ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ

0

ಕಾಂಗ್ರೆಸ್ ಪಕ್ಷದ ಮೂಲಕ ಪ್ರತಿ ಮನೆಗೆ ತಲುಪಬೇಕು-ಅಶೋಕ್ ಕುಮಾರ್ ರೈ
ಯೋಜನೆಯ ನೊಂದಾವಣೆಗೆ ಜೂ.15ರಿಂದ ಪ್ರತಿ ವಲಯದಲ್ಲಿ ಇಂದಿರಾ ಸೇವಾ ಕೇಂದ್ರ-ಸುಭಾಶ್ಚಂದ್ರ
ಅರ್ಜಿ ಸಲ್ಲಿಸಿದವರಿಗೆ ಮಾತ್ರ ಯೋಜನೆ ಸೌಲಭ್ಯ-ಲಾರೆನ್ಸ್ ಡಿ ಸೋಜ

ಪುತ್ತೂರು:ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಾಗಾರವು ಜೂ.13ರಂದು ಎಪಿಎಂಸಿ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆಯಿತು.


ಕಾಂಗ್ರೆಸ್ ಪಕ್ಷದ ಮೂಲಕ ಪ್ರತಿ ಮನೆಗೆ ತಲುಪಬೇಕು-ಅಶೋಕ್ ಕುಮಾರ್ ರೈ
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಗ್ಯಾರಂಟಿ ಯೋಜನೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಇದನ್ನು ಕಾಂಗ್ರೆಸ್ ಪಕ್ಷದ ಮೂಲಕ ಮನೆ ಮನೆ ತಲುಪಬೇಕು. ಇಲ್ಲದಿದ್ದರೆ ದುರುಪಯೋಗಪಡಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ಪಕ್ಷ ಬೇಧವಿಲ್ಲ. ಅರ್ಜಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಿದ್ದು ಪಕ್ಷದ ಈ ಯೋಜನೆಗಳನ್ನು ಪ್ರತಿ ಮನೆ ತಲುಪಿಸುವಲ್ಲಿ ಪಕ್ಷದ ಬೂತ್ ಅಧ್ಯಕ್ಷರು, ವಲಯಾಧ್ಯಕ್ಷರು ಹಾಗೂ ಕಾರ್ಯಕರ್ತರು ಪ್ರತಿ ಮನೆಗಳಿಂದ ದಾಖಲೆ ಸಂಗ್ರಹಿಸಿ ಅನುಷ್ಟಾನ ಮಾಡುವಲ್ಲಿ ಸಹಕರಿಸಬೇಕು. ನೊಂದಾವಣೆಗೆ ಶಾಸಕರ ಕಚೇರಿಯಲ್ಲಿ ಮೂರು ಕಂಪ್ಯೂಟರ್ ಮೂಲಕ ನೋಂದಾವಣೆಗೆ ಅವಕಾಶ ನೀಡಲಾಗುವುದು. ಪಂಚಾಯತ್ ಮಟ್ಟದಲ್ಲಿ ಸೆಂಟರ್‌ಗಳ ಮೂಲಕ ಹಾಗೂ ಏಜೆನ್ಸಿಗಳನ್ನು ಒಂದು ತಿಂಗಳ ಅವಧಿಗೆ ಬಳಸಿಕೊಳ್ಳಬಹುದು. ಲ್ಯಾಪ್‌ಟಾಪ್‌ಗಳು ಬಹುತೇಕ ಮನೆಗಳಲ್ಲಿದ್ದು ಅವರನ್ನು ಬಳಸಿಕೊಳ್ಳಬಹುದು. ಆಯಾ ಭಾಗದಲ್ಲಿ ವಲಯ, ಬೂತ್ ಅಧ್ಯಕ್ಷರುಗಳು ಕಂಪ್ಯೂಟರ್ ಮೂಲಕ ನೋಂದಾವಣೆ ಮಾಡಿಕೊಳ್ಳಬೇಕು. ಶಾಸಕರ ಕಚೇರಿಯಲ್ಲಿ ನೋಂದಾವಣೆಗೆ ದಿನಪೂರ್ತಿ ಅವಕಾಶ ನೀಡಲಾಗುವುದು ಎಂದು ಹೇಳಿದರು.


ಯೋಜನೆಯ ನೊಂದಾವಣೆಗೆ ಪ್ರತಿ ವಲಯದಲ್ಲಿ ಜೂ.15ರಿಂದ ಇಂದಿರಾ ಸೇವಾ ಕೇಂದ್ರ-ಸುಭಾಶ್ಚಂದ್ರ
ರಾಜೀವ್ ಗಾಂಧೀ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಸರಕಾರದ ಐದು ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದ್ದು ಇದನ್ನು ಮನೆ ಮನೆ ತಲುಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿ ವಲಯಗಳಲ್ಲಿ ಜೂ.15ರಿಂದ ಇಂದಿರಾ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇಲ್ಲಿ ಯೋಜನಗೆಗಳಿಗೆ ಅರ್ಜಿ ಸಲ್ಲಿಸಿ ನೋಂದಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಸೇವಾ ಕೇಂದ್ರಗಳಿಗೆ ಆವಶ್ಯಕವಾದ ಮೂಲಭೂತ ಸೌಲಭ್ಯಗಳು ಹಾಗೂ ಅಲ್ಲಿಗೆ ಸಿಬಂದಿಗಳ ನೇಮಕ, ನಿರ್ವಹಣೆಗಳಿಗೆ ಕೆಪಿಸಿಸಿಯಿಂದ ಯಾವುದೇ ಹಣಕಾಸಿನ ನೆರವು ನೀಡಲಾಗುವುದಿಲ್ಲ. ಶಾಸಕರು, ಮಾಜಿ ಶಾಸಕರುಗಳ ಮೂಲಕ ಇದಕ್ಕೆ ಬೇಕಾದ ಸೌಲಭ್ಯಗಳನ್ನು ಮಾಡಿಕೊಳ್ಳಬೇಕಾಗಿದೆ. ಪ್ರಸ್ತುತವಿರುವ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆ ಒಂದು ಮನೆಯಿಂದ ಇಬ್ಬರನ್ನು ನೊಂದಾವಣೆ ಮಾಡಿಕೊಳ್ಳಬೇಕಾಗಿದೆ. ನೊಂದಾವಣೆಗೆ ಆವಶ್ಯಕವಾದ ದಾಖಲೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂಬುದನ್ನು ಕಾರ್ಯಕರ್ತರ ಮತದಾರರಿಗೆ ತಿಳಿಸುವ ಕೆಲಸವಾಗಬೇಕು. ಅದಕ್ಕಾಗಿ ವಲಯ ಕಾಂಗ್ರೆಸ್, ಬೂತ್ ಮಟ್ಟದಲ್ಲಿ ನೋಂದಾವಣಿಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದು ತಿಳಿಸಿದರು.


ಅರ್ಜಿ ಸಲ್ಲಿಸಿದವರಿಗೆ ಮಾತ್ರ ಯೋಜನೆ ಸೌಲಭ್ಯ-ಲಾರೆನ್ಸ್ ಡಿ ಸೋಜ
ಜಿಲ್ಲಾ ಕಾರ್ಮಿಕಾ ಘಟಕದ ಅಧ್ಯಕ್ಷ ಲಾರೆನ್ಸ್ ಡಿ ಸೋಜ ಮಾತನಾಡಿ, ಗ್ಯಾರಂಟಿ ಯೋಜನೆಯ ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳ ಪಡೆದುಕೊಳ್ಳಬೇಕಾದರೆ ಫಲಾನುಭವಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕಾಗಿದೆ. ಅರ್ಜಿ ಸಲ್ಲಿಸದವರಿಗೆ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಉಚಿತ ಬಸ್ ಪ್ರಯಾಣಕ್ಕೆ ಸದಸ್ಯಕ್ಕೆ ಇತರ ದಾಖಲೆ ತೋರಿಸಿ ಪ್ರಯಾಣಿಸಬಹುದು. ಮೂರು ತಿಂಗಳ ಬಳಿಕ ಅರ್ಜಿ ಸಲ್ಲಿಸಿ ಶಕ್ತಿ ಕಾರ್ಡ್ ಪಡೆದುಕೊಂಡೇ ಪ್ರಯೋಜನ ಪಡೆದುಕೊಳ್ಳಬೇಕು. ಜೂ.15ರಿಂದ ಜು.15ರ ತನಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದ್ದು ಇದರ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಪ್ರಯೋಜನ ಪಡೆದುಕೊಳ್ಳಬೇಕು. ಸೇವಾ ಕೇಂದ್ರ, ಸೈಬರ್ ಸೆಂಟರ್‌ಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ಕಂದಾಯ ಇಲಾಖೆ, ಅಂಗನವಾಡಿ ಕಾರ್ಯಕರ್ತರನ್ನು ಇದಕ್ಕೆ ನಿಯೋಜನೆ ಮಾಡುತ್ತಾರೆ. ಅನ್ನಭಾಗ್ಯ ನಿರಂತರ ಪ್ರಕ್ರಿಯೆಯಾಗಿದ್ದು ಮುಂದುವರಿಯಲಿದೆ. ಗೃಹಜ್ಯೋತಿಯಲ್ಲಿ ಫಲಾನುಭವಿಗಳ ಹೆಸರಿನಲ್ಲಿಯೇ ಖಾತೆ ಹೊಂದಿರಬೇಕು. ಗೃಹಲಕ್ಷ್ಮಿಯಲ್ಲಿ ತೆರಿಗೆ ಪಾವತಿ ಮಾಡುವವರಿಗೆ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ. ನೋಂದಾವಣೆ ಪ್ರಕ್ರಿಯೆಗಳು ಸರಳೀಕರಣಗೊಂಡು ಮುಂದೆ ಮೊಬೈಲ್ ಮೂಲಕ ನೋಂದಾವಣೆಗೆ ಅವಕಾಶ ದೊರೆತಾಗ ಕಾರ್ಯ ಕರ್ತರು ಮನೆ ಮನೆಗೆ ಹೋಗಿ ಮಾಡಲು ಅವಕಾಶವಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲದೇ ಇದ್ದು ಇಂತಹ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳಲು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗುವುದು ಎಂದು ಹೇಳಿದರು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಅಧ್ಯಕ್ಷತೆ ವಹಿಸಿದ್ದರು. ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಪಕ್ಷದ ಪ್ರಮುಖರಾದ ಶಿವರಾಮ ಆಳ್ವ, ಕೌಶಲ್ ಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿ, ಮಹಾಲಿಂಗ ನಾಯ್ಕ, ಕೃಷ್ಣಪ್ರಸಾದ್ ಆಳ್ವ, ಮೌರೀಶ್ ಮಸ್ಕರೇನಸ್, ಉಲ್ಲಾಸ್ ಕೋಟ್ಯಾನ್, ವೇದನಾಥ ಸುವರ್ಣ, ಅಬ್ದುಲ್ ರಹಿಮಾನ್ ಯೂನಿಕ್, ಎ.ಕೆ ಜಯರಾಮ ರೈ, ಸೀತಾ ಭಟ್, ರೋಷನ್ ರೈ ಬನ್ನೂರು ಸಹಿತ ವಿವಿಧ ವಲಯಗಳ ಅಧ್ಯಕ್ಷರು, ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಸ್ವಾಗತಿಸಿದರು. ಕೆಪಿಸಿಸಿ ವಾರ್‌ರೂಂ ಮುಖ್ಯಸ್ಥ ಸಂಘಟನೆ ಸಂತೋಷ್ ಭಂಡಾರಿ ಚಿಲ್ಮೆತ್ತಾರು ವಂದಿಸಿದರು.

LEAVE A REPLY

Please enter your comment!
Please enter your name here