ಉಪ್ಪಿನಂಗಡಿ: ಬಡತನದ ಅರಿವಲ್ಲೇ ಬೆಳೆದು, ಈಗ ಯಶಸ್ವಿ ಉದ್ಯಮಿಯಾಗಿ ಬೆಳೆದು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಎಲೆಮರೆ ಕಾಯಿಯಂತಿರುವ ಪುಳಿತ್ತಡಿಯ ನಟೇಶ್ ಪೂಜಾರಿಯವರು ಈ ಬಾರಿಯೂ ತನ್ನೂರಿನ 50 ಬಡ ವಿದ್ಯಾರ್ಥಿಗಳಿಗೆ ಈಗಾಗಲೇ ಶಾಲಾ ಬ್ಯಾಗ್‌ಗಳನ್ನು ವಿತರಿಸಿದ್ದು, ಇನ್ನು ಕೆಲವಷ್ಟು ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ನೀಡುವ ಯೋಜನೆ ಹಾಕಿಕೊಂಡಿದ್ದಾರೆ.
ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿಯ ಹೊನ್ನಪ್ಪ ಪೂಜಾರಿ ಮತ್ತು ಲೀಲಾವತಿ ದಂಪತಿಯ ಪುತ್ರರಾದ ನಟೇಶ್ ಪೂಜಾರಿಯವರು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದವರು. ಎಳವೆಯಿಂದಲೇ ಬಡತನದ ಅರಿವನ್ನು ಪಡೆದಿದ್ದ ಇವರು 21 ವರ್ಷಗಳ ಹಿಂದೆ ತನ್ನ ಶಿಕ್ಷಣವನ್ನು ಮೊಟಕುಗೊಳಿಸಿ, ಬೆಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿದರು. ಬಳಿಕ ಎಲೆಕ್ಟ್ರೀಷಿಯನ್ ಕ್ಷೇತ್ರದಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಿದ ಇವರು ಕರ್ನಾಟಕ ಸರಕಾರದಿಂದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರನಾಗಿ ಬೆಂಗಳೂರಿನಲ್ಲಿ ತನ್ನದೇ ಆದ ಅನನ್ಯ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಯನ್ನು ಕಟ್ಟಿ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಬೆಂಗಳೂರಿನಲ್ಲಿ ಉದ್ಯಮಿಯಾದರೂ ಹುಟ್ಟೂರಿನ ಋಣವನ್ನು ಬಿಡದ ಇವರು ಇಲ್ಲಿ ಹತ್ತು ಹಲವು ಸಮಾಜಮುಖಿ ಸೇವೆಯನ್ನು ನಡೆಸುತ್ತಾ ಬರುತ್ತಿದ್ದಾರೆ. ಕೊರೋನಾದ ಸಂದರ್ಭ ಕಿಟ್ ವಿತರಣೆ, ಮಡಿಕೇರಿಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಅಲ್ಲಿಗೂ ತೆರಳಿದ್ದ ಇವರು ಅಲ್ಲಿ ಸಂತ್ರಸ್ತರಾದವರಿಗೆ ಆಹಾರದ ಕಿಟ್ ಸೇರಿದಂತೆ ಮಾನವೀಯ ನೆರವನ್ನು ನೀಡಿದ್ದಾರೆ. ಅದಲ್ಲದೆ, ಊರಿನ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೂ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ಪತ್ನಿ ಪ್ರಮೀಳಾ ಎ. ಹಾಗೂ ಮಕ್ಕಳಾದ ಶಾಗ್ವಿ ಎನ್.ಪಿ. ಮತ್ತು ವಿವಿನ್ ಎನ್.ಪಿ. ಅವರೊಂದಿಗೆ ಸುಖ ಜೀವನ ನಡೆಸುತ್ತಿರುವ ಇವರು ಇಷ್ಟೆಲ್ಲಾ ಸಮಾಜಮುಖಿ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೂ, ಎಲ್ಲಿಯೂ ಗುರುತಿಸಿಕೊಳ್ಳುವ ಜಾಯಮಾನದವರಲ್ಲ. ಆದ್ದರಿಂದ ಎಲೆಮರೆಯ ಕಾಯಿಯಾಗಿಯೇ ಉಳಿದಿದ್ದಾರೆ.
ಈ ಬಾರಿ ಇವರು ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ನೀಡುವ ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಪರಿಸರದ 50 ವಿದ್ಯಾರ್ಥಿಗಳಿಗೆ ತನ್ನ ಮನೆಗೇ ಕರೆದು, ಶಾಲಾ ಬ್ಯಾಗ್‌ಗಳನ್ನು ವಿತರಿಸಿದ್ದಾರೆ. ಇನ್ನು ಕೆಲವಷ್ಟು ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ನೀಡುವ ಯೋಜನೆ ಹಾಕಿಕೊಂಡಿದ್ದಾಗಿ ತಿಳಿಸಿದ್ದಾರೆ. ಶಾಲಾ ಬ್ಯಾಗ್ ವಿತರಣೆಯ ಸಂದರ್ಭ ಇವರ ಮನೆಯವರು ಹಾಗೂ ಸ್ಥಳೀಯ ಪ್ರಮುಖರಾದ ಧರ್ನಪ್ಪ ನಾಯ್ಕ ಇವರೊಂದಿಗಿದ್ದರು.