ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳ ಉದ್ಘಾಟನೆ

0

ಪುತ್ತೂರು (ಜೂ.17): ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು.ತುಳು ರಂಗಭೂಮಿ ಕಲಾವಿದ ತಿಮ್ಮಪ್ಪ ಕುಲಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಒಂದು ಸಂಘ ಹಾಗೂ ಸಂಘಟನಾ ಮನೋಭಾವ ಕಾಲೇಜಿನ ಹಂತದಲ್ಲಿ ಪ್ರಾರಂಭವಾದರೆ ಅದರ ಅನುಭವ ಜೀವನ ಪರ್ಯಂತ ಉಪಯೋಗವಾಗುವುದು. ಒಬ್ಬ ಮನುಷ್ಯ ತನ್ನ ಜವಾಬ್ದಾರಿಯನ್ನು ಅರಿತು ತನ್ನನ್ನು ತಾನು ಬೆಳೆಸಿಕೊಳ್ಳುವಲ್ಲಿ ವಿದ್ಯಾರ್ಥಿ ಸಂಘದ ಪಾತ್ರ ಅತೀ ಮುಖ್ಯ ಎಂದರು.


ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸತೀಶ್ಚಂದ್ರ ವಿದ್ಯಾಭ್ಯಾಸ ಅತೀ ಪ್ರಮುಖವೆಂದು ತಿಳಿದಿರುವ ಇಂದಿನ ಸಮಾಜದಲ್ಲಿ, ದೇಶವನ್ನು ಸಾಕ್ಷರತೆ ಕಡೆಗೆ ಕೊಂಡೊಯ್ಯುವ ಹಾದಿಯಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ಪಾತ್ರ ಮಹತ್ವವಾದುದು. ವಿದ್ಯಾರ್ಥಿಗಳಾದ ನೀವೆಲ್ಲರೂ 16-17 ವರ್ಷ ಪ್ರಾಯದ ಅದಮ್ಯ ಚೇತನ. ಹೆತ್ತವರು, ನೀವು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಕನಸನ್ನಿಟ್ಟುಕೊಂಡು ಈ ವಿದ್ಯಾಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಪಿಯುಸಿ ಎಂಬುದು ವಿದ್ಯಾರ್ಥಿ ಜೀವನದ ಬಹಳ ಮುಖ್ಯವಾದ ಘಟ್ಟ. ಈ ಎರಡು ವರ್ಷಗಳು ಹಲವಾರು ಅವಕಾಶಗಳ ಆಗರ. ಅವುಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು. ವಿವೇಕಾನಂದರ ಮಾತಿನಂತೆ ವಿದ್ಯಾರ್ಥಿಗಳಾದ ತಾವೆಲ್ಲರೂ ತಮ್ಮ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು, ತನ್ಮೂಲಕ ಅಭಿವೃದ್ಧಿಯನ್ನು ಕಂಡುಕೊಳ್ಳಬೇಕು. ಇದಕ್ಕೆಲ್ಲಾ ಪೂರಕವಾದ ವಾತಾವರಣವನ್ನು ವಿವೇಕಾನಂದ ವಿದ್ಯಾ ಸಂಸ್ಥೆ ಒದಗಿಸಿಕೊಡುತ್ತದೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡಬೇಕಾದುದು ನಮ್ಮೆಲ್ಲರ ಗುರಿಯಾಗಬೇಕು. ಇದರಲ್ಲಿ ನಾವು ನಮ್ಮ ಜೀವನದ ಸಾರ್ಥಕತೆ ಕಾಣಬಹುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿ ಸಂಚಾಲಕ ಗೋಪಾಲಕೃಷ್ಣ ಭಟ್ ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡಿ, ದೇಶಕ್ಕೆ ಉತ್ತಮ ನಾಯಕನ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘ ಪ್ರಮುಖ ಪಾತ್ರ ವಹಿಸುತ್ತದೆ. ಸಂಸ್ಥೆಯಲ್ಲಿ ನೀಡುವ ಎಲ್ಲಾಅವಕಾಶವನ್ನು ಸದುಪಯೋಗಗೊಳಿಸಿ ಸಮಾಜದಲ್ಲಿ ಉತ್ತಮ ನಾಯಕರಾಗಿ ಬೆಳೆಯಲು ಸಹಕಾರಿಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾ. ಕೆ. ಕೃಷ್ಣ ಪ್ರಸನ್ನ ಹಾಗೂ ಡಾ.ಕೆ.ಎನ್ ಸುಬ್ರಹ್ಮಣ್ಯ ಉಪಸ್ಥಿತರಿದ್ಧರು.
ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮನೀಶ್ ಪಿ. ಎಚ್, ಕಾರ್ಯದರ್ಶಿಯಾಗಿ ಸಹನಾ, ಜತೆಕಾರ್ಯದರ್ಶಿಯಾಗಿ ಅನಿಕರಶ್ಮಿ ಕೃಷ್ಣ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳಿಗೆ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಇವರು ಪ್ರಮಾಣ ವಚನ ಭೋಧಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದೇವಿಪ್ರಸಾದ್ ಸ್ವಾಗತಿಸಿ ಉಪನ್ಯಾಸಕಿ ಮೋನಿಷಾ ವಂದಿಸಿದರು. ವಿದ್ಯಾರ್ಥಿನಿಗಳಾದ ಪಲ್ಲವಿ ಮತ್ತು ಶ್ರುತಿ ಪ್ರಾರ್ಥಿಸಿದರು. ಉಪನ್ಯಾಸಕಿ ಶೈಲಜಾ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here