ಚೆಲ್ಯಡ್ಕದಲ್ಲಿ ಚೆಲ್ಲಿದ ಸಾರ್ವಜನಿಕ ತೆರಿಗೆ ಹಣ-ತೇಪೆ ಕಾಮಗಾರಿಗೆ ಆಕ್ರೋಶ-ಲೋಕಾಯುಕ್ತ ತನಿಖೆಗೆ ಆಗ್ರಹ

0

* ಉಮೇಶ್‌ ಮಿತ್ತಡ್ಕ

ಬೆಟ್ಟಂಪಾಡಿ: 3 ಕೋಟಿ ರೂ. ಅನುದಾನ.. ಆಗಬೇಕಾಗಿದ್ದದ್ದು ಮೂರು ರಸ್ತೆ ಕೂಡುವ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ.. ಅಬ್ಬಬ್ಬಾ.. ಹೇಗಾಗಬಹುದು ಕೆಲಸ.. ನೋಡಲು ಎಷ್ಟು ಆಕರ್ಷಕವಾಗಿರಬಹುದು.! ಹೀಗೆಲ್ಲಾ ಕನಸು ಕಂಡಿದ್ದ ಚೆಲ್ಯಡ್ಕ ಜಂಕ್ಷನ್‌ ಕನಸಿನಲ್ಲಿಯೇ ಮಾಯವಾಗಿದೆ..  ಅಭಿವೃದ್ಧಿಗೆ ಇಟ್ಟಿರುವ ರೂ. 3 ಕೋಟಿಯಲ್ಲಿ ಎಷ್ಟು ಕೋಟಿಗಳು ನುಂಗಣ್ಣ ಆಗಿವೆ ಎಂಬುದರ ಬಗ್ಗೆ ಇದೀಗ ಸಾರ್ವಜನಿಕರು ಮಾತನಾಡಲಾರಂಭಿಸಿದ್ದಾರೆ.

ಇದು ಪುತ್ತೂರು – ಪಾಣಾಜೆ ರಸ್ತೆಯ ಮಧ್ಯೆ ಸಿಗುವ ಚೆಲ್ಯಡ್ಕ ಜಂಕ್ಷನ್‌ನ ವ್ಯಥೆಯ ಕಥೆಯಿದು. ಪುತ್ತೂರಿನಿಂದ ಸಂಟ್ಯಾರ್‌ ಮೂಲಕ ಹಾದುಹೋಗುವ ರಸ್ತೆ ಮತ್ತು ಪುತ್ತೂರು ಪರ್ಲಡ್ಕ – ದೇವಸ್ಯ ಮೂಲಕ ಹಾದು ಹೋಗುವ ರಸ್ತೆಗಳು ಸಂಗಮಿಸುವ ಸ್ಥಳವಿದು. ಈ ಜಂಕ್ಷನ್‌ ಅಪಾಯಕಾರಿ ಸ್ಥಿತಿಯಲ್ಲಿದ್ದು, ಆಸುಪಾಸಿನಲ್ಲಿ ಹಲವು ವರ್ಷಗಳಿಂದ ಅನೇಕ ರಸ್ತೆ ಅಪಘಾತಗಳು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಶಾಸಕ ಸಂಜೀವ ಮಠಂದೂರುರವರ ಅವಧಿಯಲ್ಲಿ ಜಂಕ್ಷನ್‌ ಸಂಪೂರ್ಣ ಅಭಿವೃದ್ಧಿಗೆ ರೂ. 3 ಕೋಟಿ ಅನುದಾನ ಮಂಜೂರುಗೊಳಿಸಲಾಗಿತ್ತು. ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡಿತ್ತು. ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿದರೂ ಆಕರ್ಷಣೀಯವಾಗಿ ಜಂಕ್ಷನ್‌ ಅಭಿವೃದ್ಧಿಗೊಳ್ಳುತ್ತದೆ ಎಂದು ಜನರು ನಂಬಿದ್ದರು. ಆದರೆ ಈಗ ಜನರ ನಂಬಿಕೆ ಹುಸಿಯಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಈ ಹಿಂದಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಈ ಜಂಕ್ಷನ್‌ ನಿರ್ಮಾಣಗೊಂಡಿದೆ. ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಕೊನೆಗೊಂಡಿದ್ದು, ಅಂತಿಮ ಟಚಪ್‌ ನೀಡುವ ಕೆಲಸ ನಡೆಯುತ್ತಿದೆ.

ಅಗಲವಾಗದ ರಸ್ತೆ
ಮುಖ್ಯವಾಗಿ ಮೂರು ರಸ್ತೆ ಕೂಡುವ ಸ್ಥಳವಾದುದುರಿಂದ ಇಲ್ಲಿ ರಸ್ತೆಗಳು ಅಗಲವಾಗಿ ನಿರ್ಮಾಣಗೊಂಡು ಮಧ್ಯದಲ್ಲಿ ವೃತ್ತ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಬೇಕಿತ್ತು. ಆದರೆ ಇಲ್ಲಿ ಮೊದಲಿನಷ್ಟೇ ಸಂಕುಚಿತವಾದ ರಸ್ತೆ ನಿರ್ಮಿಸಲಾಗಿದೆ. ಇದು ಅವೈಜ್ಞಾನಿಕ ರೀತಿಯಲ್ಲಿ ಕಂಡುಬರುತ್ತಿದೆ.

ಬಸ್‌ ತಂಗುದಾಣವಿಲ್ಲ
ಈ ಜಂಕ್ಷನ್‌ನಲ್ಲಿ ದಿನನಿತ್ಯ ನೂರಾರು ಪ್ರಯಾಣಿಕರು ಕಾಯುತ್ತಿರುತ್ತಾರೆ. ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ಇದ್ದ ಒಂದು ಬಸ್‌ ತಂಗುದಾಣವನ್ನು ಕಾಮಗಾರಿ ನೆಪದಲ್ಲಿ ಕೆಡವಲಾಗಿದೆ. ಈಗಿನ ಅನುದಾನದಲ್ಲಿ ಹೊಸ ಬಸ್‌ ತಂಗುದಾಣ ನಿರ್ಮಾಣವಾಗುತ್ತಿಲ್ಲ. ಬೆಟ್ಟಂಪಾಡಿ ಪಂಚಾಯತ್‌ನಿಂದ ಬಸ್‌ ತಂಗುದಾಣ ನಿರ್ಮಿಸಲು ನಿರ್ಣಯ ಮಾಡಿದರೂ ಲೋಕೋಪಯೋಗಿ ಇಲಾಖೆ ಇಲ್ಲಿ ಸ್ಥಳಾವಕಾಶ ನೀಡುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ.

ಸ್ಯಾಂಪಲ್‌ ವೃತ್ತ
ಜಂಕ್ಷನ್‌ ಮಧ್ಯೆ ವೃತ್ತದ ಬದಲು ಎರಡು ಟಯರ್‌ಗಳನ್ನು ಇಡಲಾಗಿದ್ದು, ಅಪಘಾತವನ್ನು ಕೈ ಬೀಸಿ ಕರೆಯುತ್ತಿದೆ. ಇದು ಸ್ಯಾಂಪಲ್‌ ವೃತ್ತವಾಗಿದ್ದು, ಟ್ರಯಲ್‌ ನೋಡಲಾಗುತ್ತಿದೆ. ಇರುವ ಅನುದಾನದಲ್ಲಿ ವೃತ್ತ ನಿರ್ಮಾಣಕ್ಕೆ ಅವಕಾಶವಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಕೊನೇ ಪಕ್ಷ ಮೂರು ರಸ್ತೆಗಳು ವಿಭಜಿಸುವಲ್ಲಿ ಡಿವೈಡರ್‌ಗಳನ್ನು ಅಳವಡಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಸಾಮಾನ್ಯರಿಗೂ ಗೋಚರವಾಗುತ್ತಿದೆ.

ಪಕ್ಕದ ಕೃಷಿಕರಿಗೆ ಪರಿಹಾರ ದೊರೆತಿಲ್ಲ
ಕಾಮಗಾರಿಯ ವೇಳೆ ಅಕ್ಕಪಕ್ಕದ ಎರಡು ಕೃಷಿಕರ ತೋಟಗಳಿಗೆ ಹಾನಿಯಾಗಿದೆ. ಕಾಂಕ್ರೀಟ್‌ ತಡೆಗೋಡೆ ವಿಸ್ತರಿಸದ ಪರಿಣಾಮ ಜರಿದು ಬೀಳುವ ಮಣ್ಣು ನಮ್ಮ ತೋಟಕ್ಕೆ ಬಿದ್ದು ತೊಂದರೆಯಾಗಿದೆ. ಕಾಮಗಾರಿ ವೇಳೆ 20 ಅಡಿಕೆ ಮರ ಮತ್ತು 3 ತೆಂಗಿನ ಮರ ನಾಶಗೊಂಡಿದೆ. ಇದುವರೆಗೆ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯ ಕೃಷಿಕ ಪರಮೇಶ್ವರ ಗೌಡ ಹೇಳಿದ್ದಾರೆ. ಅದೇ ರೀತಿ ಇನ್ನೊಂದು ಬದಿಯ ಮಮತಾ ರೈ ಎಂಬವರ ತೋಟದ ಸಾಕಷ್ಟು ಅಡಿಕೆ ಮರಗಳು ನಾಶಗೊಂಡಿವೆ. ಇನ್ನೂ ಈ ಕೃಷಿಕರಿಗೆ ಪರಿಹಾರವನ್ನು ನೀಡಲಾಗಿಲ್ಲ.

ಅಪಘಾತಕ್ಕೆ ಕಾರಣವಾಗಲಿರುವ ವಿದ್ಯುತ್‌ ಕಂಬ
ಕಾಮಗಾರಿ ವೇಳೆ ತೆಗೆದುಹಾಕಲಾಗಿರುವ ವಿದ್ಯುತ್‌ ಕಂಬವೊಂದನ್ನು ಮೆಸ್ಕಾಂನವರು ಸ್ಥಳದ ಕೊರತೆಯಿಂದ ಕ್ರ್ಯಾಶ್‌ ಬೇರಿಯರ್‌ ಮತ್ತು ರಸ್ತೆಯ ಮಧ್ಯೆ ಸ್ಥಾಪಿಸಿದ್ದಾರೆ. ಇದರಿಂದ ಸಂಕುಚಿತವಾದ ರಸ್ತೆಯನ್ನು ಸ್ವಲ್ಪ ಬಿಟ್ಟು ವಾಹನ ಸಂಚರಿಸಿದೊಡನೆ ವಿದ್ಯುತ್‌ ಕಂಬಕ್ಕೆ ಬಡಿಯುವ ಸಾಧ್ಯತೆಯಿದೆ.

ಅಪಘಾತಗಳಾದಲ್ಲಿ ಅಧಿಕಾರಿಗಳೇ ಹೊಣೆ
ಅವೈಜ್ಞಾನಿಕವಾಗಿ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ ನಡೆಸಿರುವುದರಿಂದ ಮುಂದಕ್ಕೆ ಇಲ್ಲಿ ಅಪಘಾತಗಳು ಸಂಭವಿಸಿದಲ್ಲಿ ಅದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ನೇರ ಹೊಣೆ ವಹಿಸಬೇಕು ಎಂದು ದಾಸ್‌ ಪ್ರಕಾಶ್‌ ರೈ ಹೇಳಿದ್ದಾರೆ.

ಒಟ್ಟಿನಲ್ಲಿ ಸರಕಾರದಿಂದ ಬಿಡುಗಡೆಯಾದ ರೂ. 3 ಕೋಟಿ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗೆ ಸಮರ್ಪಕವಾಗಿ ಬಳಸದ ಪರಿಣಾಮ ಆಕರ್ಷಕವಾಗಿ ನಿರ್ಮಾಣಗೊಳ್ಳಬೇಕಿದ್ದ ಜಂಕ್ಷನ್‌ ಅಪಾಯಕಾರಿಯಾಗಿ ಅಪಘಾತಗಳಿಗೆ ಕಾಯುತ್ತಿದೆ ಎಂದು ಜನಸಾಮಾನ್ಯರೂ ಆಡಿಕೊಳ್ಳುವಂತಾಗಿದೆ. ಪುತ್ತೂರಿನ ನೂತನ ಶಾಸಕರು ಮತ್ತು ಸರಕಾರ ಈ ಬಗ್ಗೆ ಗಮನಹರಿಸಿ ಜನರ ತೆರಿಗೆ ಹಣ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕಾಗಿದೆ.

ರಸ್ತೆ ಬದಿ ಕುಸಿತ, ಡಾಮರು ಬಿರುಕು
ರಸ್ತೆಗಿಂತ ಮೇಲೆಯವರೆಗೆ ಏರಬೇಕಾಗಿದ್ದ ಕಾಂಕ್ರೀಟ್‌ ತಡೆಗೋಡೆಯನ್ನು ರಸ್ತೆಗಿಂತ ಸುಮಾರು 5 ಅಡಿಯಷ್ಟು ಕೆಳಗಡೆಯೇ ನಿಲ್ಲಿಸಲಾಗಿದೆ. ಹೀಗಾಗಿ ಮೇಲ್ಭಾಗದ ಮಣ್ಣು ಕುಸಿಯಲಾರಂಭಿಸಿದೆ. ರಸ್ತೆ ಮತ್ತು ತಡೆಗೋಡೆ ಮಧ್ಯೆ ಮಣ್ಣು ತುಂಬಿ ವೈಬ್ರೇಟ್‌ ಹಾಕದ ಪರಿಣಾಮ ಆರಂಭದ ಮಳೆಗೆ ಅಲ್ಲಲ್ಲಿ ಹೂತು ಡಾಮರು ಬಿರುಕು ಬಿಡಲಾರಂಭಿಸಿದೆ. ಉದ್ಘಾಟನೆಗೂ ಮುನ್ನವೇ ಇಲ್ಲಿ ಕಲ್ಲು ಮಣ್ಣುಗಳಿಂದ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ. ರೂ. 3 ಕೋಟಿಯ ಅನುದಾನದಲ್ಲಿ 1 ಕೋಟಿಯಷ್ಟೂ ಕಾಮಗಾರಿಗಳು ನಡೆದಿಲ್ಲವಾದ್ದರಿಂದ ಇದನ್ನು ಲೋಕಾಯುಕ್ತ ತನಿಖೆಗೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.

ಲೋಕಾಯುಕ್ತ ತನಿಖೆಯಾಗಬೇಕು
ಇಲ್ಲಿ ಅಭಿವೃದ್ಧಿಗಿಂತ ಅಪಾಯವನ್ನೇ ಇನ್ನೂ ಹೆಚ್ಚಿಸಿದಂತಾಗಿದೆ. ಕಾಮಗಾರಿಗೂ ಮೊದಲು ಕಲ್ಪಿಸಲಾಗಿದ್ದ ಯಾವುದೇ ಅಭಿವೃದ್ಧಿಗಳು ಇಲ್ಲಿ ನಡೆದಿಲ್ಲ. ಆಗಿರುವ ಕೆಲಸಗಳೂ ಅರ್ಧಂಬರ್ಧವಾಗಿದೆ.  3 ಕೋಟಿ ಹಣದಲ್ಲಿ 1 ಕೋಟಿಯ ಕೆಲಸವೂ ಆಗಿಲ್ಲ. ಆದುದರಿಂದ ಇದನ್ನು ಲೋಕಾಯುಕ್ತ ತನಿಖೆಗೊಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಗಮನಹರಿಸಬೇಕು. ಇಲ್ಲವಾದಲ್ಲಿ ಈ ಬಗ್ಗೆ ಸಾರ್ವಜನಿಕ ಹೋರಾಟಕ್ಕೆ ನಾವು ಹಿಂಜರಿಯುವುದಿಲ್ಲ ಎಂದು ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಪ್ರಕಾಶ್‌ ರೈ, ಸ್ಥಳೀಯರಾದ ದಾಸ್‌ ಪ್ರಕಾಶ್‌ ರೈ, ಕೃಷ್ಣಪ್ರಸಾದ್‌ ಆಳ್ವ, ಪ್ರಮೋದ್‌ ಉಪ್ಪಳಿಗೆ ಮುಂತಾದವರು ಒತ್ತಾಯಿಸಿದ್ದಾರೆ.

ಬಹುತೇಕ ಕಾಮಗಾರಿ ಪೂರ್ಣ
3 ಕೋಟಿ ರೂ. ಅನುದಾನದಲ್ಲಿ ಹಿಂದಿನ ಶಾಸಕರ ಶಿಫಾರಸ್ಸಿನೊಂದಿಗೆ ಈ ಅನುದಾನ ಮಂಜೂರುಗೊಂಡಿದೆ. ಬಹುತೇಕ ಎಲ್ಲಾ ಕಾಮಗಾರಿಗಳು ಮುಗಿದಿವೆ. ಇನ್ನು ಕೊನೆಯ ಹಂತದ ಟಚಪ್‌ ನೀಡುವ ಕೆಲಸ ನಡೆಯುತ್ತಿದೆ. ೩ ಕೋಟಿ ರೂ. ನಲ್ಲಿ ಕಾಂಕ್ರೀಟ್‌ ತಡೆಗೋಡೆ, ಕ್ರ್ಯಾಶ್‌ ಬೇರಿಯರ್‌, ರೋಡ್‌ ಸೇಫ್ಟಿ ಮತ್ತು ಜಂಕ್ಷನ್‌ ಅಭಿವೃದ್ಧಿ ಮಾಡಲಾಗಿದೆ. 2 ವರ್ಷ ನಿರ್ವಹಣೆಯೂ ಗುತ್ತಿಗೆದಾರರು ಮಾಡಬೇಕಾಗಿದೆ. ಡಿವೈಡರ್‌, ಬಸ್‌ ತಂಗುದಾಣ ಈ ಅನುದಾನದಲ್ಲಿ ಬರುವುದಿಲ್ಲ.
– ಬಾಲಕೃಷ್ಣ ಭಟ್‌ ಲೋಕೋಪಯೋಗಿ ಅಭಿಯಂತರರು

LEAVE A REPLY

Please enter your comment!
Please enter your name here