ಕರ್ತವ್ಯಕ್ಕೆ ಅಡ್ಡಿ, ಕೊಲೆ ಯತ್ನ: ಉಪ್ಪಿನಂಗಡಿ ಪಿಡಿಒ ದೂರು- ಮಾನಭಂಗಕ್ಕೆ ಯತ್ನ: ಪಿಡಿಒ ಸಹಿತ ಮೂವರ ವಿರುದ್ಧ ಮಹಿಳೆ ಪ್ರತಿ ದೂರು

0

ಉಪ್ಪಿನಂಗಡಿ: ಸರಕಾರಿ ಕೆಲಸ ಮಾಡುತ್ತಿದ್ದಾಗ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಕೊಲೆಗೆ ಯತ್ನಿಸಿದ್ದಾರೆಂದು ಆರೋಪಿಸಿ ಉಪ್ಪಿನಂಗಡಿಯ ಕುಕ್ಕುಜೆಯ ಎಚ್.ಕೆ. ಹಕೀಂ ಎಂಬವರ ಮೇಲೆ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲಿನ ಸುಹೈಬಾ ಎನ್ನುವವರು ಪಿಡಿಒ ಹಾಗೂ ಗ್ರಾ.ಪಂ.ನ ಇಬ್ಬರು ಸಿಬ್ಬಂದಿಯ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.

ಉಪ್ಪಿನಂಗಡಿ ಬಳಿಯ ಕುಕ್ಕುಜೆ ಎಂಬಲ್ಲಿ ಎಚ್.ಕೆ. ಹಕೀಂ ಎಂಬವರು ಮನೆಯ ಬದಿಗೆ ತಡೆಗೋಡೆ ಕಟ್ಟಿದ್ದು, ಆಗ ತೆಗೆದ ಗುಂಡಿಯ ಮಣ್ಣನ್ನು ರಸ್ತೆಯ ಬದಿ ರಾಶಿ ಹಾಕಿದ್ದರು. ಈ ಬಗ್ಗೆ ನೊಟೀಸ್ ನೀಡಿದ್ದರೂ, ಅವರು ಅದನ್ನು ತೆರವುಗೊಳಿಸಿರಲಿಲ್ಲ. ಆದ್ದರಿಂದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ನಾನು ಇದರ ತೆರವು ಕಾರ್ಯಾಚರಣೆಗೆ ಮುಂದಾದಾಗ ಎಚ್.ಕೆ. ಹಕೀಂ ಹಾಗೂ ಇತರರು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ರೆಡ್ ಲಾರೆನ್ಸ್ ರೊಡ್ರೀಗಸ್ ಅವರು ನೀಡಿದ ದೂರಿನಂತೆ ಎಚ್.ಕೆ. ಹಕೀಂ ಹಾಗೂ ಇತರರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಘಟನೆಗೆ ಸಂಬಂಧಿಸಿ ಕುಕ್ಕುಜೆಯ ಎಸ್.ಕೆ. ಯೂಸುಫ್ ಅವರ ಪತ್ರಿ ಸುಹೈಬಾ ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದು, ಇಲ್ಲಿನ ರಾಜ್ಯ ಹೆದ್ದಾರಿಯ ಬದಿಯಲ್ಲಿ ನಮ್ಮ ಮನೆಯಿದ್ದು, ಮಳೆಗಾಲದಲ್ಲಿ ಮನೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮನೆ ಬದಿ ತಡೆಗೋಡೆಯನ್ನು ಕಟ್ಟಿ ಅದರ ಪಕ್ಕವೇ ರಸ್ತೆ ಬದಿಯ ಚರಂಡಿಯನ್ನು ವ್ಯವಸ್ಥಿತವಾಗಿ ಮಾಡಿದ್ದೇವೆ. ಆಗ ತೆಗೆದ ಮಣ್ಣನ್ನು ರಸ್ತೆ ಬದಿಗೆ ಹಾಕಲಾಗಿತ್ತು. ನಾವು ಆ ಮಣ್ಣನ್ನು ತೆಗೆಸುತ್ತೇವೆ ಎಂದರೂ ಗ್ರಾ.ಪಂ.ನ ಪಿಡಿಒ ತನ್ನಿಬ್ಬರು ಸಿಬ್ಬಂದಿಯೊಂದಿಗೆ ಬಂದು ಹೆದ್ದಾರಿ ಬದಿಯಲ್ಲಿದ್ದ ಮಣ್ಣನ್ನು ವಾಪಸ್ ಚರಂಡಿಗೆ ಹಾಕಿ ಚರಂಡಿಯನ್ನು ಮುಚ್ಚಿದ್ದಾರೆ. ಅದನ್ನು ಆಕ್ಷೇಪಿಸಿದಾಗ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಹಾಗೂ ಇಬ್ಬರು ಸಿಬ್ಬಂದಿ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಸುಹೈಬಾರವರು ಆರೋಪಿಸಿದ್ದಾರೆ.
ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here