ಒತ್ತಾಯ ಮಾಡುವುದು ಕಾಂಗ್ರೆಸ್ಗೆ ಆದರೆ ಒತ್ತುವುದು ಬಿಜೆಪಿಗೆ: ಅಶೋಕ್ ರೈ
ಪುತ್ತೂರು: ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ನೋಂದಣಿ ಮಾಡಿಸಿದವರ ಪೈಕಿ ದ ಕ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ಜನರಿಗೆ ಕಾಂಗ್ರೆಸ್ ಬೇಕು ಆದರೆ ಕಾಂಗ್ರೆಸ್ಗೆ ಬೆಂಬಲ ನೀಡುವುದಿಲ್ಲ, ಅಭಿವೃದ್ದಿ ಕೆಲಸಗಳು ಆಗಬೇಕು ಎಂದು ಕಾಂಗ್ರೆಸ್ನವರಲ್ಲಿ ಒತ್ತಾಯ ಮಾಡುತ್ತಾರೆ ಆದರೆ ಚುನಾವಣೆಯಲ್ಲಿ ಒತ್ತುವುದು ಬಿಜೆಪಿಗೆ, ಈ ಪರಿಸ್ಥಿತಿ ಬದಲಾಗಬೇಕು, ಬುದ್ದಿವಂತ ಜಿಲ್ಲೆಯ ಜನರು ಕಾಂಗ್ರೆಸ್ ಬೆಂಬಲಿಸುವ ಮೂಲಕ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಶಾಸಕರಾದ ಅಶೋಕ್ ರೈ ಮನವಿ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಕಾಂಗ್ರೆಸ್ ಶಾಸಕರಿದ್ದಲ್ಲಿ ಮಾತ್ರ ಸಾರ್ವಜನಿಕರ ಕೆಲಸ ಆಗುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಹಿಂದುತ್ವ ಎಂದು ಹೇಳಿಕೊಂಡು ಬಿಜೆಪಿಗೆ ಮತ ಹಾಕುತ್ತಾರೆ. ನಮ್ಮದು ಪ್ರೀತಿಯ ಹಿಂದುತ್ವ, ದ್ವೇಷದ ಹಿಂದುತ್ವ ನಮ್ಮಲ್ಲಿಲ್ಲ ಎಂದು ಹೇಳಿದರು. ಕಾಂಗ್ರೆಸ್ನ ಉಚಿತ ಯೋಜನೆಯನ್ನು ಹಿಯ್ಯಾಳಿಸಿದವರೇ ಇಂದು ಅದನ್ನು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ, ಸರಕಾರದ ಯೋಜನೆ ಎಲ್ಲರಿಗೂ ಕೊಡುತ್ತೇವೆ. ಕಾಂಗ್ರೆಸ್ನಲ್ಲಿ ಪಕ್ಷ, ಜಾತಿ, ಧರ್ಮದ ಭೇದವಿಲ್ಲ ಎಲ್ಲರಿಗೂ ಸಮಾನ ನ್ಯಾಯ, ನಾವು ರಾಜಧರ್ಮ ಪಾಲಿಸುವರಾಗಿದ್ದೇವೆ ಎಂದು ಶಾಸಕರು ಹೇಳಿದರು.
15 ವರ್ಷಗಳಿಂದ ಪ್ಲಾಟಿಂಗ್ ಆಗಿಲ್ಲ
ಪುತ್ತೂರಿನಲ್ಲಿ ಕಳೆದ 15 ವರ್ಷಗಳಿಂದ ಪ್ಲಾಟಿಂಗ್ ಆಗಿಲ್ಲ. ಪ್ಲಾಟಿಂಗ್ ಆಗದ ಕಾರಣ ಜನ ತುಂಬಾ ಸಂಕಷ್ಟದಲ್ಲಿದ್ದಾರೆ. ನನ್ನ ಬಳಿ ಅನೇಕ ಮಂದಿ ಸಮಸ್ಯೆಯ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಪುತ್ತೂರಲ್ಲಿ ಬಿಜೆಪಿ ಶಾಸಕರಿದ್ದರು, ಬಿಜೆಪಿ ಸರಕಾರವಿತ್ತು ಅವರು ಪ್ಲಾಟಿಂಗ್ ಸಮಸ್ಯೆಯ ಬಗ್ಗೆ ಮಾತನಾಡಿಲ್ಲ, ಜನರ ನೋವಿಗೆ ಸ್ಪಂದನೆ ಮಾಡಿಲ್ಲ ಎಂದು ಹೇಳಿದ ಶಾಸಕರು ಜನ ಪ್ರಶ್ನಿಸುವ ಮೂಲಕ ಅವರಿಂದಲೇ ಮಾಡಿಸಬಹುದಿತ್ತು ಅವರು ಆ ಕೆಲಸವನ್ನು ಮಾಡುವುದಿಲ್ಲ ಎಂದು ಗೊತ್ತಿದ್ದರೂ ಅವರಿಗೆ, ಅವರ ಪಕ್ಷಕ್ಕೆ ಬೆಂಬಲ ಕೊಡುತ್ತಿದ್ದಾರೆ ಇದು ಯಾಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಮುಂದಿನ ಮೂರು ತಿಂಗಳೊಳಗೆ ಪ್ಲಾಟಿಂಗ್ ಸಮಸ್ಯೆಗೆ ಇತಿಶ್ರೀ ಹಾಡಲಿದ್ದೇನೆ, ನಿಮ್ಮ ಜಾಗವನ್ನು ಪ್ಲಾಟಿಂಗ್ ಮಾಡಿಸಿ ನಿಮ್ಮ ಮನೆ ಬಾಗಿಲಿಗೆ ಆರ್ಟಿಸಿ ತಲುಪಿಸುವ ಕೆಲಸವನ್ನು ಮಾಡುತ್ತೇನೆ. ಕಾಂಗ್ರೆಸ್ ಜನಪರವಾದ ಕೆಲಸವನ್ನೇ ಮಾಡುತ್ತದೆ ಎಂದು ಹೇಳಿದರು.
ತಾಪಂ,ಜಿಪಂ ಚುನಾವಣೆಗೆ ಸಿದ್ದರಾಗಿ
ಮುಂದೆ ಬರುವ ತಾಪಂ ಹಾಗೂ ಜಿಪಂ ಚುನಾವಣೆಗೆ ಕಾರ್ಯಕರ್ತರು ಈಗಲೇ ಸಿದ್ದವಾಗಬೇಕು. ಸರಕಾರದ ಯೋಜನೆಗಳನ್ನು ಮನೆ ಬಾಗಲಿಗೆ ತಲುಪಿಸಿ ಅವರನ್ನು ಪಕ್ಷದತ್ತ ಬರಮಾಡಿಕೊಳ್ಳಿ. ಸರಕಾರದ ಯೋಜನೆಯ ಲಾಭಪಡೆದ ಬೇರೆ ಪಕ್ಷದ ಕಾರ್ಯಕರ್ತರನ್ನು ಜೊತೆಯಾಗಿ ಸೇರಿಸಿಕೊಳ್ಳಿ, ಯಾವ ಪಕ್ಷದವರನ್ನೂ ದೂರ ಮಾಡಬೇಡಿ, ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ಕೆಲಸ ಮಾಡಿ ಮುಂದೆ ನಿರಂತರವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರಬೇಕು, ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಆಗ ಮಾತ್ರ ದೇಶದಲ್ಲಿ ಜನ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಹೇಳಿದರು.
ಶಾಸಕರ ಬಗ್ಗೆ ಉತ್ತಮ ಅಭಿಪ್ರಾಯವಿದೆ: ಹೇಮನಾಥ ಶೆಟ್ಟಿ
ಶಾಸಕ ಅಶೋಕ್ ರೈಯವರ ಕಾರ್ಯವೈಖರಿ ಸಾರ್ವಜನಿಕರಿಗೆ ಅತ್ಯಂತ ಪ್ರಿಯವಾಗಿದೆ. ಭ್ರಷ್ಟಾಚಾರ ಮುಕ್ತ ಪುತ್ತೂರಾಗಿ ಪರಿವರ್ತನೆ ಮಾಡುವಲ್ಲಿ ಶಾಸಕರು ವಹಿಸುತ್ತಿರುವ ಮುತುವರ್ಜಿ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಕಾಂಗ್ರೆಸ್ ಬಂದರೆ ಮಾತ್ರ ನಮ್ಮ ಕೆಲಸಗಳು ಆಗುತ್ತದೆ, ಬೇಡಿಕೆಗಳು ಈಡೇರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ ಆದ್ದರಿಂದಲೇ ಪುತ್ತೂರಿನ ಜನ, ರಾಜ್ಯದ ಜನತೆ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಈ ಬಾರಿಯ ಚುನಾವಬಣೆಯಲ್ಲಿ ನಿರೀಕ್ಷಿತ ಮತಗಳು ಸಿಗದೇ ಇದ್ದರೂ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಅವಿರತ ಶ್ರಮದಿಂದ ನಮಗೆ ಗೆಲುವು ಸಾಧ್ಯವಾಗಿದೆ. ಮುಂದಿನ 25 ವರ್ಷಗಳ ಕಾಲ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಇರಬೇಕು. ಆ ರೀತಿಯ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ರೈ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಮತ್ತು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ ಬಿ ವಿಶ್ವನಾಥ ರೈಯವರನ್ನು ಸನ್ಮಾನಿಸಲಾಯಿತು.
5 ವರ್ಷ ಪುತ್ತೂರಿನಲ್ಲಿ ಕಮಿಷನ್ ದಂದೆಯೇ ನಡೆದದ್ದು: ಎಂ ಬಿ
ಪುತ್ತೂರಿನಲ್ಲಿ ಕಳೆದ ಐದು ವರ್ಷ ಕಮಿಷನ್ ದಂಧೆಯೇ ನಡೆದಿದೆ ವಿನಾ ಅಭಿವೃದ್ದಿ ಕೆಲಸಗಳು ನಡೆದಿಲ್ಲ, ಎಲ್ಲೆಲ್ಲಾ ಬಾಚುವುದಕ್ಕೆ ಸಾಧ್ಯವೋ ಅಲ್ಲೆಲ್ಲಾ ಬಾಚಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಅರೋಪ ಮಾಡಿದರು.
ಪುತ್ತೂರಿನಲ್ಲಿ ಕಾಂಗ್ರೆಸ್ ಬರಬೇಕು ಎಂಬುದು ಕಾರ್ಯಕರ್ತರ ಬೇಡಿಕೆಯಾಗಿತ್ತು. ಕಳೆದ ಐದು ವರ್ಷ ನಮ್ಮ ಕಾರ್ಯಕರ್ತರು ಅನೇಕ ನೋವು, ಯಾತನೆಗಳನ್ನು ಅನುಭವಿಸಿದ್ದಾರೆ. ಅವರಿಗೆಲ್ಲಾ ಈ ಬಾರಿ ನ್ಯಾಯ ಸಿಕ್ಕಿದೆ. ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾದರೆ ನಾವು ಯಾರೂ ಸಹಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಯಾರೇ ಬಂದರೂ ನಮ್ಮ ಪಕ್ಷದ ಕಾರ್ಯಕರ್ತರ ಕೆಲಸ ಆಗಬೇಕು ಎಂದು ಹೇಳಿದರು. ಶಾಸಕರು ಕೆಲಸದ ಒತ್ತಡದಿಂದ ಕೆಲವೊಮ್ಮೆ ಕಾರ್ಯಕರ್ತರ ಫೋನ್ ಸ್ವೀಕರಿಸುವುದಿಲ್ಲ ಇದನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ. ಸರಕಾರ ಬಂದು ಒಂದು ತಿಂಗಳು ಮಾತ್ರ ಕಳೆದಿದೆ ಶಾಸಕರಿಗೆ ಉಡುಪಿ ಮತ್ತು ದ ಕ ಎರಡೂ ಜಿಲ್ಲೆಯ ಕೆಲವೊಂದು ಕೆಲಸಗಳನ್ನು ಹೆಚ್ಚುವರಿಯಾಗಿ ಮಾಡಬೇಕಾಗುತ್ತದೆ. ಉಬಯ ಜಿಲ್ಲೆಗಳಲ್ಲಿ ಏಕೈಕ ಶಾಸಕರಿರುವ ಕಾರಣ ಕೆಲಸದ ಒತ್ತಡ ತುಂಬಾ ಇದ್ದು ಕಾರ್ಯಕರ್ತರು ತಾಳ್ಮೆಯಿಂದ ಇರಬೇಕಾಗುತ್ತದೆ. ಯಾವುದೇ ಕಾರ್ಯಕರ್ತರಿಗೆ ಅನ್ಯಾಯವಾದರೂ ಶಾಸಕರು ಕಾರ್ಯಕರ್ತರ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಮಾಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಬಲ್ಯಾಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅರಿಯಡ್ಕ ಗ್ರಾಪಂ ಸದಸ್ಯರುಗಳಾದ ದಿವ್ಯನಾಥ ಶೆಟ್ಟಿ ಕಾವು, ಸಲ್ಮಾ, ಜಯಂತಿಪಟ್ಟುಮುಲೆ, ಮೋನಪ್ಪ ಪೂಜಾರಿ ಕೆರೆಮಾರು, ಶಂಕರ್, ಅಬ್ದುಲ್ ರಹಿಮಾನ್, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಮೋಹನ್ ದಾಸ್ ಶೆಟ್ಟಿ, ಲಯನ್ಸ್ ಮಾಜಿ ಅದ್ಯಕ್ಷ ಪವನ್ರಾಮ್, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್, ಜಯಪ್ರಕಾಶ್ ರೈ ನೂಜಿ, ಅಮ್ಮು ರೈ, ಕಾಂಗ್ರೆಸ್ ಉಸ್ತುವಾರಿ ಮಹೇಶ್ ರೈ ಅಂಕೊತ್ತಿಮಾರ್, ಮಾಜಿ ಗ್ರಾಪಂ ಸದಸ್ಯ ಗೋಪಾಲ ಪಾಟಾಳಿ, ಗಂಗಾದರ್ ಪಟ್ಟುಮೂಲೆ, ರವಿಪೂಜಾರಿ, ಹಿರಿಯ ಕಾಂಗ್ರೆಸ್ ಮುಖಂಡ ಸುಬ್ರಾಯ ಬಲ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಸ್ವಾಗತಿಸಿದರು. ಮಹಮ್ಮದ್ ಕುಂಞಿ ಕಾವು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.