ಬೆಂಗಳೂರು: ಮೊದಲ ಬಾರಿಗೆ ಚುನಾಯಿತರಾಗಿರುವ ರಾಜ್ಯದ 70 ಶಾಸಕರಿಗೆ ಸಂಸದೀಯ ಕಲಾಪದ ಬಗ್ಗೆ ಅರಿವು ಮೂಡಿಸಲು ಮೂರು ದಿನಗಳ ಕಾಲ ತರಬೇತಿ ಶಿಬಿರ ನೆಲಮಂಗಲದ ಧರ್ಮಸ್ಥಳ ಕ್ಷೇಮವನದಲ್ಲಿ ನಡೆದಿದ್ದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗಿಯಾದರು.
ನೆಲಮಂಗಲದ ಎಸ್ಡಿಎಂ ಇನ್ಸ್ಟಿಟ್ಯೂಟ್ ಆ- ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸಸ್ ಕ್ಷೇಮವನದಲ್ಲಿ ಆಯೋಜಿಸಲಾಗಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾತನಾಡಿ ಸದನದಲ್ಲಿ ಸದಾ ಹಾಜರಿ, ಪೂರ್ವತಯಾರಿ, ಭಾಷೆ ಮೇಲೆ ಹಿಡಿತ, ಜನಪರ ವಿಷಯದ ಮಂಡನೆ, ವಿಷಯ ತಜ್ಞರ ಜತೆ ಚರ್ಚೆ, ಅಧ್ಯಯನಶೀಲತೆ, ಜನರ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕ ಕಾಳಜಿ, ಜನರ ಬಗ್ಗೆ ಗೌರವ, ಸಂವಿಧಾನದ 51ನೇ ವಿಧಿವರೆಗಿನ ಅರಿವು, ಸದನದ ನಿಯಮಗಳ ಮಾಹಿತಿ ಮತ್ತು ಸಂವಿಧಾನಕ್ಕೆ ಬದ್ಧತೆ ಮುಂತಾದ ಅಂಶಗಳನ್ನು ರೂಡಿಸಿಕೊಂಡು ಉತ್ತಮ ಸಂಸದೀಯ ಪಟುಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಸದನ ನಡೆಸುವ ನಿಯಮಾವಳಿಗಳನ್ನು ಓದಬೇಕು. ಇಲ್ಲವಾದರೆ ಏನು ಪ್ರಶ್ನೆ ಕೇಳಬೇಕು, ಯಾವ ನಿಯಮದಡಿ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ನಾವು ಏನೇ ಕಾನೂನು, ತಿದ್ದುಪಡಿ ಮಾಡಿದರೂ ಅದು ಸಂವಿಧಾನದ ಆಶಯಕ್ಕೆ ಬದ್ಧವಾಗಿರಲೇಬೇಕು. ಆದ್ದರಿಂದ ಸಂವಿಧಾನದ ಅರಿವು ಇರಬೇಕು. ಜನರಿಗೆ ಪೂರಕವಾದ ಕಾನೂನು ರೂಪಿಸುವ ಸಿದ್ಧತೆ ಮತ್ತು ಬದ್ಧತೆ ಹೊಂದಿರಬೇಕು ಎಂದು ಹೇಳಿದ ಸಿಎಂ, ಬಜೆಟ್ ಅನ್ನು ಅರ್ಥಮಾಡಿಕೊಳ್ಳುವ ಶಕ್ತಿ ರೂಡಿಸಿಕೊಳ್ಳಿ. ಗ್ರಂಥಾಲಯ ಬಳಸಿಕೊಳ್ಳಿ. ಕಲಾಪ ನಡೆಯುವ ದಿನಗಳಲ್ಲಿ ಬೇರೆ ಯಾವುದೇ ಕಾರ್ಯಕ್ರಮ, ಭೇಟಿಗಳನ್ನು ಇಟ್ಟುಕೊಳ್ಳಬೇಡಿ. ಕೋರ್ಟ್ ನಿಮ್ಮನ್ನು ಪ್ರಶ್ನೆ ಮಾಡದಿರಬಹುದು. ಆದರೆ ಜನತಾ ಕೋರ್ಟ್ ಪ್ರಶ್ನೆ ಮಾಡುತ್ತದೆ ಎಂದರು.
ಕಾನೂನು ಮತ್ತು ಸಂಸದೀಯ ಸಚಿವ ಎಚ್. ಕೆ. ಪಾಟೀಲ್ ಮಾತನಾಡಿ, ಶಾಸಕರು ಗೌರವಯುತ ಮತ್ತು ಗಂಭೀರ ನಡವಳಿಕೆ ರೂಡಿಸಿಕೊಂಡಾಗ ಜನರು ಮತ್ತು ಅಧಿಕಾರಿಗಳು ಗೌರವಿಸುತ್ತಾರೆ. ಸದನ ಎಂಬುದು ಸಂತೆಯಲ್ಲ ಎಂಬುದನ್ನು ಅರಿತು ಗೌರವಯುತವಾಗಿ ವರ್ತಿಸಿ. ನೀವು ವರ್ಗಾವಣೆ ಕಡತ ಹಿಡಿದುಕೊಂಡು ಕಾರ್ಯದರ್ಶಿ ಹತ್ತಿರ ಹೋದರೆ ನಿಮ್ಮ ಗಂಭೀರತೆ ಕಡಿಮೆ ಆಗುತ್ತದೆ ಎಂದು ಕಿವಿಮಾತು ಹೇಳಿದರು. ಸ್ಪೀಕರ್ ಯು.ಟಿ ಖಾದರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವರು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
13 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೀರಿ, 4 ಬಾರಿ ಸೋತಿದ್ದೀರಿ ಆದರೂ ಗೆದ್ದು ಮತ್ತೆ ಸಿಎಂ ಆಗಿದ್ದೀರಿ-ಇದೆಲ್ಲ ಹೇಗೆ ಸಾಧ್ಯವಾಯಿತು? ಸಿಎಂಗೆ ಶಾಸಕ ಅಶೋಕ್ ಕುಮಾರ್ ರೈ ಪ್ರಶ್ನೆ:
ನೀವು ವಿಧಾನಸಭಾ ಚುನಾವಣೆಯಲ್ಲಿ 13 ಬಾರಿ ಸ್ಪರ್ಧೆ ಮಾಡಿದ್ದೀರಿ.ಇದರಲ್ಲಿ ನಾಲ್ಕು ಬಾರಿ ಸೋತಿದ್ದೀರಿ.ಆದರೂ ಮತ್ತೆ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಿದ್ದೀರಿ. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಶಾಸಕ ಅಶೋಕ್ ಕುಮಾರ್ ರೈ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದರು.
ನೂತನ ಶಾಸಕರಿಗೆ ತರಬೇತಿ ಕಾರ್ಯಕ್ರಮದ ಕೊನೆಯ ದಿನವಾದ ಜೂ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ನೂತನ ಶಾಸಕರ ಜೊತೆ ಒಂದಷ್ಟು ಸಮಯವನ್ನು ಕಳೆದರು.ನೂತನ ಶಾಸಕರು ವಿವಿಧ ಪ್ರಶ್ನೆಗಳನ್ನು ಸಿ.ಎಂ ಬಳಿ ಕೇಳಿದ್ದಾರೆ. ಸಿದ್ದರಾಮಯ್ಯ ಅವರ ಬಳಿ, ಅವರ ವೈಯುಕ್ತಿಕ ಪ್ರಶ್ನೆಯನ್ನು ಕೇಳಲು ಕೂಡಾ ನೂತನ ಶಾಸಕರಿಗೆ ಅವಕಾಶ ನೀಡಲಾಗಿತ್ತು.ಈ ವೇಳೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ, ‘ನೀವು ವಿಧಾನಸಭಾ ಚುನಾವಣೆಯಲ್ಲಿ 13 ಬಾರಿ ಸ್ಪರ್ಧೆ ಮಾಡಿದ್ದೀರಿ, ನಾಲ್ಕು ಬಾರಿ ಸೋತಿದ್ದೀರಿ. ಆದರೂ ಮತ್ತೆ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಿದ್ದೀರಿ ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.
ಅಶೋಕ್ ಕುಮಾರ್ ರೈ ಅವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಜನರ ನಡುವೆ ಇದ್ದಾಗ, ಜನರ ಕಷ್ಟಸುಖಗಳಿಗೆ ಸ್ಪಂದಿಸಿದಾಗ, ಜನರ ದ್ವನಿಯಾಗಿ ಕೆಲಸ ಮಾಡಿದಾಗ ರೂಲಿಂಗ್ ಪಾರ್ಟಿ ಇರಲಿ, ವಿರೋಧ ಪಕ್ಷದಲ್ಲೇ ಇರಲಿ ನಿಮ್ಮನ್ನು ಜನ ಯಾವತ್ತೂ ಕೈ ಬಿಡಲ್ಲ.ಕೆಲವು ಸಾರಿ ನಮ್ಮ ತಪ್ಪುಗಳಿಂದ ಸೋತಿರುತ್ತೇವೆ, ಕೆಲವು ಬಾರಿ ಜನರಿಗೆ ನಮ್ಮ ಮೇಲೆ ಬೇಸರವಾಗಿರುತ್ತದೆ ಅದಕ್ಕೆ ಸೋತಿರುತ್ತೇವೆ.ಸೋಲಲಿ, ಗೆಲ್ಲಲಿ ಆದರೆ ಜನ ಮಾತ್ರ ನಮ್ಮ ಜೊತೆ ಇರ್ತಾರೆ, ನನ್ನ ಜೊತೆಗೂ ಇದ್ದಾರೆ. ಇದು ನನ್ನ ಕೊನೇ ಚುನಾವಣೆ ಆ ಬಳಿಕವೂ ನಾನು ಜನರ ಜೊತೆನೇ ಇರ್ತೀನಿ, ಸಕ್ರಿಯ ರಾಜಕಾರಣದಲ್ಲಿ ಇರ್ತೀನಿ, ಜನರ ದ್ವನಿಯಾಗಿ ಕೆಲಸ ಮಾಡಲು ಶಾಸಕನೇ ಆಗಿರಬೇಕೆಂದಿಲ್ಲ ಎಂದು ಹೇಳಿದರು.
ತಮಗೆ ತುಂಬ ತೃಪ್ತಿಕೊಟ್ಟ ಪಕ್ಷ ಜೆಡಿಎಸ್ಸೋ? ಕಾಂಗ್ರೆಸ್ಸೋ? ಸಿಎಂಗೆ ಭಾಗೀರಥಿ ಮುರುಳ್ಯ ಪ್ರಶ್ನೆ:
ಶಾಸಕರ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು,‘ಸರ್ ನೀವು ಹಿರಿಯರು ಕೇಳಬಾರದು.ಆದರೂ ವೈಯಕ್ತಿಕ ಪ್ರಶ್ನೆ ಕೇಳಲು ಹೇಳಿದ್ದೀರಿ.ತಮಗೆ ಅತ್ಯಂತ ತೃಪ್ತಿಕೊಟ್ಟ ಪಕ್ಷ ಜೆಡಿಎಸ್ಸೋ?ಕಾಂಗ್ರೆಸ್ಸೋ? ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಪ್ರಶ್ನೆ ಕೇಳಿ ಗಮನ ಸೆಳೆದರು.
ಶಾಸಕರ ತರಬೇತಿ ಕಾರ್ಯಗಾರದ ಉದ್ಘಾಟನೆ ಬಳಿಕ ಆಯೋಜನೆಗೊಂಡಿದ್ದ ಸಂವಾದದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಎಂ.ಸಿದ್ಧರಾಮಯ್ಯ,‘ ನನಗೆ ಸಂವಿಧಾನ ಏನು ಹೇಳುತ್ತದೆ ಅದು ನನಗೆ ಬಹಳ ಖುಷಿಕೊಟ್ಟ ಪುಸ್ತಕ. ಸಂವಿಧಾನವೇ ನಮಗೆ ಗುರು ಗೊತ್ತಾಯ್ತಾ. ಹಾಗಾಗಿ ಸಂವಿಧಾನದ ರೀತಿಯಲ್ಲಿ ಯಾವ ಪಕ್ಷ ನಡೆದುಕೊಳ್ತದೆ ಆ ಪಕ್ಷದಲ್ಲಿ ತೃಪ್ತಿ ಸಿಕ್ಕಿದೆ’ ಎಂದರು.
ಜನರ ಧ್ವನಿಯಾಗಿ ಕೆಲಸ ಮಾಡಿದರೆ ಮಾತ್ರ ರಾಜಕಾರಣದಲ್ಲಿ ಉಳಿದು ಮುಂದಿನ ಚುನಾವಣೆಯನ್ನು ಗೆಲ್ಲಲು ಸಾಧ್ಯ. ಜನಪರ ಕಾಳಜಿ ಇಲ್ಲದವರು ಒಂದು ಚುನಾವಣೆ ಮಾತ್ರ ಗೆಲ್ಲಬಹುದು. ಜನಸೇವೆಗಾಗಿ ರಾಜಕಾರಣ ಮಾಡುವವರನ್ನು ಮತದಾರರು ಕೈ ಬಿಡುವುದಿಲ್ಲ.-ಸಿದ್ಧರಾಮಯ್ಯ, ಮುಖ್ಯಮಂತ್ರಿ