ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಸಂಜೀವಿನಿ ಕಾರ್ಯಕ್ರಮ

0

ಪುತ್ತೂರು: ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾನುಗತವಾಗಿ ಗಿಡಮೂಲಿಕೆಯ ಉಪಚಾರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಆಧುನಿಕ ವೈದ್ಯ ಪದ್ಧತಿಯ ಪ್ರಭಾವ ಮತ್ತು ವಿದೇಶಿ ಸಂಸ್ಕೃತಿಯ ಪ್ರವೇಶದಿಂದಾಗಿ ಸಾಂಪ್ರದಾಯಿಕ ಔಷಧೀಯ ವ್ಯವಸ್ಥೆ ಅವನತಿಯ ಭೀತಿ ಎದುರಿಸುತ್ತಿದ್ದು, ಇದರೊಂದಿಗೆ ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದ ಗಿಡಮೂಲಿಕೆಗಳೂ ನಶಿಸಿ ಹೋಗುತ್ತಿವೆ. ಈ ನಿಟ್ಟಿನಲ್ಲಿ ಔಷಧೀಯ ಸಸ್ಯ ಸಂಕುಲದ ಸಂರಕ್ಷಣೆಯ ಉದ್ದೇಶದ ಜಾಗೃತಿ ಮೂಡಿಸುವ ಸಲುವಾಗಿ ವಿವೇಕ ಸಂಜೀವಿನಿ-ಗಿಡ ಮಾಡುವ ಹಬ್ಬವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಕೈಗೊಂಡಿರುವುದು ಶ್ಲಾಘನೀಯ ಎಂದು ಅಡಿಕೆ ಪತ್ರಿಕೆ ಸಂಪಾದಕ ನಾ ಕಾರಂತ ಪೆರಾಜೆ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಜೂ.22 ರಂದು ಆಯೋಜಿಸಲಾದ ಗಿಡ ಮಾಡುವ ಹಬ್ಬ ವಿವೇಕ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು ಸಸ್ಯಗಳು ನಮ್ಮ ಜೀವನದ ಸಮತೋಲನವನ್ನು ಮತ್ತು ಪ್ರಕೃತಿಯ ಸಮತೋಲನವನ್ನು ಕಾಪಾಡುತ್ತವೆ. ಪ್ರಕೃತಿಯ ಸೌಂದರ್ಯದ ನೋಟವು ಮರಗಳು ಮತ್ತು ಸಸ್ಯಗಳಿಂದ ಮಾತ್ರ ಸಿಗುತ್ತದೆ. ಮರಗಳು ಮತ್ತು ಸಸ್ಯಗಳ ಅನುಪಸ್ಥಿತಿಯಲ್ಲಿ ಪ್ರಕೃತಿ ಅಸ್ತಿತ್ವದಲ್ಲಿಲ್ಲ. ಪ್ರಕೃತಿ ನಮಗೆ ಅನೇಕ ಉಡುಗೊರೆಗಳನ್ನು ನೀಡುತ್ತದೆ, ಅದು ಯಾವಾಗಲೂ ಜೀವನದಲ್ಲಿ ನಮಗೆ ಸಹಾಯ ಮಾಡುತ್ತದೆ. ಅವುಗಳಲ್ಲಿ, ಮರಗಳು ಮತ್ತು ಸಸ್ಯಗಳು ಮುಖ್ಯವಾದವು, ಇದು ವ್ಯಕ್ತಿಯ ಜೀವನವನ್ನು ಕಾಪಾಡಿಕೊಳ್ಳುತ್ತದೆ. ಮಾನವ ತನ್ನ ಜೀವನದ ಸ್ವಾರ್ಥವನ್ನು ಪೂರೈಸಲು ಮತ್ತು ತಮ್ಮ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಮರಗಳು ಮತ್ತು ಗಿಡಗಳನ್ನು ನಾಶಪಡಿಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಬಿಕ್ಕಟ್ಟಿನ ರೂಪದಲ್ಲಿ ಬರಲಿದೆ. ಇಂತಹ ಸಂದರ್ಭದಲ್ಲಿ ಈ ಆಂದೋಲನ ನಿಜಕ್ಕೂ ಶ್ಲಾಘನೀಯವಾದುದು. ಪ್ರತಿಯೊಬ್ಬರು ಕನಿಷ್ಟ 10 ಗಿಡಗಳನ್ನು ಬೆಳೆಸಿ ಪೋಷಿಸಿದಾಗ ಈ ಕಾರ್ಯಕ್ರಮವು ಯಶಸ್ವಿಯಾಗಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಿವೃತ್ತ ವಿಜ್ಞಾನಿ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಕೆ.ಎನ್ ಸುಬ್ರಹ್ಮಣ್ಯ ಭಟ್ ಮಾತನಾಡಿ ನಾವೆಲ್ಲರೂ ಉಸಿರಾಡಲು ಅಗತ್ಯವಿರುವ ಸಸ್ಯ ಸಂಪತ್ತನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಿದೆ. ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಅಡುಗೆ ಮತ್ತು ಆಹಾರ ಪದ್ಧತಿಗಳೇ ಹಲವಾರು ರೋಗಗಳಿಗೆ ಉಪಶಮನವಾಗಿದ್ದವು. ಆದರೆ ಇಂದು ಆಧುನಿಕ ವೈದ್ಯ ಪದ್ಧತಿ ಮೊರೆಹೋಗಿ ಇದೆಲ್ಲವನ್ನು ಮರೆತಿರುವುದು ದೊಡ್ಡ ದುರಂತವೆ ಸರಿ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಔಷಧೀಯ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ರೂಢಿಸಿಕೊಳ್ಳಲು ಜಾಗೃತಿಯನ್ನು ಮೂಡಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಇಂದಿರಾ, ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ. ಶ್ರುತಿ ಸ್ವಾಗತಿಸಿ, ಅನುಪಮಾ ಶೇಟ್ ವಂದಿಸಿದರು. ಉಪನ್ಯಾಸಕ ಮುರಳಿ ಪಿ.ಜಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here