ಜೂ.30ಕ್ಕೆ ಸನ್ಮಾನ – ನೂತನ ಕೊಠಡಿ ಲೋಕಾರ್ಪಣೆ- ವಿದ್ಯಾರ್ಥಿಗಳಿಗೆ ಅಭಿನಂದನೆ
ಪುತ್ತೂರು: ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯಲ್ಲಿ ಸತತ 8 ವರ್ಷಗಳು ಶೇ.100 ಪಲಿತಾಂಶ ತರುವಲ್ಲಿ ಪ್ರಮುಖ ಪಾತ್ರ ವಹಿಸಿದಲ್ಲದೆ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ತನ್ನನ್ನು ತಾನು ತೊಡಗಿಸಿಕೊಂಡ ಶಾಲಾ ಮುಖ್ಯಗುರು ನಾರಾಯಣ ಕೆ ಅವರು ಜೂ.30ರಂದು ನಿವೃತ್ತಿಹೊಂದಲಿದ್ದು, ಅದೇ ದಿನ ಅವರಿಗೆ ಸನ್ಮಾನ ಕಾರ್ಯಕ್ರಮ ಮತ್ತು ನೂತನ ಕೊಠಡಿ ಲೋಕಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ ಎಂದು ನಾರಾಯಣ ಸರ್ ಅಭಿನಂದನಾ ಸಮಿತಿ ಸಂಚಾಲಕ ಚಿದಾನಂದ ಬೈಲಾಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾರಾಯಣ ಕೆ ಅವರು ತಮ್ಮ ಪ್ರಯತ್ನದಿಂದ ಶಾಲೆಯ ಚಿತ್ರಣವನ್ನು ಬದಲಾಯಿಸಿದ್ದಾರೆ. ದಾನಿಗಳ ಮೂಲಕ ರೂ. 14ಲಕ್ಷ ಸಂಗ್ರಹಿಸಿ ಸಭಾಭವನ, ಇತರ ಇಲಾಖೆ, ಸರಕಾರದಿಂದ ರೂ. 50 ಲಕ್ಷ ಅನುದಾನದ ಮೂಲಕ ಇತರ ಕಟ್ಟಡಗಳನ್ನು ಮಾಡಿಸಿಕೊಂಡು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಕಳೆದ 8 ವರ್ಷಗಳಿಂದ ಶೇ.100 ಫಲಿತಾಂಶವನ್ನು ತರುವಲ್ಲಿ ನಿರಂತರ ಪ್ರಯತ್ನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ನಿವೃತ್ತಿಯ ದಿನದಂದು ಅವರಿಗೆ ಶಾಲಾ ಮತ್ತು ಸಾರ್ವಜನಿಕರಿಂದ ಸನ್ಮಾನ ಸಮಾಂರಭವನ್ನು ಶಾಲೆಯ ’ಉತ್ತುಂಗ’ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ವಿವೇಕಾ ಶಾಲಾ ಯೋಜನೆಯಲ್ಲಿ ನಿರ್ಮಾಣಗೊಂಡ ನೂತನ ಎರಡು ಕೊಠಡಿಗಳ ಲೋಕಾರ್ಪಣೆ ಮತ್ತು ಸೆಲ್ಕೋ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಪಲಿತಾಂಶಕ್ಕೆ ಕಾರಣಕರ್ತರಾದ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಗುವುದು. ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ಪವಿತ್ರ ಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಮಾಜಿ ಶಾಸಕ ಸಂಜೀವ ಮಠಂದೂರು, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗ್ರಾ.ಪಂ ಸದಸ್ಯ ಪ್ರಕಾಶ್ ರೈ, ಉಮಾವತಿ ಎಸ್ ಮಣಿಯಾಣಿ, ವಿದ್ಯಾ ಸುರೇಶ್, ಗೋಪಾಲ ಬೈಲಾಡಿ, ಶಾಲಾಭಿವೃದ್ಧಿ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಸೀತಾರಾಮ ರೈ ಕೈಕಾರ, ಸೆಲ್ಕೋ ಸೋಲಾರ್‌ನ ಪ್ರಸಾದ್, ವಿಷ್ಣು ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಗೌರವ ಉಪಸ್ಥಿತಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ಮನಮೋಹನ್ ರೈ, ಉಪಾಧ್ಯಕ್ಷ ಕೃಷ್ಣಪ್ರಸಾದ್ ಅಳ್ವ, ಗ್ರಾ.ಪಂ ಸದಸ್ಯ ಪ್ರಕಾಶ್ ರೈ, ಪ್ರಭಾರ ಮುಖ್ಯಗುರು ರಾಮಚಂದ್ರ ಉಪಸ್ಥಿತರಿದ್ದರು.