ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ದೇವಸ್ಥಾನ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಶ್ರೀ ದೇವರಿಗೆ ಅನುಜ್ಞಾ ಕಲಶವು ಜೂ.14 ರಂದು ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8.30 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣೆ,ಸ್ವಸ್ತಿ ಪುಣ್ಯಾಹ ವಾಚನ ,ಶ್ರೀ ಮಹಾಗಣಪತಿ ಹೋಮ,ಅನುಜ್ಞಾ ಕಲಶ ಪೂಜೆ, ಮಧ್ಯಾಹ್ನ 11.10ರಿಂದ ಸಿಂಹ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ದೇವರಿಗೆ ಅನುಜ್ಞಾ ಪ್ರಾರ್ಥನೆ, ಅನುಜ್ಞಾ ಕಲಶಾಭಿಷೇಕ ನಡೆಯಲಿದೆ.
ಮಧ್ಯಾಹ್ನ 12.30ರಿಂದ ಮಹಾಪೂಜೆ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುತ್ತಕ್ಕೆ ಪೂಜೆ ಸಲ್ಲುವ ತಾಲೂಕಿನ ಏಕೈಕ ಕ್ಷೇತ್ರ
ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುತ್ತಕ್ಕೆ ಆರಾಧನೆ ನಡೆಯುತ್ತದೆ.ಆದರಿಂದ ಇದು ಭಕ್ತರ ಪಾಲಿನ ಶ್ರದ್ಧೆಯ ಹಾಗೂ ಭಕ್ತಿಯ ಕ್ಷೇತ್ರವಾಗಿದೆ.ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಸೇವೆ ಪಡೆಯುವ ಏಕೈಕ ಕ್ಷೇತ್ರವಾಗಿರುವ ಇಲ್ಲಿ ಕಂಕಣ ಭಾಗ್ಯಕ್ಕಾಗಿ, ಸಂತಾನ ಭಾಗ್ಯಕ್ಕೆ ಉದ್ಯೋಗ, ಇಷ್ಟಾರ್ಥ ಸಿದ್ದಿಗೆ,ವಿದ್ಯೆಗಾಗಿ ಪೂಜೆ ಸಲ್ಲಿಸಿದರೆ ಫಲ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಇಲ್ಲಿ ಹುತ್ತದ ರೂಪದಲ್ಲಿರುವ ಸುಬ್ರಹ್ಮಣ್ಯನಿಗೆ ರಂಗಪೂಜೆ,ಹೂವಿನ ಪೂಜೆ,ರಾಹು ಜಪ,ಆಶ್ಲೇಷ ಬಲಿ,ಕುಂಕುಮಾರ್ಚಣೆ,ಕಾರ್ತಿಕ ಪೂಜೆ ನಾಗನ ಕಟ್ಟೆಯಲ್ಲಿ ನಾಗತಂಬಿಲ ಹಾಗೂ ಇತರ ಸೇವೆಗಳಾದ ಆಶ್ಲೇಷ ಬಲಿ,ಸರ್ಪ ಸಂಸ್ಕಾರ,ನವಗ್ರಹ ಶಾಂತಿ ಹೋಮ ನಡೆಯುತ್ತದೆ.ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.