





ಪುತ್ತೂರು:ಗ್ರಾಮ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ವಿಧಾನಪರಿಷತ್ತಿನ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಮನವಿ ಮಾಡಿದ್ದಾರೆ.


ಪತ್ರದಲ್ಲಿ ಗ್ರಾಮ ಪಂಚಾಯತಿಗಳು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಮತ್ತು ಗ್ರಾಮಸಭೆಯ ನಿಯಮಗಳಂತೆ ಗ್ರಾಮಸಭೆಗಳನ್ನು ಆಯೋಜಿಸ ಬೇಕಾಗಿರುತ್ತದೆ. ಗ್ರಾಮ ಸಭೆಯು ಸ್ಥಳೀಯ ಸ್ವಯಂ ಆಡಳಿತದ ಮೂಲ ಘಟಕವಾಗಿದ್ದು, ಗ್ರಾಮ ಪಂಚಾಯತಿಯಲ್ಲಿ ಅನುಷ್ಠಾನಗೊಳ್ಳುವ ಎಲ್ಲಾ ರೀತಿಯ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ಮತ್ತು ಪರಿಸರ ಅಭಿವೃದ್ಧಿ ಕಾರ್ಯಕ್ರಮಗಳ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರಲ್ಲಿ ಮೇಲ್ವಿಚಾರಣೆ ಮಾಡುವುದರಲ್ಲಿ ಗ್ರಾಮದ ಎಲ್ಲಾ ನಾಗರಿಕರು ನೇರವಾಗಿ ಭಾಗಿಯಾಗಲು ಅವಕಾಶವಿರುತ್ತದೆ. ಸದರಿ ಗ್ರಾಮಸಭೆಗೆ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಾಗಿ ತಮ್ಮ ಇಲಾಖೆಯ ಮಾಹಿತಿಯನ್ನು ನೀಡಬೇಕಾಗಿರುತ್ತದೆ. ಆದರೆ ಜಿಲ್ಲೆಯ ಕೆಲವು ಗ್ರಾಮ ಪಂಚಾಯತಿಗಳ ಗ್ರಾಮಸಭೆಗಳಿಗೆ ಕೆಲವು ಇಲಾಖೆ ಅಧಿಕಾರಿಗಳು ಹಾಜರಾಗದಿರುವ ಕುರಿತು ದೂರುಗಳು ಬಂದಿದ್ದು, ನಿಯಮದಂತೆ ಸಂಬಂಧ ಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.







            






