ಕಡಬ ಮಿನಿ ವಿಧಾನಸೌಧದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರ ಕಛೇರಿ ಉದ್ಘಾಟನೆ

0

ಕಡಬ: ಸುಳ್ಯ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಡಬದ ನೂತನ ಕಛೇರಿಯನ್ನು ಕಡಬ ಮಿನಿ ವಿಧಾನ ಸೌಧದಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.
ಬೆಳಿಗ್ಗೆ ಗಣಹೋಮ, ಪೂಜೆ ನಡೆಸಿದ ಬಳಿಕ ಉದ್ಘಾಟನೆ ನೆರವೇರಿಸಲಾಯಿತು. ಜನಸಂಘ ಹಾಗೂ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಹರಿಶ್ಚಂದ್ರ ರೈ ಪಟ್ಟೆಗುತ್ತು ಪೆರಾಬೆ ಹಾಗೂ ತನಿಯಪ್ಪ ಮಜಗುಡ್ಡೆ ಕಡಬ, ಕುಶಾಲಪ್ಪ ಗೌಡ ಕುಡಾಲ ಇವರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಸಿದರು.

ಕಛೇರಿಯಲ್ಲಿ ಕಾರ್ಯಾರಂಭ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ 94 ಸಿ ಹಾಗೂ ಅಕ್ರಮ ಸಕ್ರಮದಡಿಯಲ್ಲಿ ಭೂಮಿ ಮಂಜೂರಾದ 150 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನೆರವೇರಿಸಿ ಮಾತನಾಡಿ ಕಡಬದಲ್ಲಿ ಶಾಸಕರ ಕಛೇರಿ ತೆರೆಯಬೇಕು ಎನ್ನುವ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ, ಕಚೇರಿ ಮುಖಾಂತರ ಸಮಾಜದ ಕಟ್ಟ ಕಡೆಯ ಜನತೆಗೆ ಸರಕಾರದ ಸವಲತ್ತುಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಶಾಸಕರನ್ನು ಹುಡುಕಿಕೊಂಡು ಸುಳ್ಯಕ್ಕೆ ಜನ ಅಲೆದಾಟ ಮಾಡುವ ಅವಶ್ಯಕತೆಯಿಲ್ಲ. ತಿಂಗಳಲ್ಲಿ ಎರಡು ದಿನ ಪೂರ್ತಿಯಾಗಿ ನಾನು ಇಲ್ಲಿ ಲಭ್ಯವಿರುತ್ತೇನೆ, ಕಡಬದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ದಳಾಗಿದ್ದೇನೆ ಎಂದು ಹೇಳಿದರು. ಜನ ಸರಕಾರಿ ಕೆಲಸಗಳಿಗೆ ಸುಖಾ ಸುಮ್ಮನೆ ಅಲೆದಾಟ ಮಾಡುವುದನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಶಾಸಕಿ ಹೇಳಿದರು.

ಕಡಬ ತಹಸೀಲ್ದಾರ್ ರಮೇಶ್ ಬಾಬು ಮಾತನಾಡಿ ಶಾಸಕರು ಕಡಬದಲ್ಲಿ ಲಭ್ಯವಿರುವುದರಿಂದ ಇಲ್ಲಿನ ಕೆಲಸಕಾರ್ಯಗಳಿಗೆ ವೇಗ ದೊರೆಯಲಿದೆ ಎಂದರು. ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥಾರಾಮ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಪತಹಸೀಲ್ದಾರ್‌ರಾದ ಗೋಪಾಲ್ ಕಲ್ಲುಗುಡ್ಡೆ, ಮನೋಹರ ಕೆ.ಟಿ , ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ವೆಂಕಟ್ ವಳಲಂಬೆ, ಪುಲಸ್ತ್ಯಾ ರೈ, ರಾಕೇಶ್ ರೈ ಕೆಡೆಂಜಿ, ಭಾಸ್ಕರ ಗೌಡ ಇಚ್ಲಂಪಾಡಿ, ಸುಬೋಧ್ ರೈ ಮೇನಾಲ, ವಾಡ್ಯಪ್ಪ ಗೌಡ ಎರ್ಮಾಯಿಲ್, ರಮೇಶ್ ಕಲ್ಪುರೆ, ಶ್ರೀ ಕೃಷ್ಣ ಎಂ.ಆರ್, ಸೀತಾರಾಮ ಗೌಡ ಪೊಸವಳಿಕೆ, ಶುಭಧಾ ಎಸ್ ರೈ, ಆಶಾ ತಿಮ್ಮಪ್ಪ, ಜಯಂತಿ ಆರ್ ಗೌಡ, ಕುಸುಮಾ ಪಿ.ವೈ, ತೇಜಸ್ವಿನಿ ಕಟ್ಟಪುಣಿ, ಸರೋಜಿನಿ ಬಿಳಿನೆಲೆ, ಇಂದಿರಾ ಬಿ.ಕೆ, ಪ್ರಕಾಶ್ ಎನ್.ಕೆ, ಎ.ಪಿ.ಗಿರೀಶ್, ಶಿವಪ್ರಸಾದ್ ರೈ ಮೈಲೇರಿ, ಮಧುಸೂಧನ ಕೊಂಬಾರು ಮತ್ತಿತರರು ಉಪಸ್ಥಿತರಿದ್ದರು. ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here