರ್ನಾಟಕ ಪತ್ರಿಕೆ ‘ವಿಕ ಹೀರೋಸ್-2023’ ಎಂಬ ಹೆಸರಿನ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ.
ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಜೂ.9ರಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಅರುಣಾ ಬೀರಿಗ: ಬೆಳ್ಳಿಪ್ಪಾಡಿ ನಿವಾಸಿ, ಚಿಕ್ಕಮುಡ್ನೂರು ಗ್ರಾಮದ ಬೀರಿಗ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅರುಣಾ ಬೀರಿಗರವರು ವೃತ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ, ಪ್ರವೃತ್ತಿಯಲ್ಲಿ ಸಮಾಜ ಸೇವಕಿಯಾಗಿ, ಸ್ವಚ್ಚತಾ ಪ್ರತಿನಿಽಯಾಗಿ ಸ್ವಸಹಾಯ ಸಂಘದ ರಚನೆ ಮಾಡಿ ನರೇಗ ಯೋಜನೆಯ ಮಾಹಿತಿದಾರೆ ಸೇರಿದಂತೆ ಹಲವು ಜನೋಪಯೋಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಶ್ರೀಧರ ಮಣಿಯಾಣಿ: ಕುರಿಯ ಇಡಬೆಟ್ಟು ನಿವಾಸಿಯಾದ ಇವರು ಅಟೋ ಚಾಲಕನಾಗಿ ಹಳ್ಳಿಯ ಜನರಿಗೆ ಆಪದ್ಭಾಂಧವನಂತೆ ಇರುವವರು. ಇಲ್ಲಿನ ಜನರಿಗೆ ಬೇಕಾದ ತರಕಾರಿ, ಔಷಧ, ಮನೆಗೆ ಬೇಕಾದ ಸಾಮನು ಕೃಷಿಗೆ ಬೇಕಾದ ಸಾಮಾನು ಮುಂತಾದವುಗಳನ್ನು ಪೇಟೆಯಿಂದ ತನ್ನ ರಿಕ್ಷಾದಲ್ಲಿ ತಂದು ಪೂರೈಕೆ ಮಾಡುವ ನಂಬಿಕೆಯ ವ್ಯಕ್ತಿ. ಇಡಬೆಟ್ಟು ರಸ್ತೆ ಸಮಿತಿ ರಚನೆ ಮಾಡಿ ರಸ್ತೆ ಅಭಿವೃದ್ಧಿಗೆ ಹೋರಾಟ ಮಾಡಿದ ಪ್ರಮುಖರಲ್ಲಿ ಇವರೂ ಓರ್ವರು.
ಶ್ರೀಧರ ಗೌಡ: ಕೊಕ್ಕಡ ನಿವಾಸಿಯಾದ ಶ್ರೀಧರ ಗೌಡರವರು ಎಂಡೋಸಲ್ಫಾನ್ ಮಾರಿಯಿಂದ ದೃಷ್ಟಿ ಕಳೆದುಕೊಂಡ ವ್ಯಕ್ತಿ. ಒಂದು ಕಣ್ಣಿನ ದೃಷ್ಟಿಯಿಂದಲೇ ವಿಧ್ಯಾಭ್ಯಾಸ ಮಾಡಿದವರು. ತನ್ನ ಊರಿನಲ್ಲಿ ಎಂಡೋಸಲ್ಫಾನ್ ಬಾಧೆಯಿಂದ ನರಕಯಾತನೆ ಅನುಭವಿಸುತ್ತಿದ್ದ ಸುಮಾರು 300ಕ್ಕೂ ಅಧಿಕ ಮಂದಿಗಾಗಿ ಹೋರಾಟಕ್ಕೆ ಧುಮುಕಿದವರು. ಕೊಕ್ಕಡ ಮಾತ್ರವಲ್ಲದೆ ದ.ಕ., ಉತ್ತರಕನ್ನಡ, ಉಡುಪಿ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ನ್ಯಾಯ ದೊರಕಿಸುವಲ್ಲಿ ಸಫಲರಾಗಿದ್ದಾರೆ. ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ, ಹೆಸರು, ಕೀರ್ತಿಗಾಗಿ ಬಯಸದೆ ಕಾಯಕ ಯೋಗಿಗಳಾಗಿ ಮುನ್ನಡೆಯುತ್ತಿರುವ ಎಲೆಮರೆಯ ಕಾಯಿಗಳನ್ನು ಗುರುತಿಸಿ ಸಮಾಜದೆದುರು ಸನ್ಮಾನಿಸುವ ವಿಕ ಹೀರೋಸ್ ಪ್ರಶಸ್ತಿ ವಿಜಯ ಕರ್ನಾಟಕದ ಅಪೂರ್ವ ಪರಿಕಲ್ಪನೆಯಾಗಿದೆ. 12 ವಿಭಾಗಗಳಲ್ಲಿ ಇದಕ್ಕಾಗಿ ಅರ್ಜಿಗಳನ್ನು ಆಮಂತ್ರಿಸಿದಾಗ ಜಿಲ್ಲೆಯ ನಾನಾ ಮೂಲೆಗಳಿಂದ ನೂರಾರು ಪ್ರವೇಶಿಕೆಗಳು ಬಂದಿದ್ದು, ತೀರ್ಪುಗಾರರ ಮಂಡಳಿ 12 ಸಾಧಕರನ್ನು ಆಯ್ಕೆ ಮಾಡಿತ್ತು.
ತೃಪ್ತಿ, ಮಾನವೀಯತೆ ಬೆಳೆಯಲಿ: ಸಂತೋಷ್ ಹೆಗ್ಡೆ: ಅಧಿಕಾರ ದಾಹ ಮತ್ತು ಶ್ರೀಮಂತಿಕೆ ಹಿಂದೆ ಸಾಗುತ್ತಿರುವ ಮನುಷ್ಯ ಮೌಲ್ಯಗಳನ್ನು ಗಾಳಿಗೆ ತೂರಿ ಬದುಕುತ್ತಿದ್ದಾನೆ. ತೃಪ್ತಿ ಮತ್ತು ಮಾನವೀಯತೆ ಎಂಬ ಪರಮೋಚ್ಚ ಮೌಲ್ಯಗಳ ಮೂಲಕ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಶಸ್ತಿ ಪ್ರದಾನ ಮಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ತಮ್ಮ ಭಾಷಣದಲ್ಲಿ ಹೇಳಿದರು.ಹಣ ಇದ್ದರೆ ಅಧಿಕಾರ ಪಡೆಯಬಹುದು, ಅಧಿಕಾರ ಇದ್ದರೆ ಹಣ ಸಂಪಾದಿಸಬಹುದು ಎಂಬ ಭಾವನೆ ತುಂಬಿದೆ. ಹೀಗಾಗಿ ಹಣ, ಅಧಿಕಾರಕ್ಕೆ ಪೈಪೋಟಿ ನಡೆಯುತ್ತಿದೆ.ಇದು ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಮಾರಕವಾಗಿದೆ. ಎಲ್ಲ ಸಮಸ್ಯೆಗಳಿಗೆ ಮನುಷ್ಯನ ಮನಸ್ಸಿನ ದುರಾಸೆಯೇ ಕಾರಣ. ಜಗತ್ತಿನಲ್ಲಿ ಎಲ್ಲ ರೋಗಕ್ಕೂ ಮದ್ದಿದೆ. ಆದರೆ ಮನುಷ್ಯನ ದುರಾಸೆಗೆ ಮದ್ದಿಲ್ಲ ಎಂದವರು ಹೇಳಿದರು. ನಮಗೆ ಅಧಿಕಾರ, ಹಣ, ಆಕಾಂಕ್ಷೆ ಎಲ್ಲವೂ ಬೇಕು. ಅದು ತಪ್ಪಲ್ಲ. ನಾವು ಕೋಟ್ಯಂತರ ರೂ. ಹಣ ಗಳಿಸಬಹುದು. ಅದೂ ತಪ್ಪಲ್ಲ. ಆದರೆ ಅದು ಕಾನೂನಿನ ಚೌಕಟ್ಟಿನಲ್ಲಿರಬೇಕು. ಮತ್ತೊಬ್ಬರ ಜೇಬಿಗೆ ಕತ್ತರಿ ಹಾಕಿ, ಇನ್ನೊಬ್ಬರ ಹೊಟ್ಟೆಗೆ ಹೊಡೆದು ಹಣ ಸಂಪಾದನೆ ಮಾಡಬಾರದು. ಈ ಮೌಲ್ಯ ಜಾಗೃತಿಯಾಗುವ ಕಾರ್ಯ ಇಂಥ ಕಾರ್ಯಕ್ರಮಗಳ ಮೂಲಕ ನಡೆಯಬೇಕು ಎಂದು ಅವರು ಹೇಳಿದರು.
ಮಂಗಳೂರು ರೋಹನ್ ಕಾರ್ಪೋರೇಶನ್ ಸ್ಥಾಪಕ ಮತ್ತು ಚೇರ್‌ಮನ್ ರೋಹನ್ ಮೊಂತೆರೋ, ಬೆಂಗಳೂರಿನ ಆರ್.ಕೆ.ಸೇಲ್ಸ್ ಕಾರ್ಪೋರೇಶನ್‌ನ ಸುನಿಲ್ ಅಗರ್‌ವಾಲ್, ಮಂಗಳೂರು ಎಕ್ಸ್‌ಪರ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಚೇರ್‌ಮನ್ ಪ್ರೊ|ನರೇಂದ್ರ ಎಲ್.ನಾಯಕ್, ಹ್ಯಾಂಗ್ಯೋ ಐಸ್‌ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರದೀಪ್ ಜಿ.ಪೈ, ಯುನಿಟಿ ಕೇರ್ ಮತ್ತು ಹೆಲ್ತ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಶ್ಪಕ್ ಮೊಯಿಯುದ್ದೀನ್, ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಜಯನಾಗರಾಜ ರಾವ್ ಎಸ್.ಮುಖ್ಯ ಅತಿಥಿಗಳಾಗಿದ್ದರು. ಅಕ್ಷರ ಸಂತ, ಪದ್ಮಶ್ರೀ ಹರೇಕಳ ಹಾಜಬ್ಬ, ಮಂಗಳೂರು ಪೊಲೀಸ್ ಕಮಿಷನರೇಟ್‌ನ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಗೌರವ ಉಪಸ್ಥಿತರಿದ್ದರು.
ವಿಕ ಹೀರೋಸ್ ಪುರಸ್ಕಾರದ ಸಾಧಕ ಶ್ರೇಷ್ಠರನ್ನು ಆರಿಸಿದ ಆಯ್ಕೆ ಮಂಡಳಿಯ ಸದಸ್ಯರಾದ ನಿವೃತ್ತ ಎಡಿಸಿ ಪ್ರಭಾಕರ ಶರ್ಮಾ, ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್, ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್ ಅವರನ್ನು ಗೌರವಿಸಲಾಯಿತು. ವಿಜಯ ಕರ್ನಾಟಕ ಪ್ರಧಾನ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಂಎಂಸಿಎಲ್ ರೆಸ್ಪಾನ್ಸ್ ವಿಭಾಗದ ಕರ್ನಾಟಕ ಹೆಡ್ ಕಾಳಿಚರಣ್ ರೈ, ರೆಸ್ಪಾನ್ಸ್ ವಿಭಾಗದ ಎಜಿಎಂ ರಾಮಕೃಷ್ಣ ಡಿ., ಆರ್‌ಎಂಡಿ ವಿಭಾಗದ ಚೀಫ್ ಮ್ಯಾನೇಜರ್ ನಾರಾಯಣ ಉಪಸ್ಥಿತರಿದ್ದರು. ವಿಜಯ ಕರ್ನಾಟಕ ಮಂಗಳೂರು ಸ್ಥಾನೀಯ ಸಂಪಾದಕ ಬಿ.ರವೀಂದ್ರ ಶೆಟ್ಟಿ ವಂದಿಸಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.