ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಆಶ್ರಯದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ ಎಂಬ ವಿಷಯದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಜೂ.26ರಂದು ನಡೆಯಿತು.
ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ವಸಂತಕುಮಾರ್ ತಾಳ್ತಜೆ ಉಪನ್ಯಾಸ ನೀಡಿ, ಯುವ ಜನಾಂಗಕ್ಕೆ ಸದೃಢವಾದ ರಾಷ್ಟ್ರ ನಿರ್ಮಾಣದ ಮಹತ್ತರವಾದ ಜವಾಬ್ದಾರಿ ಇದೆ. ವಿದ್ಯಾರ್ಥಿಗಳೆಲ್ಲರೂ ಕೂಡ ತಮ್ಮತನದ ಅರಿವನ್ನ ಮಾಡಿಕೊಳ್ಳಬೇಕು. ಪ್ರಾದೇಶಿಕವಾಗಿ ಇರುವಂತಹ ಸಂಸ್ಕೃತಿಯ ಅನುಷ್ಠಾನವೇ ರಾಷ್ಟ್ರ ನಿರ್ಮಾಣಕ್ಕೆ ಬುನಾದಿಯಾಗಿದೆ. ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಕಡೆಗಣನೆ ಮಾಡದೆ ಅವುಗಳನ್ನು ಆಚರಣೆಗೆ ತಂದರೆ ಮೂಲ ಬೇರುಗಳಿಂದಲೇ ರಾಷ್ಟ್ರವೆಂಬ ಮರ ಸದೃಢವಾಗುವುದು. ಇಂತಹ ಮಹತ್ತರವಾದ ಜವಾಬ್ದಾರಿಯನ್ನ ಹೊತ್ತುಕೊಂಡು ಮುನ್ನಡೆಯಬೇಕಾದ ಕೆಲಸ ಯುವಕರಿಂದ ಆಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ, ಹೈಸ್ಕೂಲ್ ವಿಭಾಗದ ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕಿ ನಿಶ್ಚಿತ ಸ್ವಾಗತಿಸಿದರು. ಪ್ರಾಂಶುಪಾಲ ಚಂದ್ರಶೇಖರ್ ಕೆ ವಂದಿಸಿದರು. ಕಾಲೇಜಿನ ಉಪನ್ಯಾಸಕ ಚೇತನ್ ಎಂ. ಕಾರ್ಯಕ್ರಮ ನಿರೂಪಿಸಿದರು.